
ಯೂಟ್ಯೂಬರ್ ಆಗಿ ಜನಪ್ರಿಯರಾದವರು ಒಬ್ಬೊಬ್ಬರಾಗಿ ಸಿನಿಮಾಕ್ಕೆ ಕಾಲಿಡುತ್ತಿದ್ದಾರೆ. ಆದರೆ ಬಹುತೇಕರು ಯಾವುದೋ ದೊಡ್ಡ ನಟನ ಸಿನಿಮಾನಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡು ಆ ಬಳಿಕ ಮರೆಯಾಗುತ್ತಿದ್ದಾರೆ. ಆದರೆ ಕೆಲವರು ಮಾತ್ರ ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದ ತಂಡವನ್ನೇ ಕಟ್ಟಿಕೊಂಡು ಸಿನಿಮಾ ಮಾಡಿ ಯಶಸ್ವಿ ಆಗಿದ್ದಾರೆ. ಕನ್ನಡದಲ್ಲಿ ಈ ರೀತಿಯ ಪ್ರಯತ್ನಗಳು ನಡೆಯುತ್ತಿವೆ, ಗಮನವನ್ನೂ ಸೆಳೆಯುತ್ತಿವೆ. ಇದೀಗ ತೆಲುಗು ಚಿತ್ರರಂಗದಲ್ಲಿ ಇಂಥಹದ್ದೇ ಒಂದು ತಂಡ ಭಾರಿ ದೊಡ್ಡ ಯಶಸ್ಸು ಗಳಿಸಿದೆ.
‘ಲಿಟಲ್ ಹಾರ್ಟ್ಸ್’ ಹೆಸರಿನ ತೆಲುಗು ಸಿನಿಮಾ ಕೆಲವೇ ವಾರಗಳ ಹಿಂದೆ ಬಿಡುಗಡೆ ಆಯ್ತು. ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದ ಗೆಳೆಯರೇ ಗುಂಪು ಒಟ್ಟಾಗಿ ಸೇರಿ ಸಿನಿಮಾ ಒಂದನ್ನು ಮಾಡಿದರು. ಯೂಟ್ಯೂಬ್ ವಿಡಿಯೋ ಮಾದರಿಯಲ್ಲೇ ಸರಳವಾದ ಕತೆ, ಹಾಸ್ಯ, ತುಸು ಭಾವುಕತೆ ಸೇರಿಸಿ ಕುಟುಂಬದವರೆಲ್ಲ ಒಟ್ಟಿಗೆ ಕೂತು ನೋಡುವಂಥಹಾ ಸಿನಿಮಾ ಮಾಡಿದ್ದರು. ಸಿನಿಮಾಕ್ಕೆ ಕೆಲ ವಿತರಕರು ಬೆಂಬಲ ನೀಡಿದ ಪರಿಣಾಮ ಈಗ ಭಾರಿ ಬಜೆಟ್ ಸಿನಿಮಾಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ನಲ್ಲಿ ಮುನ್ನುಗ್ಗುತ್ತಿದೆ.
ಸೆಪ್ಟೆಂಬರ್ 5 ರಂದು ಬಿಡುಗಡೆ ಆದ ‘ಲಿಟಲ್ ಹಾರ್ಟ್ಸ್’ ಸಿನಿಮಾದ ನಾಯಕ ಮೌಳಿ ತನುಜ್ ಪ್ರಶಾಂತ್, ಗೆಳೆಯರೊಟ್ಟಿಗೆ ಸೇರಿ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದ ಮೌಳಿ ಈ ಸಿನಿಮಾದ ಮೂಲಕ ನಾಯಕ ಆಗಿದ್ದಾರೆ. ಅವರೊಟ್ಟಿಗೆ ಯಾರೂ ಹೆಸರೇ ಕೇಳದ ಕಲಾವಿದರುಗಳಾದ ಜಯಾ ಕೃಷ್ಣ, ನಿಖಿಲ್ ಅಬ್ಬೂರಿ, ಶಿವ ನಗರಂ ಇನ್ನೂ ಕೆಲವರುಗಳು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಜನಪ್ರಿಯ ಕಲಾವಿದರೆಂದರೆ ರಾಜೀವ್ ಕನಕಾಲ ಮತ್ತು ಸತ್ಯಾ ಕೃಷ್ಣ. ಸಿನಿಮಾಕ್ಕೆ ಸಂಗೀತ ನೀಡಿರುವವರು, ಸಂಕಲನ ಮಾಡಿರುವವರು ಎಲ್ಲರೂ ಹೊಸಬರೇ.
ಇದನ್ನೂ ಓದಿ:ಸೈಲೆಂಟ್ ಆಗಿ ಬಂದು ಬಾಕ್ಸ್ ಆಫೀಸ್ ಡಾಮಿನೇಟ್ ಮಾಡಿದ ‘ಮಿರಾಯಿ’; ಅಬ್ಬರದ ಕಲೆಕ್ಷನ್
ಯೂಟ್ಯೂಬ್ ವಿಡಿಯೋಗಳನ್ನು ಮಾಡಿ ಅನುಭವವಿದ್ದ ಈ ತಂಡ ಸಿನಿಮಾದ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಚೆನ್ನಾಗಿ ಬಳಿಸಿಕೊಳ್ಳಿತು, ಸಿನಿಮಾದ ಪ್ರೀ ರಿಲೀಸ್, ಪ್ರೆಸ್ ಮೀಟ್ಗಳಲ್ಲಿ ಸಹ ಕಾಮಿಡಿ ಸ್ಕೆಚ್ಗಳನ್ನು ಮಾಡಿ ವಿಡಿಯೋಗಳು ವೈರಲ್ ಆಗುವಂತೆ ಸಿನಿಮಾ ಪ್ರಚಾರ ಆಗುವಂತೆ ಮಾಡಿದವು, ಇವರ ವಿಡಿಯೋಗಳನ್ನು ಗಮನಿಸಿ ಖ್ಯಾತ ವಿತರಕರಾದ ಬನ್ನಿ ವಾಸು ಮತ್ತು ವಂಶಿ ಅವರುಗಳು ಸಿನಿಮಾದ ವಿತರಣೆ ಮಾಡಿದರು. ಆ ನಂತರ ನಡೆದಿದ್ದು ಮ್ಯಾಜಿಕ್, ಕುಟುಂಬ ಪ್ರೇಕ್ಷಕರು ಒಟ್ಟಿಗೆ ಬಂದು ಸಿನಿಮಾ ನೋಡಿ ಸಿನಿಮಾ ಅನ್ನು ಭಾರಿ ದೊಡ್ಡ ಹಿಟ್ ಮಾಡಿದ್ದಾರೆ. ‘ಮಿರಾಯ್’ ಅಂಥಹಾ ಸೂಪರ್ ಹೀರೋ, ಬಿಗ್ ಬಜೆಟ್ ಸಿನಿಮಾದ ಎದುರು ಸಹ ‘ಲಿಟಲ್ ಹಾರ್ಟ್ಸ್’ ಸಿನಿಮಾದ ವೇಗ ತಗ್ಗುತ್ತಿಲ್ಲ.
ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 50 ಕೋಟಿ ಹಣ ಗಳಿಸಿದೆ. ಸಿನಿಮಾ ಅನ್ನು ವಿದೇಶದಲ್ಲೂ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕೆ ಇದೆ. ಇದರ ಜೊತೆಗೆ ಸಿನಿಮಾದ ಒಟಿಟಿ ಹಕ್ಕುಗಳ ಮಾರಾಟವೂ ಬಾಕಿ ಇದೆ. ಅಲ್ಲಿಗೆ 2 ಕೋಟಿ ಬಜೆಟ್ನ ಈ ಸಿನಿಮಾ ಸುಮಾರು 100 ಕೋಟಿಗೂ ಹೆಚ್ಚು ಗಳಿಕೆ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ