ಸಂಸಾರ ಹಾಳು ಮಾಡಿದವನ ಸಂಹಾರ: ಕೊಲೆ ಮಾಡಿ ಫೇಸ್ಬುಕ್​​ನಲ್ಲಿ ತಪ್ಪೊಪ್ಪಿಕೊಂಡ ಖದೀಮರು

ಕೋಲಾರದಲ್ಲಿ ನಡೆದ ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಜನವರಿ 27 ರಂದು ನಡೆದ ಈ ಹತ್ಯೆಯ ಆರೋಪಿಗಳು ಫೇಸ್‌ಬುಕ್ ಮೂಲಕ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಸಂಸಾರ ಹಾಳು ಮಾಡಿದವನ ಸಂಹಾರ: ಕೊಲೆ ಮಾಡಿ ಫೇಸ್ಬುಕ್​​ನಲ್ಲಿ ತಪ್ಪೊಪ್ಪಿಕೊಂಡ ಖದೀಮರು
ಬಂಧಿತರು
Image Credit source: tv9 kannada
Edited By:

Updated on: Feb 01, 2026 | 4:37 PM

ಕೋಲಾರ, ಫೆಬ್ರವರಿ 01: ವ್ಯಕ್ತಿಯೋರ್ವನನ್ನು ಕೊಲೆ (murder) ಮಾಡಿ ಬಳಿಕ ಫೇಸ್‌ಬುಕ್​​ನಲ್ಲಿ ಆರೋಪಿ ತಪ್ಪೊಪ್ಪಿಕೊಂಡ ವಿಚಿತ್ರ ಘಟನೆಯೊಂದು ಕೋಲಾರದಲ್ಲಿ (Kolar) ನಡೆದಿದೆ. ಜನವರಿ 27ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಲ್ಲೇಶ್​​ ಕೊಲೆಯಾದ ವ್ಯಕ್ತಿ. ಬಿಂದುಕುಮಾರ್ (20) ಕಿರಣ್​ (19) ಮತ್ತು ಅಕ್ಷಯ್​ (20) ಬಂಧಿತರು. ಹಳೆ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಫೇಸ್‌ಬುಕ್​​ನಲ್ಲಿ ವಿಡಿಯೋ ಮಾಡಿದ್ದರು. ಸದ್ಯ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು? 

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬಳಿ ಜನವರಿ 27ರ ರಾತ್ರಿ ನರಸಾಪುರ ಗ್ರಾಮದ ಯಲ್ಲೇಶ್​ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ರಾಜಕೀಯ ಮುಖಂಡರ ಜೊತೆಗೆ ಗುರುತಿಸಿಕೊಂಡಿದ್ದ ಯಲ್ಲೇಶ್​, ಕೊಲೆಗೆ ಕಾರಣ ಏನು ಅನ್ನೋದನ್ನು ಹುಡುಕಲು ಹೊರಟ ಪೊಲೀಸರಿಗೆ ಅಲ್ಲೊಂದು ಅಕ್ರಮ ಸಂಬಂಧ ಸೇರಿದಂತೆ ಒಂದು ಕುಟುಂಬದ ಹೆಸರು ಕೇಳಿ ಬಂದಿತ್ತು.

ಇದನ್ನೂ ಓದಿ: ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ಆರಂಭದಲ್ಲಿ ಯಲ್ಲೇಶ್​​ನನ್ನು ನರಸಾಪುರ ಗ್ರಾಮದ ಸಂತೋಷ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿತ್ತು. ಕಾರಣ ಯಲ್ಲೇಶ್, ಸಂತೋಷ್​ನ ಹೆಂಡತಿಯನ್ನು ಕರೆದುಕೊಂಡು ಹೋಗಿ ಆಕೆಯೊಂದಿಗೆ  ಕಳೆದ ಆರೇಳು ವರ್ಷಗಳಿಂದ ಸಂಸಾರ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ಸಂತೋಷ್, ಯಲ್ಲೇಶ್ ನನ್ನು ಮುಗಿಸುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದ, ಹಾಗಾಗಿ ಅವನೇ ಕೊಲೆ ಮಾಡಿದ್ದಾನೆ ಎಂದುಕೊಂಡಿದ್ದರು. ಆದರೆ ಸಂತೋಷ್​ ಕೊಲೆಯಾದ ಮರುದಿನವೇ ಒಡಿಸ್ಸಾದಲ್ಲಿದ್ದುಕೊಂಡು ಫೇಸ್‌ಬುಕ್​ನಲ್ಲಿ ವಿಡಿಯೋ ಮಾಡಿ ನನಗೂ ಕೊಲೆಗೂ ಸಂಬಂಧವಿಲ್ಲ. ಬದಲಾಗಿ ನನ್ನ ಮಗ ಬಿಂದುಕುಮಾರ್​ ಕೊಲೆ ಮಾಡಿರುವ ಅನುಮಾನವಿದೆ ಎಂದಿದ್ದ.

ಯಲ್ಲೇಶ್​​ ನನ್ನ ಸಂಸಾರವನ್ನು ಹಾಳು ಮಾಡಿದ್ದ. ಜೊತೆಗೆ ನನ್ನ ಮಗಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿ ಆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಹೀಗಾಗಿ ನನ್ನ ಮಗನೇ ಕೊಲೆ ಮಾಡಿರುವ ಅನುಮಾನವಿದೆ ಎಂದು ಹೇಳಿದ್ದ. ಆದರೆ ಸಂತೋಷ್​ನನ್ನು ಬಿಟ್ಟು ಹೋಗಿದ್ದ ಆತನ ಹೆಂಡತಿ ಮಾತ್ರ ಸಂತೋಷ್​​ನೇ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಫೇಸ್‌ಬುಕ್​ ಲೈವ್ ಕೊಲೆ ಮಾಡಿರುವುದಾಗಿ ಒಪ್ಪಿಗೆ

ಇನ್ನು ಇದಾದ ಕೆಲವೇ ನಿಮಿಷಗಳಲ್ಲಿ ಸಂತೋಷ್​​​​ ಮಗ ಬಿಂದುಕುಮಾರ್ ಫೇಸ್‌ಬುಕ್​ ಲೈವ್​​ ಬಂದು ಯಲ್ಲೇಶ್​ನನ್ನು ತಾನೇ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ. ಅಲ್ಲದೆ ಅವನು ತನ್ನ ತಂಗಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನನ್ನ ತಾಯಿಯನ್ನು ಪುಸಲಾಯಿಸಿ ತನ್ನ ತಂದೆಯಿಂದ ದೂರ ಮಾಡಿದ್ದ. ಅಲ್ಲದೆ ನನ್ನನ್ನು ಕೊಲೆ ಮಾಡುವ ಪ್ಲ್ಯಾನ್​​ ಮಾಡಿದ್ದ ಅನ್ನೋ ಕಾರಣಕ್ಕೆ ನಾನು ಒಂದು ಪುಟ್ಟ ಗ್ಯಾಂಗ್ ಕಟ್ಟಿಕೊಂಡು ಅವನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದ. ಅಷ್ಟೇ ಅಲ್ಲದೆ ನಾವು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಶರಣಾಗುತ್ತೇವೆಂದು ಹೇಳಿ ನಂತರ ಮೊಬೈಲ್ ಸ್ವಿಚ್ ಆಫ್​ ಮಾಡಿಕೊಂಡಿದ್ದರು.

ಇನ್ನು ಕೊಲೆ ಮಾಡಿದ್ದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೂ ಕೊಲೆ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಕೊಲೆ ಮಾಡಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದವರ ಬಂಧನಕ್ಕಾಗಿ ಬಲೆಬೀಸಿದ್ದರು. ಆರೋಪಿಗಳು ಬೆಂಗಳೂರು ಬಳಿ ತಲೆಮರೆಸಿಕೊಂಡಿರುವುದು ತಿಳಿದು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಸಂತೋಷ್​ನ ಮಗ ಬಿಂದುಕುಮಾರ್​ ಹಾಗೂ ಆತನ ಸ್ನೇಹಿತರಾದ ಕಿರಣ್​, ಅಕ್ಷಯ್ ಎಂಬುವರನ್ನು ಬಂಧಿಸಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.  ಇನ್ನು ಕೊಲೆಗೆ ಸಹಕಾರ ನೀಡಿದ ತಂದೆ ಸಂತೋಷ್​ ಕೂಡ ಈ ಕೊಲೆ ಪ್ರಕರಣದಲ್ಲಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ ‘ಕೈ’ ಮುಖಂಡನ ಪುತ್ರನಿಂದ ನಡೀತಾ ಹಲ್ಲೆ?

ಅತ್ತ ಗಂಡನನ್ನು ಬಿಟ್ಟು ಮತ್ತೊಬ್ಬನ ಜೊತೆಗಿದ್ದ ತಾಯಿ, ಹೆಂಡಿಯಿಂದ ದೂರಾದ ಗಂಡ, ತಂದೆ ತಾಯಿಯಿಂದ ಸಂಸ್ಕಾರ ಕಲಿಯದ ಮಗ, ಎಲ್ಲರ ಬದುಕು ದಿಕ್ಕಾಪಾಲಾಗಿ ಹೋಗಿರೋದಂತು ಸುಳ್ಳಲ್ಲ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us