
ಬೆಂಗಳೂರು, ಆಗಸ್ಟ್ 29: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 2026ರ ಯುಜಿಸಿ ನೆಟ್ (UGC NET) ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟು 84 ವಿಷಯಗಳ ಸ್ಕೋರ್‌ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಹಾಜರಾಗಿದ್ದ 6 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಲ್ಲಿ 97,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರೆ, 4,000ಕ್ಕೂ ಹೆಚ್ಚು ಅಭ್ಯರ್ಥಿಗಳು ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅಂಕಗಳನ್ನು ಪರಿಶೀಲಿಸಬಹುದು.
ಉಳಿದಂತೆ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಫಲಿತಾಂಶವನ್ನು ಸದ್ಯ ತಡೆಹಿಡಿಯಲಾಗಿದೆ. ಈ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ವ್ಯಾಕರಣ ದೋಷಗಳು, ತಪ್ಪು ಅನುವಾದ ಮತ್ತು ತಾಂತ್ರಿಕ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ಶಿಫಾರಸಿನಂತೆ ಮರು ಪರೀಕ್ಷೆ ನಡೆಸಲು ಎನ್‌ಟಿಎ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9 ರಂದು ಇಂಗ್ಲಿಷ್ ಮತ್ತು ವಾಣಿಜ್ಯ ವಿಷಯಗಳ ಪರೀಕ್ಷೆ ಹಾಗೂ ಸೆಪ್ಟೆಂಬರ್ 10 ರಂದು ಸಮಾಜಶಾಸ್ತ್ರ ವಿಷಯದ ಪರೀಕ್ಷೆಯನ್ನು ಮರು ಆಯೋಜಿಸಲಾಗುತ್ತಿದೆ.
ಈ ಮೂರು ವಿಷಯಗಳ ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಹೊಸ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಪ್ರಸ್ತುತ ಬಿಡುಗಡೆಯಾಗಿರುವ 84 ವಿಷಯಗಳ ಫಲಿತಾಂಶಕ್ಕೆ ಹಾಗೂ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಕ್ರಿಯೆಗೆ ಈ ಮರು ಪರೀಕ್ಷೆಯಿಂದ ಯಾವುದೇ ತೊಡಕಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ