Anand Sharma
ಆನಂದ್ ಶರ್ಮರವರು ಕಾಂಗ್ರೆಸ್‌ನ ವರಿಷ್ಠ ನಾಯಕರಾಗಿದ್ದಾರೆ. ಅವರು 1953ರ ಜನವರಿ 5ರಂದು ಶಿಮ್ಲಾದಲ್ಲಿ ಜನಿಸಿದರು. ಅವರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆರ್‌ಕೆಎಮ್‌ವಿ ಕಾಲೇಜಿನಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದ ರಾಜಕೀಯದ ಅವಧಿಯಲ್ಲೇ ಅವರು ಕಾಂಗ್ರೆಸ್ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐನ ಸಂಸ್ಥಾಪಕ ಸದಸ್ಯರಲ್ಲೊಬ್ಬರೂ ಆಗಿದ್ದಾರೆ. ಇದಲ್ಲದೇ, ಅವರು ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮನಮೋಹನ್ ಸಿಂಗ್‌ರ ಎರಡನೆಯ ಸರಕಾರದ ಅವಧಿಯಲ್ಲಿ 2009ರಿಂದ 2014ರವರೆಗೆ ಅವರು ಕೇಂದ್ರದ ವಾಣಿಜ್ಯ ಹಾಗೂ ಉದ್ಯೋಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಅವರು ರಾಜ್ಯಸಭೆಯಲ್ಲಿ ವಿರೋಧಪಕ್ಷದ ಉಪನಾಯಕರಾಗಿದ್ದಾರೆ. ಅವರು 2006ರಿಂದ 2009ರವರೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲಕ್ಕಿಂತಲೂ ಮೊದಲು, ಅವರು 1984ರಲ್ಲಿ ತಮ್ಮ 31ನೆಯ ವಯಸ್ಸಿನಲ್ಲೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರನ್ನು ಗಾಂಧಿ ಪರಿವಾರದ ಸಮೀಪವರ್ತಿ ಎನ್ನಲಾಗುತ್ತದೆ. ಅವರು ರಾಜೀವ್ ಗಾಂಧಿಯವರ ಕಾಲದಿಂದಲೂ ಆ ಪರಿವಾರಕ್ಕೆ ಆಪ್ತರಾಗಿದ್ದವರು. ಆದರೆ, ಇತ್ತೀಚೆಗೆ ಅವರು ಪಕ್ಷದಲ್ಲಿ ಬದಲಾವಣೆಯನ್ನು ತರಬೇಕಾದ ಅವಶ್ಯಕತೆಯನ್ನು ವಿವರಿಸಿ ಸೋನಿಯಾ ಗಾಂಧಿಯವರಿಗೆ ಪತ್ರವನ್ನೂ ಬರೆದಿದ್ದರು.