‘ಪುಷ್ಪ 2’ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ಹಣದಲ್ಲಿ 3 ಸಿನಿಮಾ ನಿರ್ಮಿಸಬಹುದು

Pushpa 2: ಪುಷ್ಪ 2 ಸಿನಿಮಾದ ನಿರ್ಮಾಣದ ಮೇಲೆ ಭಾರಿ ಬಜೆಟ್ ಹೂಡಿಕೆ ಮಾಡಲಾಗಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಸಹ ಭಾರಿ ಬಜೆಟ್ ಅನ್ನು ನಿಗದಿಪಡಿಸಲಾಗಿದ್ದು, ಈ ಸಿನಿಮಾದ ಪ್ರಚಾರದ ಬಜೆಟ್​ನಲ್ಲಿ ಮೂರು ಕಾಂತಾರ ಸಿನಿಮಾ ನಿರ್ಮಿಸಬಹುದಾಗಿದೆ.

‘ಪುಷ್ಪ 2’ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ಹಣದಲ್ಲಿ 3 ಸಿನಿಮಾ ನಿರ್ಮಿಸಬಹುದು
Follow us
ಮಂಜುನಾಥ ಸಿ.
|

Updated on: Nov 05, 2024 | 12:29 PM

‘ಕಾಂತಾರ’ ಸಿನಿಮಾ ಸ್ಯಾಂಡಲ್​ವುಡ್​ನ ಭಾರಿ ದೊಡ್ಡ ಹಿಟ್ ಸಿನಿಮಾ. ಈ ಸಿನಿಮಾಕ್ಕೆ ಹೂಡಿದ್ದ ಬಂಡವಾಳ ಕಡಿಮೆಯೇ ಆದರೆ ಇದು ಮಾಡಿಕೊಟ್ಟ ಲಾಭ ಭಾರಿ ದೊಡ್ಡದು. ಸಿನಿಮಾ ಮೇಲೆ ಹೊಂಬಾಳೆ 15 ಕೋಟಿ ಬಜೆಟ್ ಹೂಡಿಕೆ ಮಾಡಿತ್ತು. 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು ಈ ಸಿನಿಮಾ. ಇದೀಗ ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಪ್ರಚಾರವನ್ನು ಭಾರಿ ಅದ್ಧೂರಿಯಾಗಿ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಪ್ರಚಾರಕ್ಕಾಗಿ ಎಂದೇ ಭಾರಿ ದೊಡ್ಡ ಬಜೆಟ್ ಮೀಸಲಿಡಲಾಗಿದೆ. ಪ್ರಚಾರಕ್ಕೆ ಮೀಸಲಿಟ್ಟಿರುವ ಹಣದಿಂದ ಮೂರು ‘ಕಾಂತಾರ’ ಸಿನಿಮಾ ತೆಗೆಯಬಹುದು.

‘ಪುಷ್ಪ 2’ ಸಿನಿಮಾ ನಿರ್ಮಾಣಕ್ಕೆ ಸುಮಾರು 200 ಕೋಟಿ ಬಜೆಟ್ ಹಾಕಲಾಗಿದೆ. ಸಿನಿಮಾದ ಪ್ರಚಾರಕ್ಕಾಗಿ ಎಂದೇ 50 ಕೋಟಿ ಬಜೆಟ್ ಅನ್ನು ಮೀಸಲಿಡಲಾಗಿದೆ. ಸಿನಿಮಾದ ಪ್ರಚಾರಕ್ಕಾಗಿ ಕೆಲ ಸಂಸ್ಥೆಗಳೊಟ್ಟಿಗೆ ಚಿತ್ರತಂಡ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾದ ಪ್ರಚಾರದ ಯೋಜನೆ ಈಗಾಗಲೇ ರೆಡಿಯಾಗಿದೆ. ಈ ವರೆಗಿನ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಚಾರಕ್ಕಿಂತಲೂ ಭಿನ್ನವಾಗಿ ಈ ಬಾರಿ ಪ್ರಚಾರ ಮಾಡಲು ‘ಪುಷ್ಪ 2’ ಸಿದ್ಧವಾಗಿದ್ದು, ಇದೇ ಕಾರಣಕ್ಕೆ ಇಷ್ಟು ದೊಡ್ಡ ಬಜೆಟ್ ಅನ್ನು ಮೀಸಲಿಡಲಾಗಿದೆ.

ಬೇರೆ ಬೇರೆ ನಗರಗಳಿಗೆ ಹೋಗಿ ಅಲ್ಲಿ ಇವೆಂಟ್​ಗಳನ್ನು ಮಾಡುವುದು ಈ ವರೆಗೆ ಬಹುತೇಕ ಪ್ಯಾನ್ ಇಂಡಿಯಾ ಸಿನಿಮಾಗಳು ನಡೆಸಿಕೊಂಡು ಬಂದಿರುವ ಪದ್ಧತಿ, ‘ಪುಷ್ಪ 2’ ಚಿತ್ರತಂಡ ಸಹ ಇದನ್ನೇ ಫಾಲೋ ಮಾಡಲಿದೆಯಾದರೂ, ತುಸು ಭಿನ್ನವಾಗಿ ಪ್ರಚಾರ ಮಾಡಲಿದೆ. ಭಾರತದ ಆರು ನಗರಗಳನ್ನು ಚಿತ್ರತಂಡ ಗುರುತು ಮಾಡಿಕೊಂಡಿದ್ದು, ಆರು ನಗರಗಳಲ್ಲಿ ಭಾರಿ ಅದ್ಧೂರಿ ಪ್ರಚಾರ ಕಾರ್ಯಕ್ರಮ ಮಾಡಲಿದೆ. ಅಲ್ಲಿನ ಸ್ಥಳೀಯ ಸ್ಟಾರ್ ನಟರನ್ನು ಪ್ರಚಾರಕ್ಕೆ ಆಹ್ವಾನಿಸಲಿದೆ.

ಇದನ್ನೂ ಓದಿ:ಕರ್ನಾಟಕದಲ್ಲಿ ‘ಕೆಜಿಎಫ್ 2’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಮಾಡುತ್ತಾ ‘ಪುಷ್ಪ 2’?

ಭಾರತದ ನಗರಗಳಲ್ಲಿ ಮಾತ್ರವೇ ಅಲ್ಲದೆ, ಜಪಾನ್, ರಷ್ಯಾಗಳಲ್ಲಿಯೂ ಭಾರಿ ದೊಡ್ಡ ಇವೆಂಟ್ ಅನ್ನು ‘ಪುಷ್ಪ 2’ ಮಾಡಲಿದೆ. ಸಾಮಾನ್ಯವಾಗಿ ಭಾರತದ ಸಿನಿಮಾಗಳನ್ನು ದುಬೈ, ಅಮೆರಿಕ ನಗರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ‘ಪುಷ್ಪ 2’ ಸಿನಿಮಾವನ್ನು ದುಬೈ, ಅಮೆರಿಕ ಜೊತೆಗೆ ಜಪಾನ್, ರಷ್ಯಾಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಪುಷ್ಪ’ ಸಿನಿಮಾಕ್ಕೆ ಜಪಾನ್ ಮತ್ತು ರಷ್ಯಾಗಳಲ್ಲಿ ಬಹಳ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು, ಹಾಗಾಗಿ ಈ ಬಾರಿ ಆ ಎರಡು ದೇಶಗಳನ್ನು ವಿಶೇಷವಾಗಿ ಟಾರ್ಗೆಟ್ ಮಾಡಲಾಗಿದೆ.

‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಮುಂಚೆಯೇ 500 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಭಾರಿ ದೊಡ್ಡ ಮೊತ್ತವನ್ನು ಸಿನಿಮಾದ ಪ್ರಚಾರದ ಮೇಲೆ ಹೂಡಿಕೆ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ