Jairam Thakur
ಜೈರಾಮ್ ಠಾಕೂರ್‌ರವರು ಹಿಮಾಚಲ ಪ್ರದೇಶದ ಭಾರತೀಯ ಜನತಾ ಪಕ್ಷದ ವರಿಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಮಂಡಿ ಜಿಲ್ಲೆಯ ಸಿರಾಜ್ ಹೆಸರಿನ ವಿಧಾನಸಭಾ ಕ್ಷೇತ್ರದಿಂದ 2017ರಲ್ಲಿ ವಿಧಾನಸಭಾ ಸದಸ್ಯರಾಗಿ ಹಾಗೂ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಮಂಡಿ ಜಿಲ್ಲೆಯ ಥುನಾಗ್ ತಾಲ್ಲೂಕಿನ ತಾಂದಿ ಎಂಬ ಹಳ್ಳಿಯಲ್ಲಿ ದಿನಾಂಕ 6ನೇ ಜನವರಿ 1965ರಂದು ಅವರ ಜನನವಾಗಿತ್ತು. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಅವರು ಎಬಿವಿಪಿಯ ಸದಸ್ಯರಾಗಿದ್ದರು. ಅವರ ಬಾಲ್ಯವು ಅತ್ಯಂತ ಬಡತನದಲ್ಲಿ ಕಳೆಯಿತು. ಅವರ ಕುಟುಂಬದಲ್ಲಿ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಇದ್ದಾರೆ. ಅವರ ತಂದೆ ಹೊಲದಲ್ಲಿ ದುಡಿದು ಹಾಗೂ ಕೂಲಿ-ನಾಲಿ ಮಾಡಿ ತಮ್ಮ ಕುಟುಂಬವನ್ನು ಸಾಕುತ್ತಿದ್ದರು. ಜೈರಾಮ್‌ರವರು ಸಹೋದರರಲ್ಲಿ ಕಿರಿಯವರಾಗಿದ್ದಾರೆ. ಅವರು 1993ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು ಹಾಗೂ 1998ರಲ್ಲಿ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದರು. ಆನಂತರ ಅವರು ಹಿಂದಿರುಗಿ ನೋಡಲಿಲ್ಲ ಹಾಗೂ ಸತತವಾಗಿ ಐದು ಚುನಾವಣೆಗಳಲ್ಲಿ ಜಯ ಗಳಿಸಿದ ನಂತರ ಮುಖ್ಯಮಂತ್ರಿಯ ಪದವಿ ಅವರಿಗೆ ಸಿಕ್ಕಿತು. ಜೈರಾಮ್ ಠಾಕೂರ್‌ರವರನ್ನು ಹಿಂದಿನ ಮುಖ್ಯಮಂತ್ರಿಗಳಾದ ಶಾಂತ ಕುಮಾರ್‌ರವರ ಸಮೀಪವರ್ತಿ ಎಂದು ಹೇಳಲಾಗುತ್ತದೆ. ಜೈರಾಮ್ ಠಾಕೂರ್‌ರವರು 1993ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದಾಗ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಬಳಿ ಹಣವಿರಲಿಲ್ಲ ಎಂದೂ ಹೇಳಲಾಗುತ್ತದೆ. ಆದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡರು. ಆದರೆ ಅವರ ಸಾಧನೆಯನ್ನು ಗಮನಿಸಿದ ಪಕ್ಷವು ಅವರಿಗೆ 1998ರಲ್ಲಿ ಮತ್ತೊಮ್ಮೆ ಅವಕಾಶ ನೀಡಿದಾಗ ಅವರು ಅದರಲ್ಲಿ ಭರ್ಜರಿ ಜಯ ಗಳಿಸಿದರು.