MS Dhoni: ಹೀರೋ ಆಗಲಿದ್ದಾರೆ ಧೋನಿ: ಯಾವ ಸಿನಿಮಾ? ಪತ್ನಿ ಸಾಕ್ಷಿ ಕೊಟ್ರು ಮಾಹಿತಿ
ಧೋನಿ ಅವರು ತಮಿಳಿನಲ್ಲಿ ತಮ್ಮ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹೀರೋ ಕೂಡ ಆಗಲಿದ್ದಾರೆ.

ಧೋನಿ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಧೋನಿ ಎಂಟರ್ಟೇನ್ಮೆಂಟ್’ (Dhoni Entertainment) ಮೂಲಕ ಅವರು ತಮಿಳಿನಲ್ಲಿ ‘ಎಲ್ಜಿಎಂ’ (ಲೆಟ್ಸ್ ಗೆಟ್ ಮ್ಯಾರೀಡ್) ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಜುಲೈ 28ರಂದು ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಫ್ಯಾಮಿಲಿ ಎಂಟರ್ಟೇನ್ಮೆಂಟ್ ರೀತಿಯಲ್ಲಿ ಮೂಡಿ ಬಂದಿದೆ. ಈ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ನಧಿಯಾ, ಹರೀಶ್ ಕಲ್ಯಾಣ್, ಆರ್ಜೆ ವಿಜಯ್, ಯೋಗಿ ಬಾಬು (Yogi Babu) ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ತಂಡ ಬ್ಯುಸಿ ಆಗಿದೆ. ಈ ವೇಳೆ ಸಾಕ್ಷಿ ಧೋನಿ ಅವರು ಅಚ್ಚರಿಯ ಮಾಹಿತಿ ಒಂದನ್ನು ಬಿಚ್ಚಿಟ್ಟಿದ್ದಾರೆ.
ಧೋನಿ ಟೀಂ ಇಂಡಿಯಾದಿಂದ ನಿವೃತ್ತಿ ಪಡೆದಿದ್ದಾರೆ. ಸದ್ಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ಅವರು ತಮಿಳಿನಲ್ಲಿ ತಮ್ಮ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹೀರೋ ಕೂಡ ಆಗಲಿದ್ದಾರೆ. ಇದಕ್ಕೆ ಸಮಯ ಕೂಡಿಬರಬೇಕು ಎಂಬುದು ಸಾಕ್ಷಿ ಅಭಿಪ್ರಾಯ.
‘ಒಳ್ಳೆಯ ಸ್ಕ್ರಿಪ್ಟ್ ಬಂದರೆ ಧೋನಿ ನಟಿಸುತ್ತಾರೆ. ಅವರಿಗೆ ಕ್ಯಾಮೆರಾ ಎದುರು ನಿಲ್ಲೋಕೆ ಅಂಜಿಕೆ ಇಲ್ಲ. 2006ರಿಂದ ಧೋನಿ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಕ್ಯಾಮೆರಾ ಎದುರಿಸಿ ಅವರಿಗೆ ಅಭ್ಯಾಸ ಇದೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಅವರು ನಟಿಸುತ್ತಾರೆ’ ಎಂದಿದ್ದಾರೆ ಸಾಕ್ಷಿ.
ಹಾಗಾದರೆ ಅವರು ಮಾಡಲಿರುವ ಸಿನಿಮಾ ಯಾವ ರೀತಿಯಲ್ಲಿ ಇರುತ್ತದೆ? ಇದಕ್ಕೂ ಸಾಕ್ಷಿ ಬಳಿ ಉತ್ತರ ಇದೆ. ‘ಆ್ಯಕ್ಷನ್ ಸಿನಿಮಾ ಮಾಡುತ್ತಾರೆ. ಧೋನಿ ಯಾವಾಗಲೂ ಆ್ಯಕ್ಷನ್ ಮೋಡ್ನಲ್ಲಿ ಇರುತ್ತಾರೆ’ ಎಂದು ಸಾಕ್ಷಿ ಹೇಳಿದ್ದಾರೆ. ‘ಎಲ್ಜಿಎಂ’ ನಿರ್ದೇಶಕ ರಮೇಶ್ ಅವರ ಉತ್ತರವೇ ಬೇರೆ. ‘ಅವರು ನಿಜ ಜೀವನದ ಸೂಪರ್ ಹೀರೋ. ಹೀಗಾಗಿ ಅವರು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎನ್ನುವ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ‘ಅಲ್ಲು ಅರ್ಜುನ್ ಅವರ ಎಲ್ಲ ಸಿನಿಮಾ ನೋಡಿದ್ದೇನೆ’: ಅಭಿಮಾನ ಮೆರೆದ ಧೋನಿ ಪತ್ನಿ ಸಾಕ್ಷಿ
ಧೋನಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ತಮಿಳುನಾಡಿನ ಜೊತೆ ಒಳ್ಳೆಯ ನಂಟು ಬೆಳೆದಿದೆ. ಈ ಕಾರಣದಿಂದಲೇ ಅವರ ಬ್ಯಾನರ್ ಅಡಿಯಲ್ಲಿ ಮೊದಲ ಸಿನಿಮಾ ತಮಿಳಿನಲ್ಲೇ ಮೂಡಿ ಬಂದಿದೆಯಂತೆ. ಈ ವಿಚಾರವನ್ನು ಸಾಕ್ಷಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:42 am, Wed, 26 July 23




