
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿಯರಾದ ರಾಧಾ ಮತ್ತು ಅಂಬಿಕಾ ಅವರ ನಡುವೆ ಹಣಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮೂಡಿದೆ. ಇಬ್ಬರೂ ಹಿರಿಯ ನಟಿಯರು ಸಹೋದರಿಯರಾಗಿದ್ದು, ಇದೀಗ ನಟಿ ರಾಧಾ, ತಮ್ಮ ಸಹೋದರಿ ಅಂಬಿಕಾ ವಿರುದ್ಧ 50 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದಾರೆ. ರಾಧಾ ಅವರು ಅಂಬಿಕಾ ಮಾತ್ರವಲ್ಲದೆ ಅವರ ಸಹೋದರನ ಮೇಲೂ ಸಹ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಧಾ ಅವರು ಚೆನ್ನೈ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನನ್ವಯ, ಅವರು ತಮ್ಮ ಚೆನ್ನೈ ನಿವಾಸದಲ್ಲಿ ಕೆಲ ಚೆಕ್ಕುಗಳನ್ನು ಉದ್ಯಮದ ಕಾರಣಕ್ಕಾಗಿ ಸೈನ್ ಮಾಡಿ ಇರಿಸಿಕೊಂಡಿದ್ದರಂತೆ. ಅವುಗಳು ಬ್ಲಾಂಕ್ ಚೆಕ್ಕುಗಳಾಗಿದ್ದವಂತೆ. ಆದರೆ ಅವರ ಸಹೋದರಿ ನಟಿ ಅಂಬಿಕಾ ಮತ್ತು ಸಹೋದರರು ಆ ಚೆಕ್ಕುಗಳನ್ನು ಕದ್ದು ಬಳಸಿಕೊಂಡಿದ್ದಾರಂತೆ.
ಅಂಬಿಕಾ ಅವರು ತಮ್ಮ ಹಳೆಯ ಚೆಕ್ಕುಗಳನ್ನು ಬಳಸಿ 11 ಲಕ್ಷ, 23 ಕೋಟಿ, 13.17 ಕೋಟಿ, ಏಳು ಕೋಟಿ, 1.9 ಕೋಟಿ ರೂಪಾಯಿ ಹಣವನ್ನು ಡ್ರಾ ಮಾಡಲು ಯತ್ನಿಸಿದ್ದಾರಂತೆ. ರಾಧಾ ಆರೋಪಿಸಿರುವಂತೆ, ಅವರು ಆ ಚೆಕ್ಕುಗಳನ್ನು ಅಂಬಿಕಾ ಅವರಿಗೆ ನೀಡಿರಲಿಲ್ಲವಂತೆ. ಅಲ್ಲದೆ, ತಮಗೂ ತಮ್ಮ ಸಹೋದರಿಗೂ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ ಎಂದು ಸಹ ಅವರು ಹೇಳಿದ್ದಾರೆ. ತಮ್ಮ ಚೆಕ್ಕುಗಳನ್ನು ಅಂಬಿಕಾ ಅವರು ಡ್ರಾ ಮಾಡಲು ಯತ್ನಿಸಿದ್ದನ್ನು ಬ್ಯಾಂಕಿನವರು ರಾಧಾ ಅವರ ಗಮನಕ್ಕೆ ತಂದಿದ್ದು, ಕೂಡಲೇ ಅವರು ಚೆಕ್ಕುಗಳನ್ನು ನಗದು ಮಾಡದಿರಲು ಬ್ಯಾಂಕಿಗೆ ಸೂಚನೆ ನೀಡಿದ್ದಾರಂತೆ. ತಮ್ಮ ಹಾಗೂ ಸಹೋದರಿ ಅಂಬಿಕಾ ನಡುವೆ ಮನೆ ಮತ್ತು ಮನೆಯಲ್ಲಿರುವ ವಸ್ತುಗಳ ಕುರಿತಾಗಿ ವಿವಾದ ಇರುವುದಾಗಿಯೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಕನ್ನಡ: ಮತ್ತೆ ನಾಲಿಗೆ ಹರಿಬಿಟ್ಟ ಲಿಖಿತ್; ಈ ವಿಷಯಕ್ಕೆ ಸುದೀಪ್ ಕ್ಲಾಸ್ ಫಿಕ್ಸ್?
ಆದರೆ ಈ ಆರೋಪಗಳನ್ನೆಲ್ಲ ಹಿರಿಯ ನಟಿ ಅಂಬಿಕಾ ಅಲ್ಲಗಳೆದಿದ್ದು, ಆ ಚೆಕ್ಕುಗಳು ಮನೆ ವಿವಾದಕ್ಕೆ ಸಂಬಂಧಿಸಿದಂತೆ ತಮಗೆ ನೀಡಲಾಗಿದ್ದ ಚೆಕ್ಕುಗಳು ಎಂದು ಅವರು ಹೇಳಿದ್ದಾರೆ. ದೂರು ಸ್ವೀಕರಿಸಿರುವ ಚೆನ್ನೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಅಂಬಿಕಾ ಮತ್ತು ರಾಧಾ ಇಬ್ಬರೂ ಹಿರಿಯ ನಟಿಯರಾಗಿದ್ದಾರೆ. ಅದರಲ್ಲೂ ಅಂಬಿಕಾ ಅವರು ಕನ್ನಡದ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜ್ಕುಮಾರ್ ಅವರೊಟ್ಟಿಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರ’, ‘ಅಪೂರ್ವ ಸಂಗಮ’ ಇನ್ನೂ ಹಲವಾರು ಸಿನಿಮಾಗಳಲ್ಲಿ ಅಂಬಿಕಾ ನಟನೆ ಮಾಡಿದ್ದಾರೆ. ಇನ್ನು ರಾಧಾ ಅವರು ಸಹ ಜನಪ್ರಿಯ ನಟಿಯಾಗಿದ್ದು ಕನ್ನಡದಲ್ಲಿ ರವಿಚಂದ್ರನ್ ಜೊತೆಗೆ ‘ಸಾವಿರ ಸುಳ್ಳು’, ‘ದಿಗ್ವಿಜಯ’, ‘ರಣಚಂಡಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ