ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಮೊದಲ ವರ್ಷದ ಪರೀಕ್ಷೆ ಪಾಸಾಗಲು ಸಿಗಲಿದೆ 5ನೇ ಅವಕಾಶ!
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಎಂಬಿಬಿಎಸ್ ಮೊದಲ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ, ಅಂದರೆ ಒಟ್ಟು 5 ಅವಕಾಶಗಳನ್ನು ನೀಡಿದೆ. ಕೋವಿಡ್-19 ಮತ್ತು ಇತರ ಸಮಸ್ಯೆಗಳಿಂದ ಅಡ್ಡಿಪಡಿಸಿದ 2019-20ರ ನಂತರದ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಇದು ಒಂದು ಬಾರಿ ಸಡಿಲಿಕೆಯಾಗಿದೆ. ಆದರೂ, ಸಂಪೂರ್ಣ ಎಂಬಿಬಿಎಸ್ ಕೋರ್ಸ್ ಅನ್ನು 10 ವರ್ಷಗಳಲ್ಲಿ ಪೂರ್ಣಗೊಳಿಸುವ ನಿಯಮ ಹಾಗೆಯೇ ಮುಂದುವರಿಯಲಿದೆ.

ಮೆಡಿಕಲ್ ಶಿಕ್ಷಣ ಪಡೆಯುತ್ತಿರುವ ಎಂಬಿಬಿಎಸ್ (MBBS) ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Commission – NMC) ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಮೊದಲ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ, ಮೊದಲ ವರ್ಷದ MBBS ಪರೀಕ್ಷೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅವಕಾಶವನ್ನು ನೀಡಲು ಆಯೋಗವು ನಿರ್ಧರಿಸಿದೆ. ಹಿಂದಿನ ನಿಯಮದಂತೆ ವಿದ್ಯಾರ್ಥಿಗಳಿಗೆ ಗರಿಷ್ಠ 4 ಅವಕಾಶಗಳನ್ನು (Attempts) ಮಾತ್ರ ನೀಡಲಾಗುತ್ತಿತ್ತು. ಆದರೆ ಹೊಸ ನಿರ್ಧಾರದ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ ತಮ್ಮ ಮೊದಲ ವರ್ಷದ ವಿಷಯಗಳನ್ನು ಕ್ಲಿಯರ್ ಮಾಡಲು ಒಟ್ಟು 5 ಅವಕಾಶಗಳು ಸಿಗಲಿವೆ.
ಯಾರಿಗೆಲ್ಲಾ ಸಿಗಲಿದೆ ಈ ಹೆಚ್ಚುವರಿ ಅವಕಾಶ?
NMC ನೀಡಿರುವ ಮಾಹಿತಿಯ ಪ್ರಕಾರ, 2019-20ರ ಶೈಕ್ಷಣಿಕ ವರ್ಷದಲ್ಲಿ ಹಾಗೂ ಆ ನಂತರ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳಿಗೆ ಈ ಸಡಿಲಿಕೆ ಅನ್ವಯಿಸಲಿದೆ. ಮೊದಲ ವರ್ಷದ ಕೋರ್ಸ್ ಪೂರ್ಣಗೊಳಿಸಲು ನಿಗದಿಪಡಿಸಲಾಗಿದ್ದ 4 ವರ್ಷಗಳ ಗಡುವನ್ನು ಮೀರಿದ ವಿದ್ಯಾರ್ಥಿಗಳು ಸಹ ಈ ವಿನಾಯಿತಿಯ ಲಾಭ ಪಡೆಯಬಹುದು. ಆದರೆ, ವಿದ್ಯಾರ್ಥಿಯ ಕಾಲೇಜು ಪ್ರವೇಶವು (Admission) ಮಾನ್ಯವಾಗಿರಬೇಕು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ವೈದ್ಯಕೀಯ ಕಾಲೇಜು ಅವರ ಪ್ರವೇಶವನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಿರಬಾರದು.
ವಿದ್ಯಾರ್ಥಿಗಳ ನಿರಂತರ ಮನವಿಗೆ ಸ್ಪಂದಿಸಿದ ಆಯೋಗ:
ಸೆಪ್ಟೆಂಬರ್ 23 ರಂದು ನಡೆದ NMCಯ 18 ನೇ ಸಭೆಯಲ್ಲಿ ಈ ಪ್ರಸ್ತಾಪದ ಕುರಿತು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. COVID-19 ಸಾಂಕ್ರಾಮಿಕ ರೋಗ, ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ವೈಯಕ್ತಿಕ ತುರ್ತು ಸಂದರ್ಭಗಳಿಂದಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ ಎಂದು ತಿಳಿಸಿ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ಹಾಗೂ ಪಾಲುದಾರರು NMCಗೆ ಸಾಲು ಸಾಲು ಅರ್ಜಿಗಳನ್ನು ಸಲ್ಲಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯೋಗವು ಈ ಸಡಿಲಿಕೆಗೆ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ವಿಶ್ವಬ್ಯಾಂಕ್ ವರದಿ 2026: AI ಬಳಕೆಯಿಂದ ಹೋಮ್‌ವರ್ಕ್‌ನಲ್ಲಿ ಹೆಚ್ಚು ಅಂಕ, ಪರೀಕ್ಷೆಯಲ್ಲಿ ಮಾರ್ಕ್ಸ್ ಕಮ್ಮಿ!
ಇದು ‘ಒಂದು ಬಾರಿಯ’ ವಿಶೇಷ ವಿನಾಯಿತಿ ಮಾತ್ರ:
ಈ ನಿರ್ಧಾರದ ಕುರಿತು NMC ಸ್ಪಷ್ಟನೆ ನೀಡಿದ್ದು, ಇದು ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ನೀಡಲಾದ ಒಂದು ಬಾರಿಯ (One-Time) ವಿಶೇಷ ವಿನಾಯಿತಿಯಾಗಿದೆ. ಇದನ್ನು ಶಾಶ್ವತ ನಿಯಮವೆಂದು ಪರಿಗಣಿಸಲಾಗುವುದಿಲ್ಲ. ಈಗಾಗಲೇ ಈ ಕ್ಷಮಾದಾನದ ಪ್ರಯತ್ನವನ್ನು (Mercy Attempt) ಬಳಸಿಕೊಂಡು ಒಟ್ಟು 5 ಅವಕಾಶಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ 6ನೇ ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
10 ವರ್ಷಗಳ ಒಳಗೆ MBBS ಕೋರ್ಸ್ ಪೂರ್ಣಗೊಳಿಸುವುದು ಕಡ್ಡಾಯ:
ಮೊದಲ ವರ್ಷದ ಪರೀಕ್ಷೆಗೆ ಹೆಚ್ಚುವರಿ ಅವಕಾಶ ನೀಡಲಾಗಿದ್ದರೂ, ಇಡೀ MBBS ಕೋರ್ಸ್ ಪೂರ್ಣಗೊಳಿಸಲು ಇರುವ ಗರಿಷ್ಠ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶ ಪಡೆದ ದಿನಾಂಕದಿಂದ ಗರಿಷ್ಠ 10 ವರ್ಷಗಳ ಒಳಗೆ ಕೋರ್ಸ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕಾಗುತ್ತದೆ. ಈ ನಿರ್ಧಾರಕ್ಕೆ ಅನುಗುಣವಾಗಿ ಅರ್ಹ ವಿದ್ಯಾರ್ಥಿಗಳ ಪ್ರಕ್ರಿಯೆಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ NMC ನಿರ್ದೇಶನ ನೀಡಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




