‘ಖಂಡಿತವಾಗಿ ನೀವು ‘ಪುಷ್ಪ 3’ ನಿರೀಕ್ಷಿಸಬಹುದು’: ಗುಡ್​ ನ್ಯೂಸ್​ ನೀಡಿದ ಅಲ್ಲು ಅರ್ಜುನ್​

ಅಲ್ಲು ಅರ್ಜುನ್​ ಅವರ ಅಭಿಮಾನಿಗಳು ‘ಪುಷ್ಪ 2’ ಸಿನಿಮಾ ನೋಡಲು ಕಾದಿದ್ದಾರೆ. ಅಂಥವರಿಗೆಲ್ಲ ಇನ್ನೊಂದು ಗುಡ್​ ನ್ಯೂಸ್​ ಸಿಕ್ಕಿದೆ. ‘ಪುಷ್ಪ 3’ ಸಿನಿಮಾ ಕೂಡ ಬರಲಿದೆ ಎಂಬ ಮಾಹಿತಿ ಈಗ ಬಹಿರಂಗ ಆಗಿದೆ. ‘ಪಾರ್ಟ್​ 3’ ಬಗ್ಗೆ ಅಲ್ಲು ಅರ್ಜುನ್​ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಬಿರ್ಲಿನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

‘ಖಂಡಿತವಾಗಿ ನೀವು ‘ಪುಷ್ಪ 3’ ನಿರೀಕ್ಷಿಸಬಹುದು’: ಗುಡ್​ ನ್ಯೂಸ್​ ನೀಡಿದ ಅಲ್ಲು ಅರ್ಜುನ್​
ಅಲ್ಲು ಅರ್ಜುನ್​
Follow us
ಮದನ್​ ಕುಮಾರ್​
|

Updated on: Feb 17, 2024 | 3:33 PM

ಟಾಲಿವುಡ್​ ನಟ ಅಲ್ಲು ಅರ್ಜುನ್​ (Allu Arjun) ಅಭಿನಯದ ‘ಪುಷ್ಪ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಈ ಸಿನಿಮಾ ಸೂಪರ್​ ಹಿಟ್​ ಆಯಿತು. ಅಷ್ಟೇ ಅಲ್ಲದೇ, ವಿದೇಶದಲ್ಲಿನ ಪ್ರೇಕ್ಷಕರು ಕೂಡ ‘ಪುಷ್ಪ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈಗ ಈ ಸಿನಿಮಾಗೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಆಗಸ್ಟ್​ 15ರಂದು ‘ಪುಷ್ಪ 2’ (Pushpa 2) ಸಿನಿಮಾ ಬಿಡುಗಡೆ ಆಗಲಿದೆ. ಅಚ್ಚರಿ ಏನೆಂದರೆ, ಆ ಸಿನಿಮಾದ ಕಥೆ ಅಷ್ಟಕ್ಕೇ ನಿಲ್ಲುವುದಿಲ್ಲ. ‘ಪುಷ್ಪ 3’ (Pushpa 3 Movie) ಕೂಡ ಬರಲಿದೆ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಅಲ್ಲು ಅರ್ಜುನ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ಬಿರ್ಲಿನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿಯಾಗಿರುವ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಹೈದರಾಬಾದ್​ನಲ್ಲಿ ‘ಪುಷ್ಪ 2’ ಸಿನಿಮಾಗೆ ಶೂಟಿಂಗ್ ಪ್ರಗತಿಯಲ್ಲಿದೆ. ಅದರ ನಡುವೆ ಬಿಡುವು ಮಾಡಿಕೊಂಡು 74ನೇ ಅಂತಾರಾಷ್ಟ್ರೀಯ ಬರ್ಲಿನ್​ ಸಿನಿಮೋತ್ಸವಕ್ಕೆ ಅಲ್ಲು ಅರ್ಜುನ್​ ತೆರಳಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿನಿಧಿಯಾಗಿ ಅವರನ್ನು ಆಹ್ವಾನಿಸಲಾಗಿದೆ. ಸಿನಿಮೋತ್ಸವದಲ್ಲಿ ಭಾಗಿಯಾಗಿರುವ ಅವರು ಅಲ್ಲಿನ ಪ್ರೇಕ್ಷಕರ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ‘ಪುಷ್ಪ 3’ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ಶೂಟಿಂಗ್​ ಮಧ್ಯೆ ರಶ್ಮಿಕಾ ಮಂದಣ್ಣ ಮಾಡಿದ ಕೆಲಸ ಇದು

‘ಖಂಡಿತವಾಗಿಯೂ ನೀವು ಪುಷ್ಪ ಸಿನಿಮಾಗೆ 3ನೇ ಪಾರ್ಟ್​ ನಿರೀಕ್ಷಿಸಬಹುದು. ಅದನ್ನು ನಾವು ಫ್ರಾಂಚೈಸ್​ ರೀತಿ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕಾಗಿ ನಮ್ಮ ಬಳಿ ಎಗ್ಸೈಟಿಂಗ್​ ಆದಂತಹ ಐಡಿಯಾಗಳು ಇವೆ. ಪುಷ್ಪ ಸಿನಿಮಾವನ್ನು ವಿದೇಶದ ಪ್ರೇಕ್ಷಕರು ಹೇಗೆ ನೋಡುತ್ತಾರೆ ಅಂತ ನಾನು ತಿಳಿಯಬೇಕು. ಭಾರತೀಯ ಸಿನಿಮಾವನ್ನು ಅವರು ಹೇಗೆ ವೀಕ್ಷಿಸುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಸಿನಿಮೋತ್ಸವಗಳು ಹೇಗಿರುತ್ತವೆ ಮತ್ತು ಯಾವ ರೀತಿಯ ಸಿನಿಮಾಗಳನ್ನು ವೀಕ್ಷಿಸಲಾಗುತ್ತದೆ ಅಂತ ತಿಳಿಯಬೇಕು. ಅನೇಕರು ಪುಷ್ಪ ಸಿನಿಮಾವನ್ನು ಒಟಿಟಿಯಲ್ಲಿ ನೋಡಿದ್ದಾರೆ’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಯಾವುದು? ಇದೆ ಮೂರು ಆಯ್ಕೆ

ರಕ್ತ ಚಂದನದ ಕಳ್ಳಸಾಗಣಿಕೆಯ ಕಥೆಯನ್ನು ‘ಪುಷ್ಪ’ ಸಿನಿಮಾದಲ್ಲಿ ಹೇಳಲಾಗಿದೆ. ಸಾಮಾನ್ಯ ವ್ಯಕ್ತಿಯಾಗಿದ್ದ ಕಥಾನಾಯಕ ಪುಷ್ಪರಾಜ್​ ಆ ಸಿನಿಮಾ ಕೊನೆಯಲ್ಲಿ ಡಾನ್​ ಆಗಿ ಬದಲಾಗುತ್ತಾನೆ. ಆತ ಮುಂದೇನು ಮಾಡಿದ ಎಂಬುದು ‘ಪುಷ್ಪ 2’ ಸಿನಿಮಾದಲ್ಲಿ ಗೊತ್ತಾಗಲಿದೆ. ಹಾಗಾದರೆ, ‘ಪುಷ್ಪ 3’ ಸಿನಿಮಾದಲ್ಲಿ ಯಾವ ಕಥೆ ಇರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಈ ಸಿನಿಮಾಗೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್​ ಅವರು ‘ಪುಷ್ಪ’ ಸಿನಿಮಾದಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಆ ಚಿತ್ರದಲ್ಲಿನ ಅಭಿನಯಕ್ಕೆ ಅವರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು. ಹಾಗಾಗಿ ಅವರ ಮೇಲಿನ ಜವಾಬ್ದಾರಿ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದವರು ಕೂಡ ‘ಪುಷ್ಪ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ