Manipur Elections: ಮಣಿಪುರ ಚುನಾವಣೆ ಬಗ್ಗೆ ಮಾಧ್ಯಮಗಳಿಗೇಕೆ ಆಸಕ್ತಿಯೇ ಇಲ್ಲ: ಇದು ಪ್ರತ್ಯಕ್ಷದರ್ಶಿ ವರದಿಗಾರನ ವಿಶ್ಲೇಷಣೆ
Manipur Assembly Elections: ಮಣಿಪುರದ ಬಗ್ಗೆ ಮಾತ್ರ ಎಂದಿನಂತೆ ಈ ವರ್ಷವು ಮಾಧ್ಯಮಗಳು ಗಮನ ಹರಿಸುತ್ತಿಲ್ಲ. ಈಶಾನ್ಯ ರಾಜ್ಯಗಳು ಕೇವಲ ಹಿಂಸಾಚಾರ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಮಾತ್ರ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಮಾಧ್ಯಮದ ಚುನಾವಣಾ ವರದಿಗಾರಿಕೆಯಲ್ಲಿ (Assembly Elections) ಮೇಲುಗೈ ಸಾಧಿಸಿವೆ. ಪ್ರಶಾಂತ್ ಕಿಶೋರ್ರ ಐ-ಪ್ಯಾಕ್ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) (Trinamool Congress – TMC) ಕಣಕ್ಕೆ ಇಳಿದಿದೆ ಎಂಬ ಕಾರಣದಿಂದ ಗೋವಾ (Goa) ರಾಜ್ಯದ ಬೆಳವಣಿಗೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಪದೇಪದೆ ಮುಖ್ಯಮಂತ್ರಿಗಳ ಬದಲಾವಣೆಗೆ ಸಾಕ್ಷಿಯಾದ ಮತ್ತು ಹರೀಶ್ ರಾವತ್ ಅವರ ಸ್ಪರ್ಧೆಯ ಕಾರಣದಿಂದ ಉತ್ತರಾಖಂಡದ ಬಗ್ಗೆ ಮಾಧ್ಯಮದ ಗಮನ ಹರಿದಿದೆ. ಆದರೆ ಮಣಿಪುರದ (Manipur) ಬಗ್ಗೆ ಮಾತ್ರ ಎಂದಿನಂತೆ ಈ ವರ್ಷವು ಮಾಧ್ಯಮಗಳು ಗಮನ ಹರಿಸುತ್ತಿಲ್ಲ. ನನಗೆ ಇದರಲ್ಲಿ ಅಚ್ಚರಿಯಾಗುವಂಥದ್ದೇನು ಕಾಣಿಸಲಿಲ್ಲ. ಈಶಾನ್ಯ ರಾಜ್ಯಗಳು ಕೇವಲ ಹಿಂಸಾಚಾರ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಮಾತ್ರ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತವೆ. ರಾಮ್ ಮಾಧವ್ ಅವರು ಬಿಜೆಪಿ ರಾಷ್ಟ್ರೀಯ ಘಟಕದಲ್ಲಿ ಈಶಾನ್ಯ ಭಾರತ ಮತ್ತು ಕಾಶ್ಮೀರದ ವಿದ್ಯಮಾನಗಳ ಉಸ್ತುವಾರಿಯಾಗಿದ್ದಾಗ ಈಶಾನ್ಯ ರಾಜ್ಯಗಳ ಬಗ್ಗೆ ಮಾಧ್ಯಮಗಳು ನಿಯಮಿತವಾಗಿ ವರದಿ ಮಾಡುತ್ತಿದ್ದವು.
ಅದನ್ನೊಂದು ಅಪವಾದ ಎಂದು ಪಕ್ಕಕ್ಕಿಟ್ಟು ಯೋಚಿಸೋಣ. ಆಗ ಬಿಜೆಪಿಯು ವಿಸ್ತರಣೆಗಾಗಿ ಹಾತೊರೆಯುತ್ತಿತ್ತು. ಚುನಾವಣೆ ಘೋಷಣೆಯಾಗಿರುವ ರಾಜ್ಯದಲ್ಲಿ ಎಲ್ಲ ಹಿರಿಯ ನಾಯಕರು ಠಿಕಾಣಿ ಹೂಡುತ್ತಿದ್ದರು. ಕಳೆದ ಬಾರಿಯ ಮಣಿಪುರ ವಿಧಾನಸಭೆ ಚುನಾವಣೆ ವೇಳೆ ಈ ಲೇಖಕ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸಂಚರಿಸಿದ್ದ. ಡಾ.ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಪ್ರಕಾಶ್ ಜಾವಡೇಕರ್, ರಾಮ್ ಮಾಧವ್ ಮತ್ತು ಇತರ ಆರ್ಎಸ್ಎಸ್ ಕಾರ್ಯಕಾರಿಗಳೊಂದಿಗೆ ಒಮ್ಮೆ ಉಪಾಹಾರಕೂಟವನ್ನೂ ಕರೆಯಲಾಗಿತ್ತು. ರಾಮ್ ಮಾಧವ್ ಅವರು ಪತ್ರಕರ್ತರೊಂದಿಗೆ ನಿಯಮಿತ ಸಂಪರ್ಕದಲ್ಲಿ ಇರುತ್ತಿದ್ದರು. ಪತ್ರಕರ್ತರು ಕೇಳಬಯಸುವ ಪ್ರಶ್ನೆಗಳಿಗೆ ರಾಜಕಾರಿಣಿಗಳು ಉತ್ತರ ಕೊಡಬೇಕು ಎಂದು ನಿರೀಕ್ಷಿಸುತ್ತಿದ್ದರು. ಅದಕ್ಕೆ ಪೂರಕ ವ್ಯವಸ್ಥೆಗಳನ್ನೂ ಮಾಡುತ್ತಿದ್ದರು. ಈ ವಿದ್ಯಮಾನವನ್ನು ನಾನು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಗಮನಿಸಿದ್ದೇನೆ.
ಕಾಂಗ್ರೆಸ್ನ ಕಥೆ ಸಂಪೂರ್ಣ ಭಿನ್ನ. ಚುನಾವಣೆ ಮಧ್ಯದಲ್ಲಿದ್ದರೂ ಮಣಿಪುರದ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಬಾಗಿಲು ಹಾಕಿತ್ತು. ಒಂದು ರಾಜಕೀಯ ವಿಶ್ಲೇಷಣೆಗೆ ಸಂಬಂಧಿಸಿದ ವರದಿಗಾಗಿ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದುಕೊಳ್ಳಲೆಂದು ಅಲ್ಲಿಗೆ ಹೋಗಿದ್ದೆ. ಆದರೆ ಕಾರ್ಯಕಾರಿ ಸಮಿತಿಯ ಯಾವೊಬ್ಬ ಸದಸ್ಯನೂ ಅಲ್ಲಿರಲಿಲ್ಲ. ಇದೇ ಕಾರಣಕ್ಕೆ ಈಶಾನ್ಯ ಭಾರತದಲ್ಲಿ ನಡೆದ ಹಿಂದಿನ ವಿಧಾನಸಭಾ ಚುನಾವಣೆಗಳು ಪ್ರಧಾನ ಧಾರೆ ಮಾಧ್ಯಮಗಳ ಗಮನ ಸೆಳೆದಿತ್ತು. 2014ರ ಸೋಲಿನ ನಂತರ ಕಾಂಗ್ರೆಸ್ ಪಕ್ಷವು ಈಶಾನ್ಯ ಭಾರತದಲ್ಲಿ ತೀರಾ ದುರ್ಬಲವಾದಂತೆ ಕಂಡು ಬಂತು. 2017ರ ಚುನಾವಣೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರ ದಕ್ಕಿಸಿಕೊಳ್ಳಲು ಬೇಕಾಗುವಷ್ಟು ಸದಸ್ಯ ಬಲವನ್ನು ತನ್ನದಾಗಿಸಿಕೊಂಡು ಸರ್ಕಾರ ರಚಿಸಿತು.
ಪಕ್ಷಾಂತರದ ಮೂಲಕ ಹಲವು ಕಾಂಗ್ರೆಸ್ ನಾಯಕರನ್ನು ಬಿಜೆಪಿಯು ತನ್ನ ತೆಕ್ಕೆಗೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 2022ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಸೋಲಿಸಲು ಬಿಜೆಪಿಯು ಹೊಂದಾಣಿಕೆ ಮಾಡಿಕೊಂಡಿದೆ. ಇಬೊಬಿ ಸಿಂಗ್ ನೇತೃತ್ವದಲ್ಲಿ ರಾಜ್ಯದಲ್ಲಿ ಸತತ 15 ವರ್ಷಗಳ ಆಡಳಿತ ನಡೆದ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಈ ವಿದ್ಯಮಾನವು ಸೂಕ್ತರೀತಿಯಲ್ಲಿ ಬಿಂಬಿಸುತ್ತದೆ. ಬಿಜೆಪಿಯನ್ನು ಎದುರಿಸಲು ಇತರ ಪಕ್ಷಗಳ ನೆರವನ್ನು ಕಾಂಗ್ರೆಸ್ ಎದುರು ನೋಡುತ್ತಿದೆ.
ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ವರದಿ ಮಾಡುವುದು ಯಾವಾಗಲೂ ಸವಾಲಿನ ಸಂಗತಿ. ನಾನು ಮಣಿಪುರ, ನಾಗಾಲ್ಯಾಂಡ್ ಮತ್ತು ಮಿಝೋರಾಂಗಳಲ್ಲಿ ವಿಧಾನಸಭೆ ಚುನಾವಣೆಗಳನ್ನು ವರದಿ ಮಾಡಿದ್ದೇನೆ. ಈ ವರ್ಷದ ಮಣಿಪುರ ಚುನಾವಣೆಗೆ ಮಾಧ್ಯಮಗಳಲ್ಲಿ ಹೆಚ್ಚಿನ ಮಹತ್ವ ಸಿಗುತ್ತಿಲ್ಲ ಎಂಬ ಸಂಗತಿ ಇದೇ ಕಾರಣಕ್ಕೆ ನನಗೆ ಮಹತ್ವದ ವಿದ್ಯಮಾನ ಎನಿಸಲಿಲ್ಲ. ಉತ್ತರ ಭಾರತದ ರಾಜಕಾರಣ ಮತ್ತು ಚುನಾವಣಾ ಪ್ರಚಾರ ವೈಖರಿ ನೋಡಿದವರಿಗೆ ಈಶಾನ್ಯ ಭಾರತದ ಚುನಾವಣಾ ರಾಜಕಾರಣವು ತೀರಾ ನೀರಸ, ಔಪಚಾರಿಕ ಮತ್ತು ಸಂಘಟಿತ ಎನಿಸಬಹುದು. ಪ್ರಮುಖ ವಿದ್ಯಮಾನಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸುವ ಆಧುನಿಕ ಪರಂಪರೆ ನಾಗಾಲ್ಯಾಂಡ್ನಲ್ಲಿ ಆರಂಭವಾಗಿದೆ. ಅಲ್ಲಿ ಮುಖ್ಯ ಅಭ್ಯರ್ಥಿಗಳು ಸಾರ್ವಜನಿಕ ಸ್ಥಳಗಳಿಗೆ ಬಂದು ತಮ್ಮ ವಿಚಾರ ಮಂಡಿಸುತ್ತಾರೆ. ಜನರೊಂದಿಗೆ ಚರ್ಚೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.
ಮಣಿಪುರದಲ್ಲಿ ಹಾಗಲ್ಲ. ಅಲ್ಲಿನ ಚರ್ಚ್ಗೆ ಜನರ ಬದುಕಿನ ಮೇಲೆ ಹಿಡಿತವಿದೆ. ಮಿಝೊರಾಮ್ ಅಥವಾ ನಾಗಾಲ್ಯಾಂಡ್ಗಳಿಗೆ ಹೋಲಿಸಿದರೆ ಮಣಿಪುರದಲ್ಲಿ ವಿಸ್ತಾರವಾದ ಸಪಾಟಾದ ಭೂಪ್ರದೇಶವಿದೆ. ಆದರೂ ಉತ್ತರ ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ರಾಜಕೀಯ ಚಟುವಟಿಕೆಗಳು ಅತ್ಯಂತ ಕಡಿಮೆ. ಮಣಿಪುರ ಮತ್ತು ಈಶಾನ್ಯ ಭಾರತದ ಇತರ ಪ್ರದೇಶಗಳ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಸಂಪರ್ಕ. ಭ್ರಷ್ಟಾಚಾರ ಇಲ್ಲಿನ ರಾಜಕಾರಣದ ಅವಿಭಾಜ್ಯ ಅಂಗ. ಕೇಂದ್ರ ಸರ್ಕಾರದ ತಿಜೋರಿಯಿಂದ ಹರಿದುಬರುವ ಹಣ ಈ ಭ್ರಷ್ಟಾಚಾರಿಗಳ ಖಜಾನೆಗೆ ಸೇರುತ್ತದೆ. ಚುನಾವಣೆ ವೇಳೆ ಇಲ್ಲಿ ಹಣ ವಿನಿಮಯ ಮಾಡಿಕೊಳ್ಳುತ್ತಾರೆ. ಅಭಿವೃದ್ಧಿಗಾಗಿ ಹರಿದು ಬರುವ ಹಣದಿಂದ ಈ ಮೊತ್ತವನ್ನು ಮತ್ತೆ ಭರ್ತಿ ಮಾಡಿಕೊಳ್ಳಲಾಗುತ್ತದೆ.
ಈಶಾನ್ಯ ಭಾರತದಲ್ಲಿ ರಸ್ತೆ ಸಂಪರ್ಕವಂತೂ ವಿಪರೀತ ಹದಗೆಟ್ಟಿದೆ. ಸೂಚಿತ ಕಾಮಗಾರಿಗಳ ಮೇಲೆ ಹಣವನ್ನು ಎಂದಿಗೂ ಖರ್ಚು ಮಾಡುವುದೇ ಇಲ್ಲ. ಸರ್ಕಾರದ ನಕಾಶೆಗಳ ಮೇಲೆ ಮಾತ್ರ ಇರುತ್ತವೆ. ಭೂಮಿಯ ಮೇಲೆ ನೀವು ಅವನ್ನು ಹುಡುಕುವಂತಿಲ್ಲ. ನಕಾಶೆ ನೋಡಿ ಕಿಲೋಮೀಟರ್ ಲೆಕ್ಕಹಾಕುವುದು ತಪ್ಪಾಗುತ್ತದೆ. ವಾಸ್ತವವಾಗಿ ಒಂದು ನಿರ್ದಿಷ್ಟ ಅಂತರ ಕ್ರಮಿಸಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಿಯೇ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು. ಸಾಕ್ಷರತೆ ಮತ್ತು ವಿದ್ಯಾಭ್ಯಾಸದ ಪ್ರಮಾಣವು ಉತ್ತರ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಮಣಿಪುರದಲ್ಲಿ ಹೆಚ್ಚು. ಆದರೆ ಹೆಂಗಸರ ಬಗ್ಗೆ ಗೌರವ ಮಾತ್ರ ಇಲ್ಲ. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಉತ್ತರ ಭಾರತ ಮತ್ತು ಭಾರತದ ಮುಖ್ಯ ಭೂಪ್ರದೇಶದ ಸಾಮಾಜಿಕ ವಾತಾವರಣಕ್ಕೆ ಹೋಲಿಸಿದರೆ ಮಣಿಪುರದ ಸಮಾಜ ಹೆಚ್ಚು ಮುಕ್ತವಾದುದು. ಭಾರತದ ಪ್ರಧಾನ ಧಾರೆಯ ರಾಜಕೀಯ ಪಕ್ಷಗಳಿಗೆ ಈಶಾನ್ಯ ಭಾರತದಲ್ಲಿ ಅಷ್ಟೇನೂ ಪ್ರಾಮುಖ್ಯತೆಯಿಲ್ಲ. ಬಿಜೆಪಿ ನೇತೃತ್ವದ ಎನ್ಡಿಎ-1 ಅಧಿಕಾರ ಅವಧಿಯಲ್ಲಿ ಈಶಾನ್ಯ ಭಾರತಕ್ಕೆ ಹೆಚ್ಚಿನ ಅನುದಾನದ ಜೊತೆಗೆ ಪ್ರಾಮುಖ್ಯತೆಯೂ ಸಿಕ್ಕಿತ್ತು. ಈಗ ಈಶಾನ್ಯ ಭಾರತದಲ್ಲಿ ಸಂಚರಿಸುವಾಗ ಕಾಂಗ್ರೆಸ್ ಏಕಿಷ್ಟು ಕಳಾಹೀನವಾಗಿದೆ ಎಂಬ ಪ್ರಶ್ನೆ ಕಾಡುತ್ತದೆ. ಒಂದೇ ಒಂದು ಸೋಲಿನ ನಂತರ ಕಾಂಗ್ರೆಸ್ ಏಕಿಷ್ಟು ಹತಾಶ ಸ್ಥಿತಿ ಮುಟ್ಟಿತು ಎಂಬುದು ಉತ್ತರ ಹುಡುಕಬೇಕಾದ ಪ್ರಶ್ನೆಯಾಗಿದೆ. ಕಾಂಗ್ರೆಸ್ನ ಕೇಂದ್ರ ಘಟಕದ ನಾಯಕತ್ವದಲ್ಲಿರುವ ಗೊಂದಲವು ಹಲವು ರಾಜ್ಯ ಘಟಕಗಳಲ್ಲಿಯೂ ಪ್ರತಿಧ್ವನಿಸುತ್ತಿದೆ. ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ ಶಾಸಕರು ಗುಂಪುಗುಂಪಾಗಿ ಪಕ್ಷಾಂತರ ಮಾಡಿದರು. ಪಕ್ಷಾಂತರ ತಪ್ಪಿಸುವ ಸಾಮರ್ಥ್ಯವಿರುವ ಪ್ರಭಾವಶಾಲಿ ನಾಯಕನನ್ನು ಕಾಂಗ್ರೆಸ್ ಇಲ್ಲಿ ನೇಮಿಸಲೇ ಇಲ್ಲ.
ಇದೇ ಕಾರಣಕ್ಕೆ ಮಣಿಪುರವು ಮಾಧ್ಯಮಗಳ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಯಾವುದೇ ಜಾಥಾ ಅಥವಾ ಸಮಾವೇಶಗಳಲ್ಲಿ ಪಾಲ್ಗೊಳ್ಳಲೆಂದು ರಾಷ್ಟ್ರೀಯ ನಾಯಕರು ಮಣಿಪುರಕ್ಕೆ ಹೋಗಿಲ್ಲ. ಪ್ರಧಾನ ಧಾರೆಯ ರಾಜಕೀಯ ಪಕ್ಷಗಳು ಮಣಿಪುರದತ್ತ ಹೆಚ್ಚು ಗಮನ ಹರಿಸುತ್ತಿವೆ ಎಂದು ಹೇಳಲೂ ಸಾಧ್ಯವಿಲ್ಲ. ಎಲ್ಲರೂ ತಾತ್ಕಾಲಿಕ ಲಾಭಗಳಿಗಾಗಿ ಏನಾದರೊಂದು ಮಾಡುತ್ತಿದ್ದಾರೆ ಅಷ್ಟೇ. ಮಣಿಪುರದಲ್ಲಿ ಅಧಿಕಾರಕ್ಕೆ ಬರುತ್ತಿರುವ ಸರ್ಕಾರಗಳು ಸಹ, ಅಲ್ಲಿನ ಸರ್ಕಾರಿ ವ್ಯವಸ್ಥೆ ಪ್ರಾಯೋಜಿತ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹೆಚ್ಚು ಗಮನ ಕೊಡುತ್ತಿಲ್ಲ.
ಮಣಿಪುರ ಚುನಾವಣಾ ವಿದ್ಯಮಾನಗಳು ಮಾಧ್ಯಮಗಳ ಗಮನ ಸೆಳೆಯದಿರುವುದು ಸಹ ಈಶಾನ್ಯ ಭಾರತದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಬಾಂಗ್ಲಾ ವಲಸೆ ಮತ್ತು ಇತರ ಸಾಂಸ್ಕೃತಿಕ ಸಮಸ್ಯೆಗಳಿಗೂ ಮಣಿಪುರ ಪರಿಹಾರ ಕಂಡುಕೊಳ್ಳಬೇಕಿದೆ. ಜನಪ್ರಿಯ ಬೇಡಿಕೆಯ ಹೊರತಾಗಿಯೂ ಈಶಾನ್ಯ ಭಾರತಕ್ಕೆ ಪ್ರತ್ಯೇಕ ಕಾಲಮಾನ ಘೋಷಿಸಲು ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ.
ಈಶಾನ್ಯ ಭಾರತವು ತನ್ನ ಕಥೆ ಹೇಳಲು ಅವಕಾಶ ಸಿಗಬೇಕಿದೆ. ಕೊನೆಯದಾಗಿ, ಈ ಪ್ರದೇಶದ ಬಗ್ಗೆ ವಿಡಿಯೊ ಸ್ಟೋರಿಗಳು ಅಲ್ಲದಿದ್ದರೂ ಅಕ್ಷರ ರೂಪದಲ್ಲಿ ಅಲ್ಲಿನ ಬದುಕು ಬಿಂಬಿಸುವ ಸ್ಟೋರಿಗಳನ್ನು ಮಾಧ್ಯಮಗಳು ಪ್ರಕಟಿಸಬೇಕು. ಆಗ ಮಾತ್ರ ಈಶಾನ್ಯ ಭಾರತವು ಭಾರತದ ಪ್ರಧಾನಧಾರೆಯ ಭಾಗವಾಗಿ ಉಳಿದುಕೊಳ್ಳಬಲ್ಲದು. ಇಲ್ಲದಿದ್ದರೆ ಅದು ಅಳಿವಿನಂಚಿನ ರಾಜ್ಯ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಆಗುವುದಿಲ್ಲ.
ಇದನ್ನೂ ಓದಿ: ಮಣಿಪುರದಲ್ಲಿ ಚುನಾವಣೆಗೂ ಪೂರ್ವ ಬಿಜೆಪಿಗೆ ಜಾಕ್ಪಾಟ್; 40 ಸಹಕಲಾವಿದರೊಂದಿಗೆ ಕಮಲ ಪಕ್ಷಕ್ಕೆ ಸೇರ್ಪಡೆಯಾದ ಖ್ಯಾತ ನಟ
ಇದನ್ನೂ ಓದಿ: ಮಣಿಪುರ ವಿಧಾನಸಭೆ ಚುನಾವಣೆ; 40 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
Published On - 8:37 pm, Sun, 6 February 22