G Parameshwara: ರಾಜಕೀಯದ ಮೊದಲ ಎಂಟ್ರಿಯಲ್ಲೆ ಗೆದ್ದುಬೀಗಿದ್ದ ಜಿ ಪರಮೇಶ್ವರ್ಗೆ ಸಚಿವ ಸ್ಥಾನ
ಡಾ.ಜಿ.ಪರಮೇಶ್ವರ್ ಅವರು 1951 ಆಗಸ್ಟ್ 6ರಂದು ತುಮಕೂರು ತಾಲೂಕಿನ ಗೊಲ್ಲಳ್ಳಿಯಲ್ಲಿ ಜನಿಸಿದರು. ಇವರ ಬಾಲ್ಯ, ಶಿಕ್ಷಣ, ರಾಜಕೀಯ ಜೀವನದ ಕುರಿತು ಮಾಹಿತಿ ಇಲ್ಲಿದೆ ನೋಡಿ.
ತುಮಕೂರು: ಡಾ.ಜಿ ಪರಮೇಶ್ವರ(G Parameshwara) ಅವರು 1951 ಆಗಸ್ಟ್ 6ರಂದು ತುಮಕೂರು ತಾಲೂಕಿನ ಗೊಲ್ಲಳ್ಳಿಯಲ್ಲಿ ತಂದೆ-ಗಂಗಾಧರಯ್ಯ, ತಾಯಿ-ಗಂಗಮಾಳಮ್ಮ ಮಗನಾಗಿ ಜನಿಸುತ್ತಾರೆ. ಬಳಿಕ ಪ್ರಾರಂಭಿಕ ವಿದ್ಯಾಭ್ಯಾಸದಿಂದ ಪಿಯುಸಿವರೆಗೆ ತಮ್ಮ ಸ್ವಂತ ಊರಿನಲ್ಲಿಯೇ ಓದುತ್ತಾರೆ. ನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಎಂಎಸ್ಸಿ ಪದವಿ ಮುಗಿಸಿ, ನಂತರ ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸುತ್ತಾರೆ. ಬಳಿಕ ಸಸ್ಯ ಶರೀರಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿ, ನಂತರ, ಪರಮೇಶ್ವರ ಅವರು ವಿದೇಶಕ್ಕೆ ಹೋದರು. ಅಲ್ಲಿ ಸಸ್ಯ ಶರೀರಶಾಸ್ತ್ರದಲ್ಲಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್‌ಡಿ ಪಡೆದರು.
ಅಚ್ಚರಿಯ ವಿಷಯ
ಇವರು ಚಿಕ್ಕ ವಯಸ್ಸಿನಲ್ಲಿಯೇ ಎನ್‌ಸಿಸಿ ಸೇರಿರುತ್ತಾರೆ. ಅಚ್ಚರಿಯ ವಿಷಯವೆಂದರೆ ಇವರೊಬ್ಬ ಉತ್ತಮ ಕ್ರೀಡಾಪಟುವಾಗಿದ್ದು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 100 ಮೀಟರ್ ರೇಸ್ 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ದಾಖಲೆ ಹೊಂದಿದ್ದಾರೆ. ಬಳಿಕ ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾದಿಂದ ಮರಳಿದ ನಂತರ ಸಿದ್ಧಾರ್ಥ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾವಿದ್ಯಾಲಯದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು, ನಾನು ಹಿಂದೆ ಉಪಮುಖ್ಯಮಂತ್ರಿಯಾಗಿದ್ದವನು; ಡಾ ಜಿ ಪರಮೇಶ್ವರ್
ರಾಜಕೀಯ ಜೀವನ
ಇನ್ನು ಇವರ ತಂದೆ ಎಂಎಲ್ಸಿ ಆಗಿದ್ದವರು. ಡಾ.ಜಿ ಪರಮೇಶ್ವರ 1989ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ಮೊದಲು 1989ರಲ್ಲಿ ಮಧುಗಿರಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಶಾಸಕರಾಗುತ್ತಾರೆ. 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಬಳಿಕ 1994ರಲ್ಲಿ ಎರಡನೇ ಬಾರಿಗೆ ಮಧುಗಿರಿಯಲ್ಲಿ ಸೋಲುತ್ತಾರೆ. ಬಳಿಕ ಮತ್ತೆ 1999, 2004ರ ಮಧುಗಿರಿಯಲ್ಲಿ ಗೆಲುವು ಸಾಧಿಸುತ್ತಾರೆ. ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಉತ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ ಸಚಿವ, ಕಾರ್ಮಿಕ ಇಲಾಖೆ, ಸಣ್ಣ ನಿರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕ್ಷೇತ್ರ ಬದಲಾವಣೆ
2008ರಲ್ಲಿ ಜಿ. ಪರಮೇಶ್ವರ ಕ್ಷೇತ್ರ ಬದಲಾವಣೆ ಮಾಡಿ, 2008ರಲ್ಲಿ ಕೊರಟಗೆರೆಯಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗುತ್ತಾರೆ. 2010ರಿಂದ 2018ರವರೆಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ ಅವರು 2013ರಲ್ಲಿ ಕೊರಟಗೆರೆಯಿಂದ ಸ್ಪರ್ಧೆಮಾಡಿ ಸೋಲು ಕಾಣುವ ಮೂಲಕ ಸಿ.ಎಂ.ಸ್ಥಾನ ವಂಚಿತರಾಗುತ್ತಾರೆ.
ಬಳಿಕ 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರಾಗಿ ಕಾರ್ಯ ಮಾಡುತ್ತಾರೆ. ಮತ್ತೆ 2018ರಲ್ಲಿ ಕೊರಟಗೆರೆ ಕ್ಷೇತ್ರ ಮತ್ತೆ ಅವರನ್ನ ಶಾಸಕರಾಗಿ ಆಯ್ಕೆ ಮಾಡುತ್ತೆ. ಆಗ ಸಮಿಶ್ರ ಸರ್ಕಾರದಲ್ಲಿ ಡಿ.ಸಿ.ಎಂ ಆಗಿ ಆಯ್ಕೆ(ಕಾಂಗ್ರೆಸ್ ಮತ್ತು ಜೆ.ಡಿ.ಎಸ್.)ಯಾಗುತ್ತಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೂಡ ಕಾರ್ಯ ಮಾಡಿದ ಅವರು ‘2023ರಲ್ಲಿ ಕೊರಟಗೆರೆಯಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದು, ಈ ಮೂಲಕ ಒಟ್ಟು 7ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 5ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸೋಲು ಕಂಡಿದ್ದಾರೆ. ಜೊತೆಗೆ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಅಧಿಕಾರ ಬಂದ ಮೇಲೆ ವರಸೆ ಬದಲು ಮಾಡ್ತಾ ಕಾಂಗ್ರೆಸ್ ? ಗ್ಯಾರಂಟಿಗಳಿಗೆ ಕಂಡೀಷನ್ಸ್ ಅಪ್ಲೈ : ಜಿ ಪರಮೇಶ್ವರ
ಸದ್ಯ ದಲಿತ ಸಿಎಂ ರೇಸ್ನಲ್ಲಿದ್ದ ಪರಮೇಶ್ವರ
ಡಾ. ಜಿ. ಪರಮೇಶ್ವರ 2018 ರ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದರು. ಆ ಮೂಲಕ ಇವರು ಕರ್ನಾಟಕದ 8ನೇ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಮುಖಂಡರಾಗಿರುವ ಇವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ರಾಜ್ಯದ ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿದ್ದಾರೆ. ಸತತ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಅತಿ ದೀರ್ಘ ಕಾಲ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ರೇಸ್ನಲ್ಲಿ ಇವರು ಹೆಸರಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ