‘ರಸ್ತೆಯಲ್ಲಿ ಓರ್ವ ಮಹಿಳೆಯೂ RCB ಗೆಲುವನ್ನು ಸಂಭ್ರಮಿಸಿಲ್ಲ’: ಸಿದ್ದಾರ್ಥ್ ಮಾತಿನ ಅರ್ಥವೇನು?
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದಿದೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಈ ಬಗ್ಗೆ ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ. ಮಹಿಳೆಯರ ಗೆಲುವನ್ನು ಸಂಭ್ರಮಿಸಲು ಮಹಿಳೆಯರಿಗೇ ಸಾಧ್ಯವಾಗುತ್ತಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಈ ಸಲ ಕಪ್ ನಮ್ದೇ’ ಎನ್ನುತ್ತ ಆರ್ಸಿಬಿ (RCB) ಅಭಿಮಾನಿಗಳು ಇಷ್ಟ ವರ್ಷಗಳಿಂದ ಕಂಡಿದ್ದ ಕನಸು ಇದೇ ಮೊದಲ ಬಾರಿಗೆ ನನಸಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ನ (Women’s Premier League) ಫೈನಲ್ ಪಂದ್ಯ ಭಾನುವಾರ (ಮಾರ್ಚ್ 17) ರಾತ್ರಿ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಗಳಿಸಿತು. ಆರ್ಸಿಬಿ ವನಿತೆಯರು ಕಪ್ ಎತ್ತುತ್ತಿದ್ದಂತೆಯೇ ಬೆಂಗಳೂರಿನ ಬೀದಿಗಳಲ್ಲಿ ಸಂಭ್ರಮಾಚರಣೆ ಶುರುವಾಯಿತು. ಈ ಕುರಿತು ನಟ ಸಿದ್ದಾರ್ಥ್(Siddharth) ಟ್ವೀಟ್ ಮಾಡಿದ್ದಾರೆ. ನಡುರಾತ್ರಿ ಕೇವಲ ಪುರುಷರು ಮಾತ್ರ ಸೆಲೆಬ್ರೇಟ್ ಮಾಡುತ್ತಿದ್ದಾರೆ, ಆದರೆ ಮಹಿಳೆಯರು ಈ ಸಂಭ್ರಮದಲ್ಲಿ ಭಾಗಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಪುರುಷರು ‘ಆರ್ಸಿಬಿ’ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ವಿಡಿಯೋವನ್ನು ಸಿದ್ದಾರ್ಥ್ ಅವರು ಶೇರ್ ಮಾಡಿಕೊಂಡಿದ್ದಾರೆ. ‘ಒಂದು ಟೂರ್ನಿಯಲ್ಲಿ ಮಹಿಳೆಯರ ತಂಡ ಟ್ರೋಫಿ ಗೆದ್ದಿದೆ. ಆದರೆ ರಸ್ತೆಯಲ್ಲಿ ಸೆಲೆಬ್ರೇಟ್ ಮಾಡಲು ಓರ್ವ ಮಹಿಳೆ ಕೂಡ ಇಲ್ಲ. ಭಾರತದ ಪುರುಷಪ್ರಧಾನ ವ್ಯವಸ್ಥೆಗೆ ಇದು ಸೂಕ್ತ ಉದಾಹರಣೆ’ ಎಂದು ಸಿದ್ದಾರ್ಥ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿದ್ದಾರ್ಥ್ ಅವರ ಎಕ್ಸ್ (ಟ್ವಿಟರ್) ಪೋಸ್ಟ್:
To clarify, the above tweet is about how public spaces in India are inaccessible for women, especially during the night time. The intent was to point out the irony in the inability of women to celebrate like men on the streets, even for an iconic instance of women’s achievement.
— Siddharth (@DearthOfSid) March 17, 2024
ಸಿದ್ದಾರ್ಥ್ ಮಾಡಿದ ಈ ಪೋಸ್ಟ್ಗೆ ಅನೇಕರು ಗರಂ ಆಗಿದ್ದಾರೆ. ‘ಮಹಿಳೆಯರ ಗೆಲುವನ್ನು ನಾವೇಕೆ ಸೆಲೆಬ್ರೇಟ್ ಮಾಡಬಾರದು’ ಎಂದು ಕೆಲವು ಪುರುಷರು ಪ್ರಶ್ನೆ ಎಸೆದಿದ್ದಾರೆ. ತಮ್ಮ ಮಾತನ್ನು ನೆಟ್ಟಿಗರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದು ಸಿದ್ದಾರ್ಥ್ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ರಾತ್ರಿಯ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಬರಲು ಭಾರತದ ಮಹಿಳೆಯರಿಗೆ ಅವಕಾಶ ಇಲ್ಲ ಎಂಬುದನ್ನು ತಿಳಿಸಲು ಈ ಟ್ವೀಟ್ ಮಾಡಿದ್ದೇನೆ. ಸ್ತ್ರೀಯರ ದೊಡ್ಡ ಗೆಲುವನ್ನು ಬೀದಿಯಲ್ಲಿ ಸಂಭ್ರಮಿಸಲು ಪುರುಷರ ರೀತಿ ಮಹಿಳೆಯರಿಗೆ ಸಾಧ್ಯವಾಗಿಲ್ಲ ಎಂಬ ವ್ಯಂಗ್ಯ ಇದರಲ್ಲಿದೆ’ ಎಂದು ಸಿದ್ದಾರ್ಥ್ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: WPL 2024: ರಾಯಲ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ RCB
ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಸಿದ್ದಾರ್ಥ್ ಅವರ ಫೇಮಸ್ ಆಗಿದ್ದಾರೆ. ಸಮಾಜದ ಅನೇಕ ಆಗುಹೋಗುಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ತಮ್ಮ ಅಭಿಪ್ರಾಯ ತಿಳಿಸುವಲ್ಲಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಆ ಕಾರಣದಿಂದ ಅವರು ಕೆಲವೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದು ಕೂಡ ಉಂಟು. 2023ರಲ್ಲಿ ಅವರು ನಟಿಸಿದ ‘ಚಿತ್ತ’ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಗಮನ ಸೆಳೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.