NEET UG Paper Leak: ನೀಟ್ ಹಗರಣ ಬಯಲಿಗೆಳೆದ ಹಾಸ್ಟೆಲ್ ಮಾಲೀಕ; ಕೋಟಿ ಕೋಟಿ ಹಗರಣಕ್ಕೆ ಬ್ರೇಕ್ ಹಾಕಿದ ಒಂದು ವಾಟ್ಸಾಪ್ ಸಂದೇಶ!

ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ರಾಜಸ್ಥಾನದ ಸೀಕರ್ ಜಿಲ್ಲೆಯ ಹಾಸ್ಟೆಲ್ ಮಾಲೀಕರೊಬ್ಬರ ಸಮಯಪ್ರಜ್ಞೆ ಅಡಗಿದೆ. ಪೊಲೀಸರ ನಿರ್ಲಕ್ಷ್ಯದ ನಡುವೆಯೂ, ಅವರು ಎನ್‌ಟಿಎಗೆ ಸಾಕ್ಷ್ಯ ಕಳುಹಿಸಿ ತನಿಖೆಗೆ ಒತ್ತಾಯಿಸಿದ್ದರು. ಇವರ ಈ ದಿಟ್ಟ ನಿರ್ಧಾರ ಮತ್ತು ಪ್ರಾಮಾಣಿಕ ಹೋರಾಟದ ಫಲವಾಗಿ ಇಂದು ಬೃಹತ್ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲ ಪತ್ತೆಯಾಗಿದ್ದು, ಲಕ್ಷಾಂತರ ಅರ್ಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ನ್ಯಾಯ ಸಿಗುವಂತಾಗಿದೆ.

NEET UG Paper Leak: ನೀಟ್ ಹಗರಣ ಬಯಲಿಗೆಳೆದ ಹಾಸ್ಟೆಲ್ ಮಾಲೀಕ; ಕೋಟಿ ಕೋಟಿ ಹಗರಣಕ್ಕೆ ಬ್ರೇಕ್ ಹಾಕಿದ ಒಂದು ವಾಟ್ಸಾಪ್ ಸಂದೇಶ!
ನೀಟ್ ಹಗರಣ ಬಯಲಿಗೆಳೆದ ಹಾಸ್ಟೆಲ್ ಮಾಲೀಕ
Image Credit source: gemini ai

Updated on: May 15, 2026 | 3:34 PM

ಸೀಕರ್, ರಾಜಸ್ಥಾನ: ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನೀಟ್ (NEET-UG) ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ಇಂದು ಪ್ರಶ್ನೆಗಳು ಎದ್ದಿರುವಾಗ, ರಾಜಸ್ಥಾನದ ಸೀಕರ್ ಜಿಲ್ಲೆಯ ಹಾಸ್ಟೆಲ್ ಮಾಲೀಕರೊಬ್ಬರು ದೇಶದ “ರಿಯಲ್ ಹೀರೋ” ಆಗಿ ಹೊರಹೊಮ್ಮಿದ್ದಾರೆ. ಪೊಲೀಸರ ಉದಾಸೀನತೆ ಮತ್ತು ವ್ಯವಸ್ಥೆಯ ಅಡೆತಡೆಗಳ ನಡುವೆಯೂ ಎದೆಗುಂದದ ಇವರ ಹೋರಾಟ, ಇಂದು ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ.

ಟ್ವಿಸ್ಟ್ ಕೊಟ್ಟ ವಾಟ್ಸಾಪ್ ಮೆಸೇಜ್:

ಎಲ್ಲವೂ ಆರಂಭವಾಗಿದ್ದು ಕಳೆದ ಮೇ 2ರ ರಾತ್ರಿ. ಕೇರಳದಲ್ಲಿ ವೈದ್ಯಕೀಯ(MBBS) ಶಿಕ್ಷಣ ಪಡೆಯುತ್ತಿರುವ ಮಗ, ಸೀಕರ್‌ನಲ್ಲಿ ಹಾಸ್ಟೆಲ್ ನಡೆಸುತ್ತಿರುವ ತನ್ನ ತಂದೆಗೆ ವಾಟ್ಸಾಪ್ ಮೂಲಕ ಒಂದು ಪಿಡಿಎಫ್ (PDF) ಫೈಲ್ ಕಳುಹಿಸಿದ್ದನು. “ಇದು ನಾಳಿನ ಪರೀಕ್ಷೆಯ ‘ಗೆಸ್ ಪೇಪರ್’ ಇರಬಹುದು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಓದಲು ಹೇಳಿ” ಎಂಬುದು ಮಗನ ಮುಗ್ಧ ಆಶಯವಾಗಿತ್ತು. ಆದರೆ, ಆ ಒಂದು ಫೈಲ್ ಅಸಲಿ ಪರೀಕ್ಷೆಯ ಹಣೆಬರಹವನ್ನೇ ಬದಲಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಸತ್ಯ ಶೋಧನೆಯ ಹಾದಿ:

ಮರುದಿನ ಬೆಳಿಗ್ಗೆ ಹಾಸ್ಟೆಲ್ ಮಾಲೀಕರು ಆ ಪತ್ರಿಕೆಯನ್ನು ಹಿಡಿದು ವಿದ್ಯಾರ್ಥಿಗಳ ಬಳಿ ಹೋದಾಗ ಅವರು ಈಗಾಗಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಬಳಿಕ ಕುತೂಹಲದಿಂದ ಆ ಪತ್ರಿಕೆಯನ್ನು ಸ್ಥಳೀಯ ರಸಾಯನಶಾಸ್ತ್ರ (Chemistry) ಶಿಕ್ಷಕರೊಬ್ಬರಿಗೆ ತೋರಿಸಿದರು. ಸಂಜೆ ಪರೀಕ್ಷೆ ಮುಗಿದು ಅಸಲಿ ಪತ್ರಿಕೆ ಕೈ ಸೇರಿದಾಗ ಶಿಕ್ಷಕರು ಬೆಚ್ಚಿಬಿದ್ದಿದ್ದರು. ಮಗ ಕಳುಹಿಸಿದ್ದ ಪತ್ರಿಕೆಯಲ್ಲಿದ್ದ 135 ಪ್ರಶ್ನೆಗಳು ಅಸಲಿ ಪರೀಕ್ಷೆಯಲ್ಲಿ ಯಥಾವತ್ತಾಗಿ ಬಂದಿದ್ದವು. ಇದು ಕೇವಲ ಕಾಕತಾಳೀಯವಾಗಿರದೆ, ವ್ಯವಸ್ಥಿತವಾಗಿ ನಡೆದ “ಪೇಪರ್ ಲೀಕ್” ಎಂಬುದು ಸಾಬೀತಾಗಿತ್ತು.

ಪೊಲೀಸರ ನಿರಾಕರಣೆ:

ತಮ್ಮ ಬಳಿ ಇದ್ದ ಸಾಕ್ಷ್ಯಗಳೊಂದಿಗೆ ಹಾಸ್ಟೆಲ್ ಮಾಲೀಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದರು. ಆದರೆ ಪೊಲೀಸರು ಸಹಾಯ ಮಾಡುವ ಬದಲು, “ಪರೀಕ್ಷೆ ರದ್ದು ಮಾಡಿಸುವ ಉದ್ದೇಶದಿಂದ ನೀವು ಸುಳ್ಳು ಹೇಳುತ್ತಿದ್ದೀರಿ” ಎಂದು ದೂರುದಾರರನ್ನೇ ದಬಾಯಿಸಿ ವಾಪಸ್ ಕಳುಹಿಸಿದ್ದರು. ಈ ಹಂತದಲ್ಲಿ ಯಾರಾದರೂ ಧೃತಿಗೆಡುವುದು ಸಹಜ, ಆದರೆ ಈ ಹಾಸ್ಟೆಲ್ ಮಾಲೀಕ ಮಾತ್ರ ಹಿಂದೆ ಸರಿಯಲಿಲ್ಲ.

ತನಿಖೆಯ ಕಿಚ್ಚು ಹಚ್ಚಿದ ಇಮೇಲ್:

ಪೊಲೀಸರು ಕೈಬಿಟ್ಟರೂ ಹೋರಾಟ ನಿಲ್ಲಿಸದ ಅವರು, ಸೋರಿಕೆಯಾದ ಪತ್ರಿಕೆ ಮತ್ತು ಅಸಲಿ ಪತ್ರಿಕೆಯ ಪ್ರತಿಗಳನ್ನು ಲಗತ್ತಿಸಿ ನೇರವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಇಮೇಲ್ ಮಾಡಿದ್ದಾರೆ. ಈ ಇಮೇಲ್ ನೀಡಿದ ಶಾಕ್‌ನಿಂದ ಎಚ್ಚೆತ್ತ ಎನ್‌ಟಿಎ ತಕ್ಷಣ ತನಿಖೆಗೆ ಆದೇಶಿಸಿತು.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ತನಿಖೆಯ ಪ್ರಮುಖ ಅಂಶಗಳು:

ರಾಜಸ್ಥಾನದ ವಿಶೇಷ ಕಾರ್ಯಾಚರಣಾ ತಂಡ (SOG) ಹಗರಣದ ಆಳಕ್ಕೆ ಇಳಿದಾಗ ಇದು ಕೇವಲ ಸೀಕರ್ ಜಿಲ್ಲೆಗೆ ಸೀಮಿತವಾಗಿರದೆ ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದವರೆಗೂ ಹಬ್ಬಿರುವುದು ಪತ್ತೆಯಾಯಿತು. ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಪ್ರಭಾವಿಗಳಿಗೆ ಮತ್ತು ಶ್ರೀಮಂತ ಅಭ್ಯರ್ಥಿಗಳಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವುದು ಬಯಲಾಯಿತು.

ಅಂತಿಮ ಜಯ ಪರೀಕ್ಷೆ ರದ್ದು:

ಸೋರಿಕೆಯಾದ ಪತ್ರಿಕೆಯ ಪ್ರಶ್ನೆಗಳಿಗೂ ಅಸಲಿ ಪತ್ರಿಕೆಗೂ ಇದ್ದ ಸಾಮ್ಯತೆಯನ್ನು ಅಲ್ಲಗಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಎನ್‌ಟಿಎ ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಹಾಸ್ಟೆಲ್ ಮಾಲೀಕರ ಈ ದಿಟ್ಟ ನಿರ್ಧಾರ ಮತ್ತು ಪ್ರಾಮಾಣಿಕ ಹೋರಾಟದ ಫಲವಾಗಿ ಇಂದು ಬೃಹತ್ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲ ಪತ್ತೆಯಾಗಿದ್ದು, ಲಕ್ಷಾಂತರ ಅರ್ಹ ವಿದ್ಯಾರ್ಥಿಗಳ ಭವಿಷ್ಯಕ್ಕೆ ನ್ಯಾಯ ಸಿಗುವಂತಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 am, Wed, 13 May 26

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us