13 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಸಂಕಷ್ಟದಲ್ಲಿ ಕರ್ನಾಟಕದ 32 ವಿಶ್ವವಿದ್ಯಾಲಯಗಳು
ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿರುವ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲೇ ಸಿಬ್ಬಂದಿ ಕೊರತೆ ಕಾಡುತ್ತಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 32 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 13 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅದರಲ್ಲೂ ಶೇ.64ರಷ್ಟು ಬೋಧಕ ಹುದ್ದೆಗಳಿಗೆ ಪ್ರಾಧ್ಯಾಪಕರೇ ಇಲ್ಲದಂತಾಗಿದೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದೀಗ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಏನಿದು ವಿವಿಗಳ ಸಂಕಷ್ಟ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಬೆಂಗಳೂರು, (ನವೆಂಬರ್ 03): ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟಕ್ಕೆ ಸಿಬ್ಬಂದಿ ಕೊರತೆಯ ಬಿಸಿ ತಟ್ಟಿದೆ. ರಾಜಧಾನಿ ಬೆಂಗಳೂರಿನ ಪ್ರಮುಖ ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಬರೋಬ್ಬರಿ 13,227ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲೂ ಬೋಧಕ ಹುದ್ದೆಗಳ ಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದೆ. ಶೇ.64ರಷ್ಟು ಬೋಧಕ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ..ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ವಿವಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಒಂದೆಡೆ ಖಾಲಿ ಹುದ್ದೆಗಳ ಸಮಸ್ಯೆಯಾದರೆ, ಮತ್ತೊಂದೆಡೆ ವಿವಿಗಳ ಜಮೀನುಗಳ ಮೇಲೂ ಒತ್ತುವರಿ ಆತಂಕ ಶುರುವಾಗಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ, ಮೂಲಸೌಕರ್ಯ ಸಮಸ್ಯೆ ಸೇರಿದಂತೆ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಗಂಭೀರ ಗಮನ ಹರಿಸಿದೆ. ಈ ಸಂಬಂಧ ಕಳೆದ 20 ದಿನಗಳಿಂದ ನಿರಂತರವಾಗಿ ಸಭೆ ನಡೆಸಿ ಎಲ್ಲಾ ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಆಲಿಸಲಾಗಿದೆ.
ಇದನ್ನೂ ನೋಡಿ: ನೇಮಕಾತಿ ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ!
ಹಲವು ವಿಭಾಗಗಳಲ್ಲಿ ನಿಯಮಿತ ಬೋಧನೆಗೆ ಅಡ್ಡಿ
ಸಿಬ್ಬಂದಿ ಕೊರತೆಯಿಂದ ಹಲವು ವಿಭಾಗಗಳಲ್ಲಿ ನಿಯಮಿತ ಬೋಧನೆಗೆ ಅಡ್ಡಿಯಾಗುತ್ತಿದೆ. ಪಿಎಚ್‌ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ನೀಡಲು ಪ್ರಾಧ್ಯಾಪಕರ ಕೊರತೆ ಎದುರಾಗಿದೆ. ಹೊಸ ಕೋರ್ಸ್‌ಗಳ ರೂಪಣೆ, ಪಠ್ಯಕ್ರಮ ಅಭಿವೃದ್ಧಿ ಹಾಗೂ ಶೈಕ್ಷಣಿಕ ಯೋಜನೆಗಳ ಅನುಷ್ಠಾನಕ್ಕೂ ಹಿನ್ನಡೆಯಾಗುತ್ತಿದೆ. ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಕೇವಲ ಸಭೆಗಳಿಗೆ ಸೀಮಿತಗೊಳಿಸದೆ, ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.
ಈಗಾಗಲೇ ಎಲ್ಲಾ 32 ವಿಶ್ವವಿದ್ಯಾಲಯಗಳಿಂದ ವಿಶೇಷ ವರದಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಇದೇ ತಿಂಗಳ 15ರೊಳಗೆ ಎಲ್ಲಾ ವಿಶ್ವವಿದ್ಯಾಲಯಗಳ ಸಂಪೂರ್ಣ ವರದಿ ಸಿದ್ಧಪಡಿಸಲು ಇಲಾಖೆ ಗುರಿ ಹಾಕಿಕೊಂಡಿದೆ. ಆದ್ರೆ ವಿದ್ಯಾರ್ಥಿಗಳಿಗೆ ಮಾತ್ರ ಉಪನ್ಯಾಸಕರ ಕೊರತೆಯಂದ ಕಲಿಕಾ ಹಿನ್ನಡೆಯ ಸಮಸ್ಯೆ ಎದುರಾಗಿದೆ. ಸಚಿವರು ವರದಿ ಪಡೆದು ಕ್ರಮ ಅನ್ನೋ ಹಾರಿಕೆ ಉತ್ತರ ಕೊಡುತ್ತಿದ್ದಾರೆ.
ಮತ್ತೊಂದಡೆ ಜೂನ್ ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಗೌರವ ಧನ ನೀಡಿಲ್ಲ. ಐದು ತಿಂಗಳಾದರೂ ವೇತನವಿಲ್ಲದೆ ಜೀವನ ನಡೆಸಲು ಅತಿಥಿ ಉಪನ್ಯಾಸಕರು ಪರದಾಡುತ್ತಿದ್ದು, ಒಂದು ವಾರದೊಳಗೆ ಬಾಕಿ ಸಂಬಳ ಪಾವತಿಸುವಂತೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಒಂದು ವಾರದಲ್ಲಿ ಸಂಬಳ ಪಾವತಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿರುವುದರಿಂದ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. 20 ದಿನಗಳ ಸಭೆ, ವಿಶೇಷ ವರದಿ ಸಂಗ್ರಹದ ಬಳಿಕವಾದರೂ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗುತ್ತಾ? ವಿವಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.




