MBA in Temple Management: ದೇವಾಲಯಗಳ ಆಡಳಿತಕ್ಕೂ ಬಂತು ಎಂಬಿಎ ಪದವಿ! ವೃತ್ತಿಜೀವನದ ಹೊಸ ದಾರಿಯಾಗಿ ‘ಟೆಂಪಲ್ ಮ್ಯಾನೇಜ್ಮೆಂಟ್’
ಭಾರತದ ಪ್ರವಾಸೋದ್ಯಮದ ಬೆನ್ನೆಲುಬಾಗಿರುವ ಯಾತ್ರಾಸ್ಥಳಗಳ ವೃತ್ತಿಪರ ನಿರ್ವಹಣೆಗಾಗಿ, ಮಧ್ಯಪ್ರದೇಶದ ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯವು 'ದೇವಾಲಯ ನಿರ್ವಹಣೆಯಲ್ಲಿ ಎಂಬಿಎ' ಕೋರ್ಸ್ ಅನ್ನು ಆರಂಭಿಸಲು ಮುಂದಾಗಿದೆ. ದೇವಾಲಯಗಳ ದೈನಂದಿನ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಹಾಗೂ ಆರ್ಥಿಕ ನಿರ್ವಹಣೆಯಲ್ಲಿ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶ. ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳಲು ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

ಉಜ್ಜಯಿನಿ: ಭಾರತದಲ್ಲಿ ತೀರ್ಥಯಾತ್ರೆ ಎಂಬುದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿದಿಲ್ಲ, ಅದು ಪ್ರವಾಸೋದ್ಯಮದ ಬೆನ್ನೆಲುಬಾಗಿ ಬೆಳೆದಿದೆ. ಇಂತಹ ಬೃಹತ್ ಸಂಪನ್ಮೂಲ ಮತ್ತು ಭಕ್ತರ ಸಾಗರವನ್ನು ನಿರ್ವಹಿಸಲು ಈಗ ವೃತ್ತಿಪರರ ಅಗತ್ಯವಿದ್ದು, ಇದಕ್ಕಾಗಿ ‘ದೇವಾಲಯ ನಿರ್ವಹಣೆಯಲ್ಲಿ ಎಂಬಿಎ’ (MBA in Temple Management) ಕೋರ್ಸ್ ಆರಂಭವಾಗುತ್ತಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯವು (ವಿಕ್ರಮ್ ವಿಶ್ವವಿದ್ಯಾಲಯ) ಈ ವಿಶೇಷ ಕೋರ್ಸ್ ಅನ್ನು ಪ್ರಾರಂಭಿಸಲು ಮುಂದಾಗಿದೆ.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅನಿಲ್ ಕುಮಾರ್ ಶರ್ಮಾ ಅವರ ಪ್ರಕಾರ, ಈ ಕೋರ್ಸ್‌ಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ದೇವಾಲಯಗಳ ದೈನಂದಿನ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಕೋರ್ಸ್‌ನ ಮುಖ್ಯಾಂಶಗಳು:
ದೇವಾಲಯಗಳ ಆಡಳಿತ ಮಂಡಳಿಗಳಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡಲು ಯುವಜನರಿಗೆ ಹೊಸ ಹಾದಿ ತೆರೆಯಲಿದೆ. ಕೋರ್ಸ್‌ನ ಪಠ್ಯಕ್ರಮವನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸುತ್ತಲೇ, ಆಧುನಿಕ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಈ ಕೋರ್ಸ್ ಸಹಕಾರಿಯಾಗಲಿದೆ.
ಅಖಿಲ ಭಾರತ ಅರ್ಚಕರ ಒಕ್ಕೂಟದ ಸಲಹೆ:
ಈ ಉಪಕ್ರಮವನ್ನು ಸ್ವಾಗತಿಸಿರುವ ಅಖಿಲ ಭಾರತ ಅರ್ಚಕರ ಒಕ್ಕೂಟದ ಅಧ್ಯಕ್ಷ ಮಹೇಶ್ ಶರ್ಮಾ, ಇದೊಂದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಆದರೆ, ಈ ಕೋರ್ಸ್ ಕೇವಲ ಹಿಂದೂ ದೇವಾಲಯಗಳಿಗೆ ಸೀಮಿತವಾಗದೆ ಗುರುದ್ವಾರಗಳು, ಚರ್ಚ್‌ಗಳು, ಜೈನ ಮಂದಿರಗಳು ಮತ್ತು ಮಸೀದಿಗಳ ನಿರ್ವಹಣೆಯನ್ನು ಒಳಗೊಂಡಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




