ಗುಜರಾತ್, ಹಿಮಾಚಲ ಪ್ರದೇಶ ಫಲಿತಾಂಶ: ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಈ 6 ನಾಯಕರ ಮೇಲೆ ಹೀಗಿರಲಿದೆ ಪರಿಣಾಮ
ರಾಷ್ಟ್ರ ರಾಜಕಾರಣ ಮತ್ತು ಅದರ ಕೇಂದ್ರ ಬಿಂದುಗಳ ಮೇಲೆ ಫಲಿತಾಂಶದ ಪರಿಣಾಮ ಏನಾಗಬಹುದು ಎಂಬ ವಿಶ್ಲೇಷಣೆ ಈ ಬರಹದಲ್ಲಿದೆ.
ಭಾರತದಲ್ಲಿ ಇನ್ನೆರೆಡು ವರ್ಷಗಳಲ್ಲಿ ಲೋಕಸಭೆ ಚುನಾವಣೆ (Loksabha Elections) ನಡೆಯಲಿದೆ. ಮುಂದಿನ ವರ್ಷ ಕರ್ನಾಟಕ ಸೇರಿದಂತೆ ಹಲವು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು (Legislative Assembly Elections) ನಡೆಯಲಿವೆ. ಬಿಜೆಪಿ (BJP), ಕಾಂಗ್ರೆಸ್ (Congress), ಆಪ್ (AAP) ಸೇರಿದಂತೆ ಬಹುತೇಕ ಪಕ್ಷಗಳು ಈಗಾಗಲೇ ಚುನಾವಣೆಗೆ ಸಿದ್ಧತೆ ಚುರುಕುಗೊಳಿಸಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಭಾರತದ ಪ್ರಮುಖ ರಾಜ್ಯ ಗುಜರಾತ್ (Gujarat) ಮತ್ತು ಹಿಂದಿ ಭಾಷಿಕ ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಾಮುಖ್ಯತೆ ಪಡೆದಿವೆ. ರಾಷ್ಟ್ರ ರಾಜಕಾರಣದಲ್ಲಿ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಆಪ್ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಭವಿಷ್ಯದ ಮೇಲೆಯೂ ಈ ಚುನಾವಣೆ ಫಲಿತಾಂಶ ಬೀರಲಿದೆ. ರಾಷ್ಟ್ರ ರಾಜಕಾರಣ ಮತ್ತು ಅದರ ಕೇಂದ್ರ ಬಿಂದುಗಳ ಮೇಲೆ ಫಲಿತಾಂಶದ ಪರಿಣಾಮ ಏನಾಗಬಹುದು ಎಂಬ ವಿಶ್ಲೇಷಣೆ ಈ ಬರಹದಲ್ಲಿದೆ.
ಹೊಸ ದಾಖಲೆ ಬರೆದ ನರೇಂದ್ರ ಮೋದಿ
ಕಳೆದ 20 ವರ್ಷಗಳಿಂದ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯವನ್ನು ಭಾರತೀಯ ಜನತಾ ಪಕ್ಷಕ್ಕೆ ಗೆದ್ದುಕೊಡುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಅವರು ತಮ್ಮದೇ ದಾಖಲೆಗಳನ್ನು ಮರಿದು, ಹೊಸ ದಾಖಲೆ ಬರೆದಿದ್ದಾರೆ. ಗುಜರಾತ್ನ ಇತಿಹಾಸದಲ್ಲಿಯೇ ಅತಿಹೆಚ್ಚು ಮತಗಳಿಕೆಯೊಂದಿಗೆ ಅತಿಹೆಚ್ಚು ಸ್ಥಾನಗಳನ್ನೂ ಬಿಜೆಪಿ ತನ್ನದಾಗಿಸಿಕೊಂಡಿದೆ. ಚುನಾವಣೆಯು ಘೋಷಣೆಯಾದ ನಂತರ ಗುಜರಾತ್ನಲ್ಲಿ 30 ಬಹಿರಂಗ ಸಮಾವೇಶ ಹಾಗೂ ಎರಡು ರೋಡ್ಷೋಗಳನ್ನು ಮೋದಿ ನಡೆಸಿದರು. ಈ ಚುನಾವಣೆಯನ್ನು ಅವರು ತಮ್ಮ ವೈಯಕ್ತಿಕ ಘನತೆಯ ಭಾಗವಾಗಿ ಪರಿಗಣಿಸಿದ್ದರು. ಪಕ್ಷದ ರಾಜ್ಯ ಘಟಕದಲ್ಲಿದ್ದ ಲೋಪದೋಷಗಳನ್ನು ಪರಿಹರಿಸಲು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡರು. ತಮ್ಮನ್ನು ನಾಯಕನನ್ನಾಗಿ ರೂಪಿಸಿದ ಗುಜರಾತ್ ಬಗ್ಗೆ ಮೊದಲಿನಷ್ಟೇ ಗಮನ ಕೊಡುತ್ತಿದ್ದೇನೆ. ರಾಷ್ಟ್ರ ನಾಯಕನಾಗಿ ಬೆಳೆದರೂ ಗುಜರಾತ್ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬ ಸಂದೇಶವನ್ನು ರವಾನಿಸಲು ಹಲವು ಬಾರಿ ಅವರು ಪ್ರಯತ್ನಿಸಿದರು. 2012ರ ಗುಜರಾತ್ ಚುನಾವಣೆಯು ಮೋದಿ ಸ್ಥಾನವನ್ನು ದೆಹಲಿಯಲ್ಲಿ ಭದ್ರಪಡಿಸಿತು. 2022ರ ಗುಜರಾತ್ ಚುನಾವಣೆಯು ಮೋದಿ ಅವರು ಇಂದಿಗೂ ದೇಶದ ಜನಪ್ರಿಯ ನಾಯಕ ಎಂಬುದನ್ನು ದೃಢಪಡಿಸಿತು.
ಮತ್ತೊಮ್ಮೆ ಸಾಮರ್ಥ್ಯ ಸಾಬೀತುಪಡಿಸಿದ ಚುನಾವಣಾ ಚಾಣಕ್ಯ ಅಮಿತ್ ಶಾ
ಅಮಿತ್ ಶಾ ಅವರು ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು 1987ರಲ್ಲಿ. ಆಗ ಸ್ಥಳೀಯ ಮುನ್ಸಿಪಲ್ ಚುನಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸುವಂತೆ ಮಾಡಲು ಅವರು ಕಾರ್ಯತಂತ್ರ ರೂಪಿಸಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಈ ಜೋಡಿಯ ಬೆಸುಗೆ ಮತ್ತಷ್ಟು ಬಿಗಿಯಾಯಿತು. 35 ವರ್ಷಗಳ ನಂತರ ಶಾ ಅವರನ್ನು ಮೋದಿ ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ತಂದರು. ಪಕ್ಷದಲ್ಲಿ ತಮ್ಮ ನಂತರ ಅಮಿತ್ ಶಾ ಎಂಬ ಇಮೇಜ್ ಬೆಳೆಯುವಂತೆ ಮಾಡಿದರು. ಚುನಾವಣೆಗಳನ್ನು ಮತಗಟ್ಟೆಗಳ ಮಟ್ಟದಲ್ಲಿ ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುವ ಕಲೆ ಅಮಿತ್ ಶಾ ಅವರಿಗೆ ಕರತಲಾಮಲಕವಾಗಿದೆ. ಈ ಬಾರಿಯ ಗುಜರಾತ್ನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ತಮ್ಮ ಬುದ್ಧಿವಂತಿಕೆ ಮತ್ತು ಶ್ರಮವನ್ನು ಧಾರೆಯೆರೆದಿದ್ದ ಅಮಿತ್ ಶಾ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಗುಜರಾತ್ ರಾಜಧಾನಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ ಅಮಿತ್ ಶಾ ಅವರ ಈ ಸಾಧನೆಯು ಬಿಜೆಪಿಯಲ್ಲಿ ಅವರ ಸ್ಥಾನಮಾನವನ್ನು ಮತ್ತಷ್ಟು ಸದೃಢಗೊಳಿಸಿದೆ. ಗುಜರಾತ್ನ ವಿದ್ಯಮಾನಗಳ ನಿರ್ವಹಣೆ ಹಾಗೂ ಕೇಂದ್ರದ ನೀತಿ ನಿರೂಪಣೆಯಲ್ಲಿ ಅಮಿತ್ ಶಾ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ.
ತಂತ್ರಗಾರಿಕೆಯಲ್ಲಿ ಪಳಗಬೇಕಿದೆ ರಾಹುಲ್ ಗಾಂಧಿ
ಚುನಾವಣಾ ಪ್ರಚಾರದ ವಿಚಾರದಲ್ಲಿ ರಾಹುಲ್ ಗಾಂಧಿ ತಮ್ಮ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟ ನಿಲುವು ತಳೆಯಲಿಲ್ಲ. ಬಿಜೆಪಿಯನ್ನು ಚುನಾವಣೆಗಳಲ್ಲಿ ಎದುರಿಸುವ ಬದಲು ಅಮೂರ್ತ ಸೈದ್ಧಾಂತಿಕ ಮತ್ತು ಬೌದ್ಧಿಕ ಸಂವಾದಗಳ ಮೂಲಕ ಎದುರಿಸಲು, ಮಣಿಸಲು ಮುಂದಾದರು. ಭಾರತ್ ಜೋಡೋ ಯಾತ್ರೆ ಇನ್ನೂ ಚಾಲ್ತಿಯಲ್ಲಿರುವಾಗಲೇ ಗುಜರಾತ್ ವಿಧಾನಸಭೆಯ ಫಲಿತಾಂಶವೂ ಪ್ರಕಟವಾಗಿದ್ದು, ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷವನ್ನು ಅತ್ಯುಗ್ರ ರೀತಿಯಲ್ಲಿ ಶಿಕ್ಷಿಸಿದ್ದಾರೆ. 2017ರಲ್ಲಿ ಪಡೆದಿದ್ದಷ್ಟು ಸ್ಥಾನಗಳನ್ನು ಉಳಿಸಿಕೊಳ್ಳಲೂ ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಕಾಂಗ್ರೆಸ್ಗೆ ಸಿಕ್ಕಿಲ್ಲ. ಪ್ರಚಾರದ ವಿಧಾನದಲ್ಲಿಯೂ ಕಾಂಗ್ರೆಸ್ ಹಲವು ಹಂತಗಳಲ್ಲಿ ಎಡವಿತು. ಹಿಮಾಚಲ ಪ್ರದೇಶದ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಒಂದಿಷ್ಟು ಉತ್ಸಾಹ ತಂದುಕೊಟ್ಟಿರುವುದು ನಿಜ. ಆದರೆ ಈ ಗೆಲುವಿನಲ್ಲಿ ರಾಹುಲ್ ಗಾಂಧಿ ಪಾತ್ರ ಏನೂ ಇಲ್ಲ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಸ್ಥಳೀಯ ವಿಚಾರಗಳು ಮತ್ತು ಸ್ಥಳೀಯ ನಾಯಕರೇ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನೆಹರೂ-ಗಾಂಧಿ ಕುಟುಂಬ ತಮ್ಮ ರಾಜಕೀಯ ಧೋರಣೆಗಳನ್ನು, ಚುನಾವಣೆ ತಂತ್ರಗಳನ್ನು ಸಮಕಾಲೀನ ರೀತಿ-ನೀತಿಗೆ ತಕ್ಕಂತೆ ಬದಲಿಸಿಕೊಳ್ಳದಿದ್ದರೆ 2024ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಖಾಡಕ್ಕಿಳಿಯಲಿರುವ ಬಿಜೆಪಿಯನ್ನು ಎದುರಿಸಲು ಸಾಧ್ಯವೇ ಇಲ್ಲದಂತಾಗುತ್ತದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರ ರಾಜಕಾರಣದಲ್ಲಿ ಹೆಜ್ಜೆಗುರುತು ಮೂಡಿಸಿದ ಅರವಿಂದ ಕೇಜ್ರಿವಾಲ್
ಕಳೆದ 10 ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯ ಚಹರೆ ಸಾಕಷ್ಟು ಬದಲಾಗಿದೆ. ರಾಜಧಾನಿ ಕೇಂದ್ರಿತ ಪಕ್ಷ ಎಂಬ ಹಣೆಪಟ್ಟಿಯಿಂದ ಕಳಚಿಕೊಂಡು ಪಂಜಾಬ್ನಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿದಿದೆ. ಗುಜರಾತ್ ಚುನಾವಣೆಯ ನಂತರ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವೂ ಸಿಕ್ಕಿದೆ. ಖಂಡಿತ ಇದೊಂದು ಸಾಧನೆಯೇ ಸರಿ. ಗುಜರಾತ್ ಚುನಾವಣೆಯಲ್ಲಿ ಪಕ್ಷವು ಶೇ 10ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿತ್ತು. ಆಪ್ ಕಣದಲ್ಲಿದ್ದ ಕಾರಣದಿಂದ ಗುಜರಾತ್ ಚುನಾವಣೆಯು ತ್ರಿಕೋನ ಸ್ಪರ್ಧೆಯಾಗಿ ರೂಪಾಂತರಗೊಂಡಿತು. ಅಲ್ಪಸಂಖ್ಯಾತ ಹಾಗೂ ಬುಡಕಟ್ಟು ಸಮುದಾಯಗಳ ಮತವಿಭಜನೆಯಾದ ಕಾರಣ ಕಾಂಗ್ರೆಸ್ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿ ಇದೊಂದು ಸಾಧನೆ ಎನ್ನುವುದು ನಿಜವೇ ಆದರೂ ಅರವಿಂದ ಕೇಜ್ರಿವಾಲ್ಗೆ ಇದರಿಂದ ಖಂಡಿತ ತೃಪ್ತಿಯಾಗಿರಲಾರದು. ಬಿಜೆಪಿಗೆ ಪರ್ಯಾಯವಾಗಿ ಬೆಳೆಯಬೇಕೆಂದುಕೊಂಡಿದ್ದ ಕೇಜ್ರಿವಾಲ್, ತಮ್ಮ ಪಕ್ಷವು ವಿರೋಧ ಪಕ್ಷಗಳ ಒಕ್ಕೂಟದ ಕೇಂದ್ರವಾಗಬೇಕೆಂದು ಬಯಸಿದ್ದರು. ಗುಜರಾತ್ನಲ್ಲಿ ಒಂದು ವೇಳೆ ಆಪ್ ಅಧಿಕಾರದ ಸನಿಹಕ್ಕೆ ಬಂದಿದ್ದರೆ ರಾಷ್ಟ್ರರಾಜಕಾರಣದ ಚದುರಂಗದಾಟದಲ್ಲಿ ಆಪ್ನ ಸ್ಥಾನಮಾನ ಹೆಚ್ಚಾಗುತ್ತಿತ್ತು. ಸ್ಥಳೀಯ ಮಟ್ಟದಲ್ಲಿ ಪ್ರಬಲ ನಾಯಕತ್ವ ಬೆಳೆಸದಿದ್ದರೆ ಪಕ್ಷದ ವಿಸ್ತರಣೆ ಕಷ್ಟ ಎಂಬ ಪಾಠವನ್ನೂ ಈ ಫಲಿತಾಂಶವು ಕೇಜ್ರಿವಾಲ್ ಅವರಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಕೇಜ್ರಿವಾಲ್ ನಡೆ ಹೇಗಿರುತ್ತದೆ ಎನ್ನುವುದು 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಮೇಲೆ ಪರಿಣಾಮ ಬೀರಲಿದೆ.
ಮಲ್ಲಿಕಾರ್ಜುನ ಖರ್ಗೆ ಕಣ್ಮುಂದೆ ಕರ್ನಾಟಕದ ಸವಾಲು
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ನಡೆದ ಮೊದಲ ಪ್ರಮುಖ ಚುನಾವಣೆ ಇದು. ಪಕ್ಷದ ಆಡಳಿತ ವ್ಯವಸ್ಥೆಯಲ್ಲಿ ಗಾಂಧಿ ಕುಟುಂಬದ ಕೈಗೊಂಬೆ ಎಂದೇ ಖರ್ಗೆ ಅವರನ್ನು ಗುರುತಿಸಲಾಗುತ್ತಿದೆ. ಮೊದಲೇ ದುರ್ಬಲವಾಗಿದ್ದ ಅವರ ಪ್ರಭಾವವು ಈ ಚುನಾವಣೆಯ ಫಲಿತಾಂಶದಿಂದ ಮತ್ತಷ್ಟು ದುರ್ಬಲವಾಗಲಿದೆ. ಗುಜರಾತ್ ಚುನಾವಣೆಯ ಸಂಭಾವ್ಯ ಸವಾಲುಗಳನ್ನು ಮೊದಲೇ ಗುರುತಿಸಿ, ಅದನ್ನು ಎದುರಿಸಲು ಪರಿಣಾಮಕಾರಿ ಕಾರ್ಯತಂತ್ರ ರೂಪಿಸಲು ಖರ್ಗೆ ವಿಫಲರಾದರು. ಗುಜರಾತ್ ರಾಜ್ಯದಲ್ಲಿ ಸ್ಥಳೀಯ ಮಟ್ಟದಲ್ಲಿ ಉತ್ತಮ ನಾಯಕರನ್ನು ಗುರುತಿಸಿ ಪ್ರಚಾರದ ಹೊಣೆಗಾರಿಕೆ ವಹಿಸಲೂ ಅವರಿಗೆ ಸಾಧ್ಯವಾಗಲಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಖರ್ಗೆ ಅವರಿಗೆ ಆಶಾ ಕಿರಣವಾಗಿದೆ. ಆದರೆ ಅಲ್ಲಿಯೂ ಅಧಿಕಾರಕ್ಕಾಗಿ ಒಳಜಗಳಗಳು ಆರಂಭವಾಗುವ ಭೀತಿ ವ್ಯಕ್ತವಾಗುತ್ತಿದೆ. ಇದನ್ನು ಖರ್ಗೆ ಹೇಗೆ ನಿಭಾಯಿಸುತ್ತಾರೆ? ಬಿಜೆಪಿ ಮುಂದಿಡುವ ಆಪರೇಷನ್ ಕಮಲದ ಸವಾಲು ಹೇಗೆ ಎದುರಿಸುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ. ಖರ್ಗೆ ಅವರ ತವರು ರಾಜ್ಯ ಕರ್ನಾಟಕದಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಯಲಿದೆ. ಭಾರತದಲ್ಲಿ ಕಾಂಗ್ರೆಸ್ಗೆ ಅಧಿಕಾರ ಹಿಡಿಯಲು ಅವಕಾಶವಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಖ್ಯವಾದುದು. ಈ ಅವಕಾಶವನ್ನು ಖರ್ಗೆ ಹೇಗೆ ಸಾಕಾರಗೊಳಿಸುತ್ತಾರೆ? ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ವೈಮನಸ್ಸು ಹೇಗೆ ಕಡಿಮೆ ಮಾಡುತ್ತಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಜಗತ್ ಪ್ರಕಾಶ್ ನಡ್ಡಾಗೆ ಗುಜರಾತ್ನ ಖುಷಿ ಕಿತ್ತುಕೊಂಡ ಹಿಮಾಚಲ
ಗುಜರಾತ್ನಲ್ಲಿ ಚುನಾವಣೆ ಗೆದ್ದರೂ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ.ನಡ್ಡಾ) ಅವರಿಗೆ ಅಷ್ಟೇನೂ ಖುಷಿಯಾದಂತೆ ಕಂಡುಬರಲಿಲ್ಲ. ಏಕೆಂದರೆ ಅವರ ತವರು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ‘ಕಾಂಗ್ರೆಸ್ ಮುಕ್ತ ಭಾರತ’ ರೂಪಿಸಬೇಕೆಂಬ ಕನಸಿನತ್ತ ಮುನ್ನುಗ್ಗುತ್ತಿದ್ದ ಬಿಜೆಪಿಗೆ ಹಿಮಾಚಲ ಪ್ರದೇಶದ ಫಲಿತಾಂಶ ಪೆಟ್ಟುಕೊಟ್ಟಿದೆ. ಪ್ರತಿ ಬಾರಿ ಪಕ್ಷಗಳನ್ನು ಬದಲಿಸುವುದು ಹಿಮಾಚಲ ಪ್ರದೇಶದಲ್ಲಿ ಸಾಮಾನ್ಯ ಸಂಗತಿ. ಆದರೆ ಈ ವಿದ್ಯಮಾನವನ್ನು ಸುಳ್ಳಾಗಿಸಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದು ಬಿಜೆಪಿ ಶತಾಯಗತಾಯ ಪ್ರಯತ್ನಿಸಿತ್ತು. ಆದರೆ ಆಂತರಿಕ ಭಿನ್ನಮತ ಶಮನಗೊಳಿಸಲು ನಡ್ಡಾ ಅವರಿಗೆ ಸಾಧ್ಯವಾಗಲಿಲ್ಲ. ಹಾಗೆಂದು ಹಿಮಾಚಲದ ವೈಫಲ್ಯವು ನಡ್ಡಾ ಅವರ ಸ್ಥಾನಕ್ಕೆ ಕುತ್ತು ತರುತ್ತದೆ ಎಂದು ಹೇಳಲೂ ಆಗುವುದಿಲ್ಲ. ಸಂಘ ಪರಿವಾರದ ಅಂಗ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುವ ವೈಖರಿ, ಬಿಜೆಪಿಯಲ್ಲಿ ಅವರಿಗೆ ಇರುವ ಪ್ರಬಲ ಬೆಂಬಲ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗಿನ ಆಪ್ತ ಒಡನಾಟುವ ನಡ್ಡಾ ಅವರಿಗೆ ಶ್ರೀರಕ್ಷೆಯಾಗಿ ಕಾಪಾಡಲಿದೆ. ಇನ್ನೊಂದು ಅವಧಿಗೆ ಅವರೇ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರಾಜೀನಾಮೆ ಸಲ್ಲಿಸಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್; ಡಿಸೆಂಬರ್ 12ಕ್ಕೆ ಪ್ರಮಾಣ ವಚನ ಸ್ವೀಕಾರ
ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ