Chikkaballapur: ಇಂಜಿನಿಯರ್ ತೇಜಸ್ವಿನಿ ಸಾವು ಪ್ರಕರಣ: ಡೆತ್‌ನೋಟ್ ಮುಚ್ಚಿಟ್ರಾ ಚಿಕ್ಕಬಳ್ಳಾಪುರ ಪೊಲೀಸರು?
ಇದೇ ತಿಂಗಳ 23 ರಂದು ಚಿಕ್ಕಬಳ್ಳಾಪುರ ನಗರದಲ್ಲಿ ನವವಿವಾಹಿತೆ ಇಂಜನಿಯರ್ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಾವಿಗೆ ಸಂಬಂಧಪಟ್ಟಂತೆ ಮೂರು ದಿನವಾದರೂ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಉಪಾಧೀಕ್ಷಕರ ಕಛೇರಿಯ ಎದುರು ಧರಣಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ: ನಗರದ ಪ್ರತಿಷ್ಠಿತ ಚಂದ್ರು ಮಿಲ್ಟ್ರಿ ಹೋಟೆಲ್ ಮಾಲೀಕ ಲೋಹಿತ್‌ಬಾಬು ಪತ್ನಿ 25 ವರ್ಷದ ಇಂಜಿನಿಯರ್(Engineer) ತೇಜಸ್ವಿನಿ ಜೂನ್. 23ರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಗಂಡನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 498ಎ, 302, 304ಬಿ, 34 ಸೇರಿದಂತೆ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಅಕ್ಕ ಶಿಲ್ಪ ಹಾಗೂ ಮೃತಳ ಅತ್ತೆ ಕಾಂತಮ್ಮನನ್ನು ಇನ್ನೂ ಪೊಲೀಸರು ಬಂಧಿಸಿಲ್ಲ. ಇದರಿಂದ ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿದಿದ್ದು, ಮೃತಳಿಗೆ ನ್ಯಾಯ ಕೊಡಿಸಬೇಕೆಂದು ಆಕೆಯ ಪೋಷಕರು ಚಿಕ್ಕಬಳ್ಳಾಪುರ ಡಿವೈಎಸ್ಪಿ ಕಛೇರಿ ಮುಂದೆ ಧರಣಿ ನಡೆಸಿದ್ದಾರೆ.
ಇನ್ನು ಘಟನೆ ನಡೆದು 4 ದಿನಗಳಾಗಿದ್ದರೂ, ಪೊಲೀಸರು ಪ್ರಕರಣದ ಆರೋಪಿತ ಮಹಿಳೆಯರನ್ನು ಬಂಧಿಸಿಲ್ಲ. ಇದೀಗ ಇದು ಹಲವು ಅನುಮಾನಗಳು ವ್ಯಕ್ತವಾಗಿದ್ದು, ಪೊಲೀಸರು ರಾಜಕೀಯ ಒತ್ತಡಗಳಿಗೆ ಮಣಿದು ಸೂಕ್ತ ತನಿಖೆ ನಡಸುತ್ತಿಲ್ಲ. ಆರೋಪಿಗಳ ಇರುವಿಕೆಯ ಬಗ್ಗೆ ನಮ್ಮನ್ನೇ ಪ್ರಶ್ನಿಸುತ್ತಾರೆ. ಇದರಿಂದ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆಯೆಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದ ತೇಜಸ್ವಿನಿ
ಮೃತ ಇಂಜಿನಿಯರ್ ತೇಜಸ್ವಿನಿ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಡೆತ್‌ನೋಟನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಮೃತಳ ಸಂಬಂಧಿಗಳಿಗೆ ಡೆತ್‌ನೋಟ್ ತೋರಿಸಿಲ್ಲ. ಅದರ ವಿವರಗಳನ್ನು ತಿಳಿಸುತ್ತಿಲ್ಲವಂತೆ. ಇದರಿಂದ ಪೊಲೀಸರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ಇಬ್ಬರು ಮಹಿಳೆಯರನ್ನು ಬಂಧಿಸದ ಕಾರಣ ಮೃತಳ ಸಂಬಂಧಿಕರು ಧರಣಿ ನಡೆಸಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಚಿಕ್ಕಬಳ್ಳಾಪುರ ಡಿವೈಎಸ್ಪಿ ಕಛೇರಿ ಮುಂದೆ ಅಳಲನ್ನ ತೋಡಿಕೊಂಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ