ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯೇ ಅಂತಿಮವಾಗುವ ಸಾಧ್ಯತೆ!
ಟಿವಿ9ಗೆ ಶಿಕ್ಷಣ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆದರೆ, ಏಪ್ರಿಲ್ 16 ರಿಂದ ಮೇ 4 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯಂತೆಯೇ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು: ಪರೀಕ್ಷಾ ವೇಳಾಪಟ್ಟಿ ಬದಲಾವಣೆಗೆ ಹೆಚ್ಚು ಮನವಿಗಳು ಬಂದಿಲ್ಲವಾದ ಕಾರಣ ಎಸ್ಎಸ್ಎಲ್‌ಸಿ (SSLC), ದ್ವಿತೀಯ ಪಿಯುಸಿ (Second PUC) ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯೇ (Exam Time table) ಅಂತಿಮವಾಗುವ ಸಾಧ್ಯತೆ ಇದೆ. ಟಿವಿ9ಗೆ ಶಿಕ್ಷಣ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆದರೆ, ಏಪ್ರಿಲ್ 16 ರಿಂದ ಮೇ 4 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯಂತೆಯೇ ನಡೆಯುವ ಸಾಧ್ಯತೆ ಇದೆ. ಶಾಲೆಗಳಲ್ಲಿ ಈಗಾಗಲೇ ಶೇ.70ರಷ್ಟು ಪಠ್ಯ ಬೋಧಿಸಲಾಗಿದೆ. ಬಾಕಿ ಉಳಿದ ಶೇ.30ರಷ್ಟು ಪಠ್ಯ ಬೇಗ ಬೋಧಿಸಲು ಸೂಚನೆ ನೀಡಲಾಗಿದೆ.
ಕೊರೊನಾ ನಡುವೆ ಎಸ್ಎಸ್ಎಲ್‌ಸಿ, ಪಿಯುಸಿ ತರಗತಿಗಳು ನಡೆಯುತ್ತಿವೆ. ಅಂದುಕೊಂಡಂತೆ ಎಲ್ಲ ಪಠ್ಯಕ್ರಮ ಪೂರ್ಣಗೊಳಿಸಿದರೆ, ತಾತ್ಕಾಲಿಕ ವೇಳಾಪಟ್ಟಿಯನ್ನೇ ಅಂತಿಮ ಮಾಡುವ ಸಾಧ್ಯತೆ ಇದೆ. ಫೆಬ್ರವರಿ 1ರವರೆಗೆ ತಕರಾರು ಸಲ್ಲಿಸುವುದಕ್ಕೆ ಅವಕಾಶವಿದೆ. ಆದರೆ ಈವರೆಗೆ ಕೇವಲ 150 ಜನರಿಂದ ಮಾತ್ರ ಮನವಿಗಳು ಬಂದಿವೆ. ಪರೀಕ್ಷೆಯ ಕೊನೇ ಹಂತದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಮಾತ್ರ ಇರುತ್ತದೆ. ಅದನ್ನು ಹೊರತುಪಡಿಸಿದರೆ ಯಾವುದೇ ಬದಲಾವಣೆ ಆಗಲ್ಲ. ಹೀಗಾಗಿ ತಾತ್ಕಾಲಿಕ ವೇಳಾಪಟ್ಟಿ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ.
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ವರ್ಷದ ರೀತಿ ಬಹು ಆಯ್ಕೆ ಪ್ರಶ್ನೆ ಇರಲ್ಲ. ಪಿಯುಸಿ ವಿದ್ಯಾರ್ಥಿಗಳಿಗೂ ಪರೀಕ್ಷೆಯಿಂದ ವಿನಾಯಿತಿ ಇರಲ್ಲ. ಸೋಂಕು ಹೆಚ್ಚಾದರೂ ಅಗತ್ಯ ಕ್ರಮ ಪಾಲಿಸಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ತರಗತಿ ಬಂದ್ ಆಗಿದಿದ್ದರೆ ಪಠ್ಯ ಮುಗಿಸಲು ತೊಂದರೆ ಆಗುತ್ತಿತ್ತು. ಆದರೆ ಯಾವುದೇ ತೊಂದರೆಗಳಿಲ್ಲದೆ ಸರಾಗವಾಗಿ ಪಾಠ ಮುಗಿಯುತ್ತಿದೆ. ಹೀಗಾಗಿ ತಾತ್ಕಾಲಿಕ ವೇಳಾಪಟ್ಟಿಯೇ ಬಹುತೇಕ ಅಂತಿಮವಾಗುವ ಸಾಧ್ಯತೆ ಇದೆ ಎಂದು ಟಿವಿ9ಗೆ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ದ್ವೀತಿಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
ಪದವಿ ಪೂರ್ವ ಶಿಕ್ಷಣ ಇಲಾಖೆ 2021-22 ನೇ ಸಾಲಿನ ದ್ವೀತಿಯ ಪಿಯುಸಿಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆ ಪ್ರಕಾರ ಏಪ್ರಿಲ್ 16ರಿಂದ ಮೇ 4ರವರೆಗೆ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದೆ. ಏಪ್ರಿಲ್ 14 ಗಣಿತ, ಏಪ್ರಿಲ್ 18 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಏ.20ರಂದು ಇತಿಹಾಸ, ಭೌತಶಾಸ್ತ್ರ, ಏಪ್ರಿಲ್ 22 ತರ್ಕಶಾಸ್ತ್ರ, ಏ.23ರಂದು ಮನಃಶಾಸ್ತ್ರ, ರಸಾಯನಶಾಸ್ತ್ರ, ಏ.25 ಅರ್ಥಶಾಸ್ತ್ರ ಪರೀಕ್ಷೆ ನಡೆಲಿದೆ.
ಇನ್ನೂ ಏ.26ರಂದು ಹಿಂದಿ, ಏಪ್ರಿಲ್ 28 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಏ.29 ಕನ್ನಡ, ಏ.30ರಂದು ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮೇ 2ರಂದು ಭೂಗೋಳ ಶಾಸ್ತ್ರ ಹಾಗೂ ಜೀವಶಾಸ್ತ್ರ ಪರೀಕ್ಷೆ, ಮೇ 4ರಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಲಿದೆ.
ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜ.6 ಸಂಜೆ ಪ್ರಕಟಿಸಿತ್ತು. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ. ಜನವರಿ 14ರೊಳಗೆ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮಾರ್ಚ್ 28ರಂದು ಪ್ರಥಮ ಭಾಷೆ, ಮಾರ್ಚ್ 30ರಂದು ದ್ವಿತೀಯ ಭಾಷೆ, ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್, ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6 ಸಮಾಜ ವಿಜ್ಞಾನ, ಏಪ್ರಿಲ್ 6 ತೃತೀಯ ಭಾಷೆ, ಏಪ್ರಿಲ್ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ / ಹಿಂದೂಸ್ತಾನಿ ಸಂಗೀತದ ಪರೀಕ್ಷೆಗಳು ನಡೆಯಲಿವೆ.
ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೂ ಪ್ರಶ್ನಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ. ವೇಳಾಪಟ್ಟಿಗೆ ಅಭ್ಯರ್ಥಿಗಳು / ಪೋಷಕರು ಆಕ್ಷೇಪಣೆ ಸಲ್ಲಿಸಲು ಜನವರಿ 6- 14 ರವರೆಗೆ ಅವಕಾಶ ಇದೆ. ಆಕ್ಷೇಪಣೆಗಳಿದ್ದಲ್ಲಿ ಮಂಡಳಿಯ ವೆಬ್ಸೈಟ್ನಲ್ಲಿ ಸಲ್ಲಿಸಬಹುದು.
ಇದನ್ನೂ ಓದಿ:
SSLC Exam Time Table: ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ, ಪೋಷಕರ ಆಕ್ಷೇಪಕ್ಕೆ ಅವಕಾಶ
Published On - 3:58 pm, Sun, 23 January 22