ವಿಚ್ಛೇದನದ ನಂತರ ಇದೇ ಮೊದಲ ಬಾರಿಗೆ ಒಂದು ದೊಡ್ಡ ಸಾಹಸಕ್ಕೆ ಮುಂದಾದ ಐಶ್ವರ್ಯಾ ರಜನಿಕಾಂತ್

ಐಶ್ವರ್ಯಾ ಕೊಡಲಿರುವ ಹೊಸ ವಿಚಾರವಾದರೂ ಏನು ಎಂದು ಫ್ಯಾನ್ಸ್ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ಒಂದು ಆಸಕ್ತಿಕರ ವಿಚಾರ ಹೊರಬಿದ್ದಿದೆ.

ವಿಚ್ಛೇದನದ ನಂತರ ಇದೇ ಮೊದಲ ಬಾರಿಗೆ ಒಂದು ದೊಡ್ಡ ಸಾಹಸಕ್ಕೆ ಮುಂದಾದ ಐಶ್ವರ್ಯಾ ರಜನಿಕಾಂತ್
ಐಶ್ವರ್ಯಾ ರಜನಿಕಾಂತ್
Updated By: ರಾಜೇಶ್ ದುಗ್ಗುಮನೆ

Updated on: Mar 21, 2022 | 2:25 PM

ರಜನಿಕಾಂತ್​ (Rajanikanth) ಮಗಳು ಐಶ್ವರ್ಯಾ ರಜನಿಕಾಂತ್​ (Aishwarya Rajanikanth)ಬಾಳಲ್ಲಿ ಇತ್ತೀಚೆಗೆ ಕಹಿ ಘಟನೆ ಒಂದು ನಡೆಯಿತು. 18 ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ ಐಶ್ವರ್ಯಾ ಹಾಗೂ ಧನುಷ್​ ವಿಚ್ಛೇದನ ಪಡೆದುಕೊಂಡು ಬೇರೆ ಆದರು. ವಿಚ್ಛೇದನ ಬಳಿಕ ಐಶ್ವರ್ಯಾ ಸುಮ್ಮನೆ ಕೂತಿಲ್ಲ. ನಿರ್ದೇಶನದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ ಸಿನಿಮಾ ಬಗ್ಗೆ ಯೋಚಿಸುವುದನ್ನು ಅವರು ನಿಲ್ಲಿಸಿಲ್ಲ. ಈಗ ಅವರು ಬಾಲಿವುಡ್​ಗೆ (Bollywood) ಕಾಲಿಡೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್​ನಲ್ಲಿ ಫೋಟೋ​ ಒಂದನ್ನು ಪೋಸ್ಟ್ ಮಾಡಿದ್ದಾರೆ ಐಶ್ವರ್ಯಾ. ಈ ಫೋಟೋದಲ್ಲಿ ಎದುರು ಒಂದು ಐಪ್ಯಾಡ್​ ಇಟ್ಟು ಕೂತಿದ್ದಾರೆ ಐಶ್ವರ್ಯಾ. ಶೀಘ್ರವೇ ಒಂದು ಆಸಕ್ತಿಕರ ವಿಷಯ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ ಅವರು. ಐಶ್ವರ್ಯಾ ಕೊಡಲಿರುವ ಹೊಸ ವಿಚಾರವಾದರೂ ಏನು ಎಂದು ಫ್ಯಾನ್ಸ್ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ಒಂದು ಆಸಕ್ತಿಕರ ವಿಚಾರ ಹೊರಬಿದ್ದಿದೆ.

ಇಟೈಮ್ಸ್​ ವರದಿ ಮಾಡಿದ ಪ್ರಕಾರ, ಐಶ್ವರ್ಯಾ ರಜನಿಕಾಂತ್ ಬಾಲಿವುಡ್​ಗೆ ಕಾಲಿಡೋಕೆ ರೆಡಿ ಆಗಿದ್ದಾರೆ. ಅಮಿತಾಭ್​ ಬಚ್ಚನ್​ ನಟನೆಯ ‘ಝುಂಡ್​’ ಸಿನಿಮಾ ನಿರ್ಮಾಣ ಮಾಡಿದ್ದ ಮೀನೂ ಅರೋರಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ‘ಓಹ್​ ಸಾತಿ ಚಲ್’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ ಎಂದು ವರದಿ ಆಗಿದೆ. ಈ ಬಗ್ಗೆ  ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಶೀಘ್ರವೇ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ.

ಪತಿಯಿಂದ ಸಿಕ್ಕಿತು ಶುಭಹಾರೈಕೆ

ಮಾರ್ಚ್​ 17ರಂದು ಐಶ್ವರ್ಯಾ ನಿರ್ದೇಶನ ಮಾಡಿದ ‘ಪಯಣಿ..’ ಮ್ಯೂಸಿಕ್​ ವಿಡಿಯೋ ರಿಲೀಸ್​ ಆಗಿದೆ. ಈ ಹಾಡು ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸಿದ್ಧಗೊಂಡಿದೆ. ತಮಿಳಿನ ವಿಡಿಯೋ ಲಿಂಕ್​ ಟ್ವೀಟ್​ ಮಾಡಿರುವ ಧನುಷ್​, ‘ಮ್ಯೂಸಿಕ್​ ವಿಡಿಯೋಗಾಗಿ ಶುಭಾಶಯಗಳು ನನ್ನ ಗೆಳತಿ ಐಶ್ವರ್ಯಾ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಐಶ್ವರ್ಯಾ ಕೂಡ ಉತ್ತರಿಸಿದ್ದಾರೆ. ‘ಧನ್ಯವಾದಗಳು ಧನುಷ್’ ಎಂದು ಉತ್ತರಿಸಿದ್ದಾರೆ.

ಐಶ್ವರ್ಯಾ ಅವರು ನಟ ರಜನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ನಿರ್ದೇಶಕಿ ಹಾಗೂ ಗಾಯಕಿ. ಇವರು 2004ರ ನವೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ನೋವು ತರಿಸಿದೆ. ವಿಶೇಷ ಎಂದರೆ, ಐಶ್ವರ್ಯಾ ಹಾಗೂ ಧನುಷ್​ ಅವರದ್ದು ಪ್ರೇಮ ವಿವಾಹ. 21ನೇ ವಯಸ್ಸಿಗೆ ಐಶ್ವರ್ಯಾ ಅವರನ್ನು ಪ್ರೀತಿಸಿ ಧನುಷ್ ಮದುವೆ ಆಗಿದ್ದರು. ಈಗ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: Video: ಐಶ್ವರ್ಯಾ ರೈ ಜೊತೆ ರಜನಿಕಾಂತ್​ರಂತೆ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್! ಫ್ಯಾನ್ಸ್ ಫಿದಾ

ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​