ಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ (Chamarajanagar Lok Sabha Election 2024) ಈ ಬಾರಿ ಕಾಂಗ್ರೆಸ್‌ನಿಂದ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ. ಮಹದೇವಪ್ಪ ಅವರ ಮಗ ಸುನೀಲ್ ಬೋಸ್ (Sunil Bose) ಅವರು ಬಿಜೆಪಿಯ ಎಸ್. ಬಾಲರಾಜು (S Balaraju) ಅವರನ್ನು ಸೋಲಿಸಿದ್ದಾರೆ. ಇವರಿಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಲೆಯಿಂದ ಬಾಲರಾಜು ಈ ಬಾರಿ ಗೆಲುವಿನ ನಗು ಬೀರಲಿದ್ದಾರೆ ಎನ್ನಲಾಗಿತ್ತು. ಆದರೆ, ತಂದೆಯ ವರ್ಚಸ್ಸಿನಿಂದಾಗಿ ಸುನೀಲ್ ಬೋಸ್ ಗೆಲುವಿನ ನಗೆ ಬೀರಿದ್ದಾರೆ.
ಈ ಬಾರಿ ಎಸ್ ಬಾಲರಾಜು ಅಥವಾ ಸುನೀಲ್ ಬೋಸ್ ಇವರಿಬ್ಬರಲ್ಲಿ ಯಾರೇ ಗೆದ್ದರೂ ಅವರು ಮೊದಲ ಬಾರಿಗೆ ಸಂಸದ್ ಪ್ರವೇಶಿಸಲಿದ್ದರು. 2019ರ ಚುನಾವಣೆಯಲ್ಲಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಅವರ ಎದುರು ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್ ಕೇವಲ 1,800 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.
ಇದನ್ನೂ ಓದಿ: Lok Sabha Elections: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಂದು ಇಂಡಿಯ ಬ್ಲಾಕ್ ಸಭೆ
ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಬಹಳ ಮಹತ್ವದ ಕ್ಷೇತ್ರವಾಗಿದೆ. ಇದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ವರುಣ ಇದೇ ಚಾಮರಾಜನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಇದು ಸಿದ್ದರಾಮಯ್ಯನವರ ಪಾಲಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅವರು ಭಾರೀ ಕಸರತ್ತು ನಡೆಸಿದ್ದರು.
1962ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ರಚನೆಯಾಯಿತು. ಅಂದಿನಿಂದಲೂ ಇದು ಕಾಂಗ್ರೆಸ್‌ನ ಭದ್ರಕೋಟೆಯೆಂದರೂ ತಪ್ಪಾಗಲಾರದು. ಆದರೆ, ಕಳೆದ ಬಾರಿ ಕೆಲವೇ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆಲುವು ಕಂಡಿದ್ದರು.
ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ: ನಾಳೆ ಮೈಸೂರು-ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 14 ಮಂದಿ ಅಂತಿಮ ಕಣದಲ್ಲಿದ್ದಾರೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯಿದೆ. ವೀರಶೈವ, ಲಿಂಗಾಯತ ಹಾಗೂ ದಲಿತರ ಮತಗಳು ನಿರ್ಣಾಯಕವಾಗಿರುವ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಡೆಗೆ ಒಲವು ಹೆಚ್ಚಾಗಿದೆ. ಆದರೆ, ಹಾಲಿ ಸಂಸದರು ಬಿಜೆಪಿಯವರಾದ್ದರಿಂದ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಇಲ್ಲಿ ಕಮಲವನ್ನು ಅರಳಿಸಲು ಶ್ರಮ ವಹಿಸಿದ್ದರು.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:31 am, Tue, 4 June 24