ಮಕ್ಕಳ ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ
ಹುಬ್ಬಳ್ಳಿಯ ತೊರವಿ ಹಕ್ಕಲ ಗ್ರಾಮದಲ್ಲಿ ಮಕ್ಕಳ ಜಗಳ ಬಿಡಿಸಲು ಬಂದ ತಾಯಿಯನ್ನು ಕೊಲೆ ಮಾಡಲಾಗಿದೆ. ಪದ್ಮಾ ಚಲೂರಿ (46) ಮೃತರು. ಅವರ ಮಗ ಮಂಜುನಾಥ ಆರೋಪಿ. ಹಣದ ವಿಚಾರದಲ್ಲಿ ಮಕ್ಕಳ ನಡುವೆ ಜಗಳ ನಡೆದಿತ್ತು. ತಾಯಿ ಜಗಳ ಬಿಡಿಸಲು ಬಂದಾಗ ಮಂಜುನಾಥ ಕಿಟಕಿಯ ಗಾಜಿನಿಂದ ಅವರ ಹೊಟ್ಟೆಗೆ ಇರಿದಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ, ಮೇ 30: ಮಕ್ಕಳ ಜಗಳ ಬಿಡಿಸಲು ಬಂದಿದ್ದ ತಾಯಿಯನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ತೊರವಿ ಹಕ್ಕಲ ಗ್ರಾಮದಲ್ಲಿ ನಡೆದಿದೆ. ಪದ್ಮಾ ಚಲೂರಿ (46) ಮೃತ ದುರ್ದೈವಿ. ಮಂಜುನಾಥ ಕೊಲೆ ಮಾಡಿದ ಆರೋಪಿ. ಸಹೋದರರಾದ ಮಂಜುನಾಥ್ ಮತ್ತು ಲಕ್ಷ್ಮಣ ಕಟಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಹೇರ್ ಕಟಿಂಗ್ ಮಾಡಿದ ಹಣ ಹಂಚಿಕೆ ವಿಚಾರದಲ್ಲಿ ಮಂಜುನಾಥ್ ಮತ್ತು ಲಕ್ಷ್ಮಣ ಜಗಳವಾಡುತ್ತಿದ್ದರು.
ಜಗಳ ಬಿಡಿಸಲು ಬಂದ ತಾಯಿ ಪದ್ಮಾ ಅವರ ಹೊಟ್ಟೆಗೆ ಪುತ್ರ ಮಂಜುನಾಥ ಕಿಟಕಿಯ ಗಾಜಿನಿಂದ ಇರಿದಿದ್ದಾನೆ. ಗಾಯಾಳು ಪದ್ಮಾರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಪದ್ಮಾ ನರಳಾಡಿ ಜೀವಬಿಟ್ಟ ಬಿಟ್ಟಿದ್ದಾರೆ. ಇನ್ನು, ಆರೋಪಿ ಮಂಜುನಾಥ ಮತ್ತು ಲಕ್ಷ್ಮಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಪ್ರವಹಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ದುರ್ಮರಣ
ಚಿಕ್ಕಬಳ್ಳಾಪುರ: ವಿದ್ಯುತ್ ಪ್ರವಹಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಕಿರುಗಂಬಿ ಗ್ರಾಮದಲ್ಲಿ ನಡೆದಿದೆ. ಮಾದೇಶ್ (16) ಮೃತ ದುರ್ದೈವಿ. ಮಾದೇಶ್, ಡ್ರೈನೇಜ್ ಪೈಪ್ನಲ್ಲಿ ಸಿಲುಕಿದ್ದ ಕಬ್ಬಿಣದ ಕಂಬಿ ಹೊರಗೆ ಎಳೆಯುತ್ತಿದ್ದನು. ಆದರೆ, ಈ ಕಬ್ಬಿಣದ ಕಂಬಿ ವಿದ್ಯುತ್ ತಂತಿಗೆ ತಗುಲಿತ್ತು. ಕಬ್ಬಣಿದ ಕಂಬಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನು ತಿಳಿಯದೆ ಮಾದೇಶ್ ಕಂಬಿ ಮುಟ್ಟಿದಾಗ ವಿದ್ಯುತ್ ಶಾಕ್ ಹೊಡೆದು, ಮೃತಪಟ್ಟಿದ್ದಾನೆ. ಮಾದೇಶ್, ಗುರುವಾರವಷ್ಟೇ ಎಸ್ಎಸ್ಎಲ್ಸಿ ಮರುಪರೀಕ್ಷೆ ಬರೆದಿದ್ದನು. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಷ ಸೇವಿಸಿ, ಮಹಿಳೆ ಹಾಗೂ ಅವಿವಾಹಿತ ಯುವಕ ಸಾವು
ಶಿವಮೊಗ್ಗ: ವಿಷ ಸೇವಿಸಿ, ಮಹಿಳೆ ಹಾಗೂ ಅವಿವಾಹಿತ ಯುವಕ ಮೃತಪಟ್ಟಿರುವ ಘಟನೆ ಶಿವಮೊಗ್ಗದ ರಿಪ್ಪನ್ ಪೇಟೆ ಸಮೀಪದ ತಮ್ಮಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಸುಜಾತಾ (33) ಹಾಗೂ ಸಚಿನ್ (25) ಮೃತರು. ಮೃತ ಸುಜಾತ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಮ್ಮಡಿಕೊಪ್ಪ ಗ್ರಾಮದ ನಿವಾಸಿಯಾಗಿದ್ದರು. ಮೃತ ಶಿವಮೊಗ್ಗ ತಾಲೂಕಿನ ಆಯನೂರು ಕೋಟೆ ನಿವಾಸಿಯಾದ್ದರು. ಸುಜಾತ ಅವರಿಗೆ 14 ವರ್ಷದ ಹಿಂದೆ ವಿವಾಹವಾಗಿದ್ದು, ಎರಡು ವರ್ಷದ ಹಿಂದೆ ಪತಿ ನಾಪತ್ತೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಸುಜಾತಾ ಒಬ್ಬಂಟಿಯಾಗಿ ತಮ್ಮಡಿಕೊಪ್ಪದಲ್ಲಿ ವಾಸವಾಗಿದ್ದರು. ಈ ನಡುವೆ ಟೈಲ್ಸ್ ಕೆಲಸ ಮಾಡುವ ಸಚಿನ್ ಹಾಗೂ ಸುಜಾತಾ ನಡುವೆ ಗೆಳೆತನ ಬೆಳೆದಿದೆ. ಗೆಳೆತನದ ಹಿನ್ನೆಲೆಯಲ್ಲಿ ಸಚಿನ್ ಆಗಾಗ್ಗೆ ಸುಜಾತಾ ಅವರ ಮನೆಗೆ ಬಂದು ಹೋಗುತ್ತಿದ್ದರು. ಸಚಿನ್ ಕಳೆದೊಂದು ವಾರದಿಂದ ಸುಜಾತ ಅವರ ಮನೆಯಲ್ಲಿ ನೆಲೆಸಿದ್ದರು.
ಇದನ್ನೂ ಓದಿ: ಗ್ಯಾಸ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ
ಈ ವಿಚಾರವಾಗಿ ಸುಜಾತ ಸಹೋದರಿ ಪ್ರಶ್ನಿಸಿದ್ದರು. ತಮ್ಮ ಗೆಳೆತನ ಬಹಿರಂಗಗೊಂಡಿದ್ದಕ್ಕೆ ವಿಚಲಿತರಾಗಿದ್ದ ಸುಜಾತಾ ಹಾಗೂ ಸಚಿನ್ ಗಾಬರಿಗೊಂಡು, ಒಟ್ಟಿಗೆ ವಿಷ ಸೇವಿಸಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.






