KCET Results 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ಇಲ್ಲಿದೆ ವಿವರ
ಕರ್ನಾಟಕ ಸಿಇಟಿ ಫಲಿತಾಂಶ 2025: ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಅದನ್ನು ತಿಳಿಯುವ ಸಮಯ ಬಂದಿದೆ. ಕಳೆದ ಕೆಲವು ದಿನಗಳಿಂದ ಸಿಇಟಿ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಕಾತರದಿಂದ ಇದ್ದರು. ಇದೀಗ ಉನ್ನತ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟಿಸಿದ್ದಾರೆ. ಆನ್ಲೈನ್ನಲ್ಲಿಯೂ ಫಲಿತಾಂಶ ತಿಳಿಯಬಹುದಾಗಿದೆ.

ಬೆಂಗಳೂರು, ಮೇ 24: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ (KCET Results 2025) ಫಲಿತಾಂಶ ಕೊನೆಗೂ ಪ್ರಕಟವಾಗಿದೆ. ಫಲಿತಾಂಶ ಪ್ರಕಟವಾಗಬಹುದು ಎಂದು ಈ ವಾರ ಆರಂಭದಿಂದಲೂ ವಿದ್ಯಾರ್ಥಿಗಳು ಕಾಯುತ್ತಿದ್ದರು. ಇದೀಗ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ (MC Sudhakar) ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದರು. ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಸಚಿವ ಸುಧಾಕರ್ ಹೇಳಿದರು.
ಸಿಇಟಿ ವಿವಿಧ ಸೆಕ್ಷನ್ಗಳ ರ್ಯಾಂಕಿಂಗ್ ವಿವರ ಇಲ್ಲಿದೆ;
ಎಂಜಿನಿಯರಿಂಗ್
ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್ಇ ಶಾಲೆಯ ಭವೇಶ್ ಜಯಂತಿ ಮೊದಲ ರ್ಯಾಂಕ್ ಗಳಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ಇದರ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ ಎರಡನೇ ರ್ಯಾಂಕ್ ಗಳಿಸಿದ್ದಾರೆ ಎಂದು ಸಚಿವರು ತಿಳಿಸಿದರು. ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ್ಯಾಂಕ್ ಗಳಿಸಿದ್ದಾರೆ.
ಅಗ್ರಿಕಲ್ಚರ್
ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಸ್ಥಾನ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ಸ್ಥಾನ ಗಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ನರ್ಸಿಂಗ್
ಯಲಹಂಕ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಹೆಚ್ಎಸ್ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಪಶು ವೈದ್ಯಕೀಯ
ಯಲಹಂಕದ ನಾರಾಯಣ ಇ-ಟೆಕ್ನೋ ಕಾಲೇಜಿನ ಹರೀಶ್ ರಾಜ್ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಹೆಚ್ಎಸ್ಆರ್ ಲೇಔಟ್ನ ಆತ್ರೇಯ ನ್ಯಾಷನಲ್ ಪಬ್ಲಿಕ್‌ಸ್ಕೂಲ್ ವಿದ್ಯಾರ್ಥಿ ಆತ್ರೇಯ ದ್ವಿತೀಯ ಹಾಗೂ ಮಂಗಳೂರಿನ ವಳಚ್ಚಿಲ್ನ ಎಕ್ಸ್ಪರ್ಟ್ ಕಾಲೇಜಿನ ಶಾಪಲ್ ಶೆಟ್ಟಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಬಿ ಫಾರ್ಮ್ ಟಾಪರ್ಸ್
- ಪ್ರಥಮ – ಆತ್ರೆಯಾ ವೆಂಕಟಚಲಂ
- ದ್ವಿತೀಯ – ಭವೇಶ್ ಜಯಂತಿ
- ತೃತೀಯ – ಹರೀಶ್ ರಾಜ್ .ಡಿ.ವಿ
ವೆಟರ್ನರಿ ಪ್ರಾಕ್ಟಿಕಲ್
- ಪ್ರಥಮ – ರಕ್ಷಿತಾ.ವಿ.ಪಿ
- ದ್ವಿತೀಯ – ನಂದನ್
- ತೃತೀಯ – ಭುವನೇಶ್ವರಿ
ಜನಿವಾರ ತೆಗೆಸಿದ್ದ ಪ್ರಕರಣ: ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ ಎಂದ ಸುಧಾಕರ್
ಸಿಇಟಿ ಪರೀಕ್ಷೆ ವೇಳೆ ನಡೆದಿದ್ದ ಜನಿವಾರ ತೆಗೆಸಿದ್ದ ವಿಚಾರವನ್ನು ಫಲಿತಾಂಶ ಪ್ರಕಟಿಸುವ ವೇಳೆ ಉಲ್ಲೇಖಿಸಿದ ಸಚಿವ ಸುಧಾಕರ್, ಆ ಘಟನೆ ಉದ್ದೇಶಪೂರ್ವಕ ಆಗಿದ್ದಲ್ಲ. ಸಿಬ್ಬಂದಿಯ ಯಡವಟ್ಟಿನಿಂದ ಆಗಿದೆ. ಆದರೆ, ಆ ವಿಚಾರದಲ್ಲಿ ಬೀದರ್ನ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ನ್ಯಾಯ ಒದಗಿಸಿದ್ದೇವೆ ಎಂದರು. ವಿದ್ಯಾರ್ಥಿಯ ಹಾಗೂ ಆತನ ಪೋಷಕರ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಪಡೆದು, ಅವರ ಅಭಿಪ್ರಾಯದ ಮೇರೆಗೆ ಸರಾಸರಿ ಅಂಕ ಹಂಚಿಕೆ ಮಾಡುವ ಮೂಲಕ ರ್ಯಾಂಕ್ ನೀಡಲಾಗಿದೆ. ಆತನಿಗೆ 2ಲಕ್ಷದ 6 ಸಾವಿರ ರ್ಯಾಂಕ್ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಕೆಸಿಇಟಿ ಫಲಿತಾಂಶ ಬಂದ ನಂತರ ಮುಂದೇನು? ಯಾವ ಕೋರ್ಸ್ ಆಯ್ಕೆ ಮಾಡಬೇಕು?
ಶಿಕ್ಷಣ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Sat, 24 May 25