ಬೆಂಗಳೂರಿನಲ್ಲಿ ನಾಳೆ ಬಿಜೆಪಿ ಕಾರ್ಯಕಾರಿಣಿ: ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಚಿಂತನ-ಮಂಥನ
ಸಂಘಟನೆಗೆ ಬಲ ತುಂಬುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದರು.
ಬೆಂಗಳೂರು: ‘ನಗರದಲ್ಲಿ ನಾಳೆ ಬೆಳಿಗ್ಗೆ 10:30ಕ್ಕೆ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆ ನಡೆಯಲಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಡಿಯೂರಪ್ಪ ಸೇರಿ 500ಕ್ಕೂ ಹೆಚ್ಚು ಸದಸ್ಯರು ಭಾಗಿಯಾಗಲಿದ್ದಾರೆ. ಪಕ್ಷ ಸಂಘಟನೆ, ರಾಜ್ಯ ನಾಯಕರ ಪ್ರವಾಸದ ಬಗ್ಗೆ ಸಮಾಲೋಚನೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ರಾಜ್ಯ ಹಾಗೂ ಕೇಂದ್ರಕ್ಕೆ ಸಂಬಂಧಿಸಿದ ಹಲವು ವಿಚಾರಗೋಷ್ಠಿಗಳೂ ನಡೆಯಲಿದ್ದು, ದೇಶಕ್ಕೆ ರಾಜ್ಯದ ಕೊಡುಗೆ ಏನೆಂಬುದರ ಬಗ್ಗೆ ನಿರ್ಧಿಸಲಾಗುವುದು. ಈ ಸಂಬಂಧ ಪಕ್ಷ ಅಜೆಂಡಾ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತಕ್ಕೆ ಕರ್ನಾಟಕದ ಕೊಡುಗೆ ಏನಿರಬೇಕು ಎಂಬ ಬಗ್ಗೆ ಚಿಂತನೆ ನಡೆಯಲಿದೆ. ಸಂಘಟನಾತ್ಮಾಕ ವಿಶ್ಲೇಷಣೆ ಮತ್ತು ಕೇಂದ್ರ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚಿಂತನೆ ಹಾಗೂ ವಿವರಣೆ ನೀಡುವ ಗೋಷ್ಠಿಗಳು ಇರುತ್ತವೆ. ಸಂಘಟನೆಗೆ ಬಲ ತುಂಬುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದರು.
ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ, ಆರ್ಎಸ್ಎಸ್ ಸರಸಂಘಚಾಲಕರ ಹುದ್ದೆಗೆ ದಲಿತರನ್ನು ಪರಿಗಣಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರಸಂಘಚಾಲಕ ಹುದ್ದೆ ಯಾವುದೇ ಅಧಿಕಾರದ ಹುದ್ದೆ ಅಲ್ಲ. ತ್ಯಾಗ ಸಮರ್ಪಣೆ ಮನೋಭಾವನೆ ಇರುವ ಕಾರ್ಯಕರ್ತರ ಪೈಕಿ ಯಾರ ಬೇಕಾದರೂ ಸರಸಂಘಚಾಲಕ ಆಗಬಹುದು. ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ’ ಎಂದರು.
ಹಿಂದೆ ಬಿಜೆಪಿಯನ್ನು ಭಟ್ರು-ಶೆಟ್ರ ಪಕ್ಷ ಎಂದು ಹೇಳಲಾಗುತ್ತಿತ್ತು. ಒಕ್ಕಲಿಗರು ಅಲ್ಲಿಗೆ ಹೋಗಿ ಏನು ಮಾಡುತ್ತೀರಿ ಎಂದು ಕೇಳುತ್ತಿದ್ದರು. ಆದರೆ ಈಗ ಅಧಿಕಾರ ಯಾರ್ಯಾರಿಗೆ ಸಿಕ್ಕಿದೆ ಹೇಳಿ? ನಾವು ಜಾತಿ ನೋಡಿ ಅಧಿಕಾರ ಕೊಡುವುದಿಲ್ಲ. ಪ್ರಮುಖ ಹುದ್ದೆಗಳು ಜಾತಿ ನೋಡಿ ನಿರ್ಧಾರ ಆಗಲ್ಲ ಎಂದು ಪರೋಕ್ಷವಾಗಿ ದಲಿತ ಸಿಎಂ ಪ್ರಸ್ತಾಪವನ್ನು ಸಿ.ಟಿ.ರವಿ ತಳ್ಳಿಹಾಕಿದರು.
ಕಾಂಗ್ರೆಸ್ ಜಾಗವನ್ನು ಆವರಿಸಿಕೊಳ್ಳುವ ಅವಕಾಶ ಜೆಡಿಎಸ್ಗೆ ಇಲ್ಲ. ಯಾವುದೇ ಪರಿಸ್ಥಿತಿಯನ್ನ ಬಿಜೆಪಿ ಪರ ತಿರುಗಿಸುವ ಚಾಣಕ್ಯ ಕಾರ್ಯಕರ್ತರು ಮತ್ತು ನಾಯಕರು ನಮ್ಮಲ್ಲಿ ಇದ್ದಾರೆ. 2019ರ ಲೋಕಸಭಾ ಚುನಾವಣೆಯ ಫಲಿತಾಂಶವೇ ನನ್ನ ಮಾತಿಗೆ ಸಾಕ್ಷಿ. ಕಾಂಗ್ರೆಸ್ ಮುಳುಗುವ ಹಂತದಲ್ಲಿದೆ ಎಂದು ಹೇಳಿದರು.
ಜನಸಂಖ್ಯೆ ನಿಯಂತ್ರಣಕ್ಕೆ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೋಹನ್ ಭಾಗವತ್ ಹೇಳಿಕೆ ವಿರುದ್ಧ ಎಐಎಂಐಎಂ ಆಕ್ರೋಶ ವ್ಯಕ್ತಪಡಿಸಿದೆ. ಅವರು ಮೊದಲಿನಿಂದಲೇ ಹೀಗೆಯೇ ವರ್ತಿಸುತ್ತಿದ್ದರು. ಅವರಿಂದ ಬೇರೇನನ್ನು ತಾನೆ ನಿರೀಕ್ಷಿಸಲು ಸಾಧ್ಯ? ಹಿಂದೆ ಇದ್ದ ರಜಾಕಾರರ ಮುಂದುವರಿದ ರೂಪವೇ ಎಐಎಂಐಎಂ ಎಂದು ಹೇಳಿದರು.
ನಾನು ಹಳ್ಳಿಯಿಂದ ಬಂದವನು, ಕೋಳಿ ಕೇಳಿ ಯಾರೂ ಖಾರ ಅರೆಯಲ್ಲ. ಮೋಹನ್ ಭಾಗವತ್ ಅವರು ದೇಶದ ಹಿತದೃಷ್ಟಿಯಿಂದ ಒಂದು ಸಲಹೆ ನೀಡಿದ್ದಾರೆ. ಸಂಸತ್‌ನಲ್ಲಿ, ವಿಧಾನಸಭೆಯಲ್ಲಿ ಆ ಬಗ್ಗೆ ಮೊದಲು ಚರ್ಚೆಯಾಗಲಿ. ಆ ನಂತರ ನೀತಿಯಾಗಿ ಜಾರಿಗೆ ಬರಲಿ. ಬಲವಂತವಾಗಿ ಹಿಂದೆ ಕರೆದುಕೊಂಡು ಹೋಗಿ ಕಟ್ ಮಾಡಿದ ರೀತಿ ಮಾಡುವುದಿಲ್ಲ ಎಂದು ಹೇಳಿದರು.
‘ಬಡತನ, ನಿರುದ್ಯೋಗ ದೇಶದ ಎದುರಿರುವ ದೈತ್ಯ ಸವಾಲು’ ಎಂಬ ಆರ್ಎಸ್ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನೂ ರವಿ ಸಮರ್ಥಿಸಿಕೊಂಡರು. ಭಾರತವು ವಿಶ್ವಗುರು ಆಗುವಲ್ಲಿ ಅಸಮಾನತೆ, ಬಡತನ, ನಿರುದ್ಯೋಗಗಳು ಪ್ರಮುಖ ಅಡೆತಡೆಗಳಾಗಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜಾತೀಯತೆ ಮಾಡುತ್ತಿದ್ದಾರೆ. ವೋಟ್ಬ್ಯಾಂಕ್ನಿಂದಲೇ ಇಂದಿಗೂ ಅಸ್ಪೃಶ್ಯತೆ ಅಸ್ತಿತ್ವದಲ್ಲಿದೆ. ಸರ್ಕಾರದ ರೂಪದಲ್ಲಿ ಪಕ್ಷದ ನಿಲುವಿನಲ್ಲಿ ಅದನ್ನು ನಿವಾರಿಸುತ್ತೇವೆ’ ಎಂದು ವಿವರಿಸಿದರು.
ಎಐಸಿಸಿ ಚುನಾವಣೆ: ಒಂದು ನಾಟಕ
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ನಾಟಕ ನಡೆಯುತ್ತಿದೆ. ಬೇಕಾದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಿನೋಡಿ, ಅವರು ತಮ್ಮ ಅದು ಸ್ವಇಚ್ಛೆಯಿಂದಲ್ಲ. ಅಲ್ಲಿ ಕುಟುಂಬದ ಒಪ್ಪಿಗೆಯು ಎಲ್ಲಕ್ಕಿಂತ ಮುಖ್ಯವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆ ಬಗ್ಗೆ ಸಿ.ಟಿ.ರವಿ ವ್ಯಂಗ್ಯವಾಡಿದರು. 50 ವರ್ಷ ರಾಜಕೀಯ ಮಾಡಿದವರಿಗೆ ಹೀಗೆ ಆಗಬಾರದು. ಇದು ಮಲ್ಲಿಕಾರ್ಜುನ ಖರ್ಗೆಯವರ ವ್ಯಕ್ತಿತ್ವಕ್ಕೆ ತಕ್ಕುದಲ್ಲ. ಜೀತ ಪದ್ಧತಿಯ ಮನೋಭಾವನೆ ಇರಬಾರದು. ಖರ್ಗೆ ಸೋನಿಯಾ ಗಾಂಧಿಯವರ ಅಡಿಯಾಳು ಎಂದು ಟೀಕಿಸಿದರು.
Published On - 12:35 pm, Thu, 6 October 22