Sarvagna Nagar Election Results: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಸೋಲಿಲ್ಲದ ಸರದಾರ ಜಾರ್ಜ್-ಕೇಸರಿ ಕಲಿ ಪದ್ಮನಾಭರೆಡ್ಡಿ ಕಾದಾಟ
Sarvagna Nagar Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಸರ್ವಜ್ಞನಗರ ಕ್ಷೇತ್ರದಲ್ಲಿ ಶೇ. 49.10 ರಷ್ಟು ಮತದಾನವಾಗಿತ್ತು.

Sarvagna Nagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಸರ್ವಜ್ಞನಗರ ಕ್ಷೇತ್ರದಲ್ಲಿ (Sarvagna Nagar Assembly Elections 2023) ಶೇ. 49.10ರಷ್ಟು ಮತದಾನವಾಗಿತ್ತು. ಆಧುನಿಕತೆಯ ಬೆಡಗು ಮತ್ತು ಬಡತನದ ಕೊರಗು ಎರಡೂ ಸಮ ಪ್ರಮಾಣದಲ್ಲಿ ಮಿಳಿತಗೊಂಡಿರುವ ಸರ್ವಜ್ಞನಗರ ಕ್ಷೇತ್ರವು ಕಾಂಗ್ರೆಸ್‌ನ ಭದ್ರ ಕೋಟೆ, ಕನ್ನಡದ ಮಹಾಕವಿ ಸರ್ವಜ್ಞನ ಹೆಸರು ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೆ.ಜೆ. ಜಾರ್ಜ್ ಅವರದೇ ಪಾರುಪತ್ಯ. ಕ್ಷೇತ್ರದಲ್ಲಿ 1967ರಿಂದ 2018ರವರೆಗೆ ನಡೆದ ಬಹುತೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕೈ ಮೇಲಾಗಿದೆ. ಕ್ಷೇತ್ರದಲ್ಲಿ ಈ ಬಾರಿಯೂ ಜಯದ ಓಟ ಮುಂದುವರಿಸುವ ಉಮೇದಿನಲ್ಲಿದ್ದಾರೆ.
2004ರ ವಿಧಾನಸಭಾ ಚುನಾವಣೆಯಲ್ಲಿ ಭಾರತಿನಗರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದ ಜಾರ್ಜ್, ಕ್ಷೇತ್ರ ಮರು ವಿಂಗಡಣೆ ಬಳಿಕ 2008ರಲ್ಲಿ ಸರ್ವಜ್ಞನಗರ ಕ್ಷೇತ್ರಕ್ಕೆ ವಲಸೆ ಬಂದರು. ದೊಡ್ಡ ಸಂಖ್ಯೆಯ ಮುಸ್ಲಿಂ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಇತರೆ ಸಮುದಾಯಗಳ ಮತದಾರರ ಮನ ಗೆದ್ದಿರುವ ಜಾರ್ಜ್ ಭದ್ರವಾಗಿ ನೆಲೆಯೂರಿದ್ದಾರೆ. ಪ್ರತಿ ಚುನಾವಣೆಯಲ್ಲೂ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಲೇ ಸಾಗಿರುವ ಸೋಲಿಲ್ಲದ ಸರದಾರ ಜಾರ್ಜ್‌ಗೆ ಸದ್ಯ ಕೇಸರಿ ಕಲಿ ಪದ್ಮನಾಭರೆಡ್ಡಿ ಪ್ರಮುಖ ಎದುರಾಳಿಯಾಗಿದ್ದಾರೆ.
ಸರ್ವಜ್ಞ ಕ್ಷೇತ್ರದಲ್ಲಿ ಸುಮಾರು 3.60 ಲಕ್ಷ ಮತದಾರರಿದ್ದಾರೆ. ಕಾಂಗ್ರೆಸ್ ನ ಮತ ಬ್ಯಾಂಕ್ ಎಂದೇ ಪರಿಗಣಿಸಲಾದ ಬಲಾಬ ಮುಸ್ಲಿಂ ಸಮುದಾಯದ ಮತದಾರರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಕ್ಷೇತ್ರಗಳ ಪೈಕಿ ಸರ್ವಜ್ಞನಗರವೂ ಒಂದು. ಕ್ಷೇತ್ರದಲ್ಲಿ 1.20 ಲಕ್ಷ ಮಂದಿ ಮುಸ್ಲಿಂ, 40 ಸಾವಿರ ಮಂದಿ ಕ್ರಿಶ್ಚಿಯನ್, 20 ಸಾವಿರ ಮಂದಿ ಪರಿಶಿಷ್ಟಮತದಾರರಿದ್ದಾರೆ. ಉಳಿದಂತೆ ರೆಡ್ಡಿ, ಒಕ್ಕಲಿಗ ಸಮಾಜದ ಮತದಾರರಿದ್ದಾರೆ. ಪಕ್ಷಗಳ ಸೋಲು ಗೆಲುವು ನಿರ್ಧರಿಸುವಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ ಹೀಗಾಗಿ, ಅಲ್ಪಸಂಖ್ಯಾತರ ಓಲೈಕೆ ಹೇಗೆ ಎಂಬ ಚಿಂತೆ ಕಮಲ ಪಾಳೆಯವನ್ನು ಕಾಡುತ್ತಿದೆ.
ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಪರಿಶಿಷ್ಟರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕಿರಿದಾದ ರಸ್ತೆಗಳು, ಜನಸಂಖ್ಯೆಯ ಒತ್ತಡ, ವಾಹನ ದಟ್ಟಣೆ, ಅಡ್ಡಾದಿಡ್ಡಿ ಬೆಳೆದಿರುವ ಗಲ್ಲಿಗಳು, ಕುಡಿಯುವ ನೀರಿಗೆ ತತ್ವಾರ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ. ಅಭಿವೃದ್ಧಿ ಕಡಿಮೆ, ಸಮಸ್ಯೆ ಹೆಚ್ಚು ಎಂಬುದು ಸ್ಥಳೀಯರ ಆರೋಪ.