Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆತ್ಮ’ ಟ್ರೇಲರ್​, ಹೊಸಬರ ಹಾರರ್​; ನೆಗೆಟಿವ್​ ಎನರ್ಜಿ ಹುಡುಕಿದವರ ಕಥೆ

ಹಾರರ್​ ಕಥಾಹಂದರ ಇರುವ ‘ಆತ್ಮ’ ಸಿನಿಮಾಗೆ ಈಗಾಗಲೇ ಸೆನ್ಸಾರ್​ ಪ್ರಕ್ರಿಯೆ ಮುಗಿದಿದೆ. ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅನಿಲ್​ ಸಿ.ಆರ್​. ಅವರು ನಿರ್ಮಾಣ ಮಾಡಿದ್ದು, ಎಸ್​.ಆರ್​. ಪ್ರಮೋದ್​ ಅವರು ನಿರ್ದೇಶಿಸಿದ್ದಾರೆ.

‘ಆತ್ಮ’ ಟ್ರೇಲರ್​, ಹೊಸಬರ ಹಾರರ್​; ನೆಗೆಟಿವ್​ ಎನರ್ಜಿ ಹುಡುಕಿದವರ ಕಥೆ
‘ಆತ್ಮ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Feb 17, 2024 | 12:55 PM

ದೆವ್ವ ಭೂತಗಳ ವಿಷಯ ಎಂದರೆ ಸಿನಿಮಾ ಮಂದಿಗೆ ವಿಶೇಷ ಪ್ರೀತಿ. ಹೆದರಿಸುವ ಕಥೆಯನ್ನು ಇಟ್ಟುಕೊಂಡು ಆಗಾಗ ಸಿನಿಮಾ ಮೂಡಿಬರುತ್ತಲೇ ಇರುತ್ತವೆ. ಈಗ ಕನ್ನಡದಲ್ಲಿ ಹೊಸಬರ ತಂಡವೊಂದು ಹಾರರ್​ ಸಿನಿಮಾ (Horror Movie) ಮಾಡಿದೆ. ‘ಆತ್ಮ’ ಎಂಬುದು ಈ ಸಿನಿಮಾದ ಟೈಟಲ್​. ಇಂಥ ಶೀರ್ಷಿಕೆಗೆ ತಕ್ಕಂತೆಯೇ ಕಥೆಯನ್ನು ಹೆಣೆಯಲಾಗಿದೆ. ಇತ್ತೀಚೆಗೆ ‘ಆತ್ಮ’ ಸಿನಿಮಾದ (Athma Movie) ಟ್ರೇಲರ್​ ಬಿಡುಗಡೆ ಮಾಡಲಾಯಿತು. ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್ ಅವರು ಈ ಟ್ರೇಲರ್​ ಅನಾವರಣ ಮಾಡಿದ್ದಾರೆ. ಸಿನಿಮಾದ ಕಥೆ ಏನು ಎಂಬುದನ್ನು ತಿಳಿಸುವ ರೀತಿಯಲ್ಲಿ ‘ಆತ್ಮ’ ಟ್ರೇಲರ್​ (Athma Trailer) ಮೂಡಿಬಂದಿದೆ.

‘ಆತ್ಮ’ ಸಿನಿಮಾದಲ್ಲಿ ಹಾರರ್ ಜೊತೆ ಥ್ರಿಲ್ಲರ್ ಅಂಶಗಳೂ ಇವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘ವಿರಾಜ್ ಫಿಲ್ಮ್ ರೆರ್ಕಾಡಿಂಗ್ ಸ್ಟುಡಿಯೋ’ ಮಾಲೀಕ ಅನಿಲ್ ಸಿ.ಆರ್. ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ಅಲ್ಲದೇ, ಹೀರೋ ಆಗಿಯೂ ಅವರು ನಟಿಸಿದ್ದಾರೆ. ಅವರಿಗೆ ಇದು ಎರಡನೇ ಸಿನಿಮಾ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

ಮುನೆಗೌಡ ಕಿತ್ತಗನೂರು ಅವರು ‘ಆತ್ಮ’ ಸಿನಿಮಾಗೆ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ‘ಅಚಲ’, ‘ಅಸ್ಥಿರ’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಎಸ್.ಆರ್. ಪ್ರಮೋದ್ ಅವರು ಈಗ ‘ಆತ್ಮ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ನಾಯಕಿಯಾಗಿ ಕಾವ್ಯ ಅಭಿನಯಿಸಿದ್ದಾರೆ. ದಿವ್ಯಾ, ಪ್ರೀತಿ, ಪುಷ್ಪಾ, ಏಲೇಶ್, ಬನ್ನೂರು ಶ್ರೀನಿವಾಸಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ಆಪನ್​ಹೈಮರ್​’ ಯಶಸ್ಸಿನ ಬಳಿಕ ಹಾರರ್​ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್​ ನೋಲನ್​​

ಈ ಸಿನಿಮಾದ 2 ಹಾಡುಗಳಿಗೆ ನಿತಿನ್‌ ರಾಜ್ ಸಂಗೀತ ನೀಡಿದ್ದಾರೆ. ರಣಧೀರ್‌ ನಾಯಕ್ ಅವರ ಛಾಯಾಗ್ರಹಣ, ಆಯುರ್ ಅವರ ಸಂಕಲನ ಈ ಚಿತ್ರಕ್ಕಿದೆ. ಅಜಯ್‌ ವೇದಾಂತಿ ಸಂಭಾಷಣೆ, ಸಿದ್ದುಅರಸು ಸಾಹಿತ್ಯ ಬರೆದಿದ್ದಾರೆ. ಮೈಸೂರು ಸುತ್ತಮುತ್ತಲಿನ ಲೊಕೇಷನ್​ಗಳಲ್ಲಿ 22 ದಿನ ಶೂಟಿಂಗ್​ ಮಾಡಿರುವ ಈ ಸಿನಿಮಾಗೆ ಸೆನ್ಸಾರ್​ ಮಂಡಳಿಯಿಂದ ‘ಯುಎ’ ಪ್ರಮಾಣಪತ್ರ ಸಿಕ್ಕಿದೆ. ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಆತ್ಮ ಸಿನಿಮಾ ಟ್ರೇಲರ್:

ಮನುಷ್ಯರು ನಿಧನರಾದ ನಂತರ ಅವರಿಗೆ ಶ್ರಾದ್ಧ ಮಾಡದಿದ್ದರೆ ಅವರು ಆತ್ಮವಾಗುತ್ತಾರೆ ಎಂಬ ನಂಬಿಕೆ ಕೆಲವರಿಗೆ ಇದೆ. ಆ ಎಳೆಯನ್ನೇ ಇಟ್ಟುಕೊಂಡು ‘ಆತ್ಮ’ ಸಿನಿಮಾ ಮಾಡಲಾಗಿದೆ. 6 ಸ್ನೇಹಿತರು ಪಾರ್ಟಿ ಮಾಡಲು ಒಂದು ಜಾಗಕ್ಕೆ ಹೋಗುತ್ತಾರೆ. ಆ ಗುಂಪಿನಲ್ಲಿ ಇರುವ ಒಬ್ಬಳು ಗೋಸ್ಟ್ ಹಂಟರ್! ಆಕೆಯೇ ಎಲ್ಲರನ್ನೂ ಭೂತದ ಮನೆಗೆ ಕರೆದೊಯ್ಯುತ್ತಾಳೆ. ಉಳಿದವರು ಪಾರ್ಟಿ ಮಾಡುವಾಗ ಆಕೆ ಗೋಸ್ಟ್ ಹಂಟ್ ಮಾಡಲು ಪ್ರಯತ್ನಿಸುತ್ತಾಳೆ. ಅಲ್ಲಿ ಸಿಗುವ ಆತ್ಮದಿಂದ 20 ವರ್ಷಗಳ ಹಿಂದಿನ ಭಯಾನಕ ಘಟನೆ ಅನಾವರಣ ಆಗುತ್ತದೆ. ಇಂಥ ಕೆಲವು ಕುತೂಹಲಕಾರಿ ದೃಶ್ಯಗಳು ಇವೆ ಎಂದು ‘ಆತ್ಮ’ ಚಿತ್ರತಂಡ ಹೇಳಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.