Actress Gayathri Death: ಭೀಕರ ರಸ್ತೆ ಅಪಘಾತ; ಯುವ ನಟಿಯ ದುರ್ಮರಣ
ಅಪಘಾತಕ್ಕೆ ಅಸಲಿ ಕಾರಣ ಏನು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ರಾಥೋಡ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರೋ, ಇಲ್ಲವೋ ಎಂಬ ವಿಚಾರ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದು ಬರಬೇಕಿದೆ.

ಹೈದರಾಬಾದ್ನಲ್ಲಿ (Hyderabada) ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಯುವ ನಟಿ, ಯೂಟ್ಯೂಬರ್ ಗಾಯತ್ರಿ ಅಲಿಯಾಸ್ ಡಾಲಿ ಡಿ ಕ್ರೂಜ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೋಳಿ ಆಚರಣೆ ಮುಗಿಸಿ ಗೆಳೆಯನ ಜೆತೆ ಮನೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಚಲಿಸುತ್ತಿದ್ದ ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು. ಈ ಮೂಲಕ ಮುಂದೆ ಚಿತ್ರರಂಗದಲ್ಲಿ ಹೆಸರು ಮಾಡಬೇಕಿದ್ದ ನಟಿಯನ್ನು ಕಳೆದುಕೊಂಡಂತಾಗಿದೆ. ಅವರನ್ನು ಕಳೆದುಕೊಂಡಿದ್ದಕ್ಕೆ ಗಾಯತ್ರಿ (Gayathri ) ಅವರ ಗೆಳೆಯರು ಹಾಗೂ ಕುಟುಂಬದವರು ದುಃಖದಲ್ಲಿ ಕೈ ತೊಳೆಯುವಂತಾಗಿದೆ.
ಗಾಯತ್ರಿ ಅವರು ಡಾಲಿ ಎಂದೇ ಫೇಮಸ್. ‘ಮ್ಯಾಡಮ್ ಸರ್ ಮ್ಯಾಡಮ್ ಅಂತೆ’ ಹೆಸರಿನ ತೆಲುಗು ವೆಬ್ ಸರಣಿಯಲ್ಲಿ ಅವರು ನಟಿಸಿದ್ದರು. ಇದರಿಂದ ಅವರಿಗೆ ಸಾಕಷ್ಟು ಖ್ಯಾತಿ ಬಂತು. ‘ಜಲ್ಸಾ ರಾಯುಡು’ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡ ಅವರು ನಡೆಸುತ್ತಿದ್ದರು. ಅವರಿಗೆ ಈಗಿನ್ನೂ 26 ವರ್ಷ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ನಿಜಕ್ಕೂ ದುಃಖದ ಸಂಗತಿ.
ಅಪಘಾತ ಆಗಿದ್ದು ಹೇಗೆ?
ಗಾಯತ್ರಿ ಗೆಳೆಯರ ಜತೆ ಹೋಳಿ ಆಚರಣೆಗೆ ತೆರಳಿದ್ದರು. ನಂತರ ಗೆಳೆಯ ರಾಥೋಡ್ ಜತೆ ಅವರು ಕಾರಿನಲ್ಲಿ ಮನೆಗೆ ಹೊರಟಿದ್ದರು. ರಾಥೋಡ್ ಕಾರು ಚಲಾಯಿಸುತ್ತಿದ್ದರು. ಕಾರು ವೇಗವಾಗಿ ಚಲಿಸುತ್ತಿತ್ತು. ಹೀಗಾಗಿ, ಕಾರು ನಿಯಂತ್ರಣಕ್ಕೆ ಸಿಗದೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಪಲ್ಟಿ ಹೊಡೆದಿದೆ. ಇಬ್ಬರಿಗೂ ತೀವ್ರ ಗಾಯಗಳು ಆಗಿದ್ದವು. ಗಾಯತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ನಿಧನ ಹೊಂದಿದರು.
ರಾಥೋಡ್ ಅವರಿಗೂ ಗಂಭೀರ ಗಾಯಗಳು ಆಗಿದ್ದವು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ಅವರು ಕೊನೆಯುಸಿರು ಎಳೆದರು. ಇನ್ನು, ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಮೇಲೆ ಕಾರು ಬಿದ್ದಿದೆ. ಆ ವ್ಯಕ್ತಿ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಮೂಲಕ ಮೂವರು ರಸ್ತೆ ಅಪಘಾತದಲ್ಲಿ ಮೃತಪಟ್ಟಂತಾಗಿದೆ.
ಪೊಲೀಸರಿಂದ ತನಿಖೆ
ಅಪಘಾತಕ್ಕೆ ಅಸಲಿ ಕಾರಣ ಏನು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ರಾಥೋಡ್ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರೋ, ಇಲ್ಲವೋ ಎಂಬ ವಿಚಾರ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದು ಬರಬೇಕಿದೆ. ಸ್ಥಳೀಯ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಮೊದಲಿನಂತಿಲ್ಲ ಸಮಂತಾ?; ನಟಿಯ ನಡವಳಿಕೆ ಕಂಡು ನಿರ್ದೇಶಕರ ಬೇಸರ




