ಕೊಡಗು ಮೈಸೂರು ಲೋಕಸಭಾ ಚುನಾವಣೆ 2024 ಫಲಿತಾಂಶ: ಯದುವೀರ್ ಒಡೆಯರ್ ಗೆಲುವು
Mysuru Kodagu Lok Sabha Election Results 2024 Live Counting Updates: ಕರ್ನಾಟಕದಲ್ಲಿ 2 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಒಡೆಯರ್ ಗೆಲುವು ಸಾಧಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ (Mysuru- Kodagu Lok Sabha Constituency) ಈ ಬಾರಿ ಭಾರೀ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಒಂದಾಗಿತ್ತು. ಈ ಬಾರಿ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ (Lok Sabha Elections 2024) ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಬಿಜೆಪಿಯ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೇ ಈ ಬಾರಿಯೂ ಟಿಕೆಟ್ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಯದುವೀರ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು. ಇದು ಈ ಭಾಗದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನವನ್ನೂ ಉಂಟುಮಾಡಿತ್ತು. ಯದುವೀರ್ ಒಡೆಯರ್ ಅವರ ಎದುರಾಳಿಯಾಗಿ ಕಾಂಗ್ರೆಸ್ನಿಂದ ಎಂ. ಲಕ್ಷಣ್ (M Lakshman) ಸ್ಪರ್ಧಿಸಿ ಸೋಲುಂಡಿದ್ದಾರೆ.
2009ರ ಚುನಾವಣೆಯಲ್ಲಿ ಕೊಡಗು ಜಿಲ್ಲೆಯನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು. ಮೈಸೂರು- ಕೊಡಗು ಕ್ಷೇತ್ರದಲ್ಲಿ ನಡೆದಿರುವ ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಅತಿ ಹೆಚ್ಚು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೈಸೂರು ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 4 ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದರು. ಈ ಬಾರಿ ಯದುವೀರ್ ಒಡೆಯರ್ ಸ್ಪರ್ಧಿಸಿದ್ದು, ಗೆಲುವಿನ ನಗು ಬೀರಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳಿಂದಲೇ ನಾವೆಲ್ಲ ಗೆಲ್ಲಲಿದ್ದೇವೆ: ಯದುವೀರ್ ಕೃಷ್ಣದತ್ ಒಡೆಯರ್
ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 1998ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಚ್. ವಿಜಯಶಂಕರ್ 1,03,024 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಭಾರೀ ಗೆಲುವು ಕಂಡಿದ್ದರು. ಈ ಮೂಲಕ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿತ್ತು. 1999ರಲ್ಲಿ ಮತ್ತೆ ಕಾಂಗ್ರೆಸ್‌ನಿಂದು ಗೆದ್ದು ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಲೋಕಸಭೆ ಪ್ರವೇಶಿಸಿದ್ದರು. 2004ರಲ್ಲಿ ಸಿ.ಎಚ್. ವಿಜಯಶಂಕರ್ ಬಿಜೆಪಿಯಿಂದ ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು.
2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಪತ್ರಕರ್ತರಾಗಿದ್ದ ಪ್ರತಾಪ ಸಿಂಹ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಯಿತು. ಸತತವಾಗಿ ಗೆಲುವು ಕಂಡಿದ್ದ ಮತ್ತು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗದಿದ್ದುದಕ್ಕೆ ಬಿಜೆಪಿ ಪಕ್ಷದ ಕೆಲವು ನಾಯಕರೇ ಕಾರಣ ಎಂದು ಅವರ ಹಿಂಬಾಲಕರಲ್ಲಿ ಅಸಮಾಧಾನ ಉಂಟಾಗಿತ್ತು. ಆದರೆ, ನಂತರ ಎಲ್ಲರೂ ಒಟ್ಟಾಗಿ ಯದುವೀರ್ ಒಡೆಯರ್ ಪರವಾಗಿ ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: ಪ್ರತಿ ಬಾರಿ ಮೈಸೂರಿನಲ್ಲಿ ಕದ್ದು ಮುಚ್ಚಿ ಪ್ರತಾಪ್ ಸಿಂಹಗೆ ಮತ ಹಾಕುತ್ತಿದ್ವಿ: ಒಪ್ಪಿಕೊಂಡ ಜೆಡಿಎಸ್ ನಾಯಕ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 18 ಮಂದಿ ಸ್ಪರ್ಧಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ನಡುವೆ ಮಾತ್ರ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ರಾಜ್ಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ. ಲಕ್ಷ್ಮಣ್ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರು.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:36 am, Tue, 4 June 24