AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನ ಬಿಟ್ಟು ಯಾರನ್ನೂ ನೋಡಿಲ್ಲ’: ರಶ್ಮಿಕಾ ಬಗ್ಗೆ ಅಲ್ಲು ಅರ್ಜುನ್ ರೊಮ್ಯಾಂಟಿಕ್ ಮಾತು

Allu Arjun-Rashmika Mandanna: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಕೊಚ್ಚಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

‘ನಿನ್ನ ಬಿಟ್ಟು ಯಾರನ್ನೂ ನೋಡಿಲ್ಲ’: ರಶ್ಮಿಕಾ ಬಗ್ಗೆ ಅಲ್ಲು ಅರ್ಜುನ್ ರೊಮ್ಯಾಂಟಿಕ್ ಮಾತು
Pushpa 2
ಮಂಜುನಾಥ ಸಿ.
|

Updated on:Nov 28, 2024 | 9:58 AM

Share

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ನಿರತವಾಗಿದ್ದು, ದೇಶದ ಏಳು ಪ್ರಮುಖ ನಗರಗಳಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಈಗಾಗಲೇ ಬಿಹಾರದ ಪಟ್ನಾ, ತಮಿಳುನಾಡಿನ ಚೆನ್ನೈನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಿರುವ ಚಿತ್ರತಂಡ ನಿನ್ನೆ ಕೇರಳದ ಕೊಚ್ಚಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಅಲ್ಲು ಅರ್ಜುನ್ ಚಿತ್ರತಂಡದ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ರಶ್ಮಿಕಾ ಮಂದಣ್ಣ ಅವರನ್ನು ವಿಶೇಷವಾಗಿ ಕೊಂಡಾಡಿದರು.

ಕೊಚ್ಚಿ ಕಾರ್ಯಕ್ರಮದಲ್ಲಿ ಮೊದಲು ಮಲಯಾಳಂ ನಟ ಫಹಾದ್ ಫಾಸಿಲ್​ಗೆ ಧನ್ಯವಾದ ಹೇಳಿದ ನಟ ಅಲ್ಲು ಅರ್ಜುನ್, ಬಳಿಕ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡುತ್ತಾ, ‘ಕೇರಳ ಹೇಗೆ ನನಗೆ ಮನೆಯಂತೆ ಭಾಸವಾಗುತ್ತದೆಯೋ ರಶ್ಮಿಕಾ ಮಂದಣ್ಣ ಸಹ ನನಗೆ ಮನೆಯಲ್ಲಿ ಭಾಸವಾಗುತ್ತಾರೆ. ಏಕೆಂದರೆ ಕಳೆದ ಮೂರು ವರ್ಷಗಳಿಂದಲೂ ರಶ್ಮಿಕಾ ಮಂದಣ್ಣ ಹೊರತಾಗಿ ಇನ್ನೊಬ್ಬ ನಟಿಯನ್ನು ನಾನು ಸೆಟ್​ನಲ್ಲಿ ನೋಡಿಯೇ ಇಲ್ಲ. ಮೂರು ವರ್ಷಗಳಿಂದಲೂ ಅವರೊಟ್ಟಿಗೆ ಮಾತ್ರವೇ ನಾನು ಕೆಲಸ ಮಾಡುತ್ತಿದ್ದೇನೆ ಹಾಗಾಗಿ ರಶ್ಮಿಕಾ ಒಂದು ರೀತಿ ನನಗೆ ಮನೆಯ ಅನುಭವ ಕೊಡುತ್ತಾರೆ’ ಎಂದರು.

‘ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್, ಈ ಬಾರಿ ಅವರು ಇಡೀ ದೇಶವನ್ನೇ ಕ್ರಶ್ ಮಾಡಿಬಿಟ್ಟಿದ್ದಾರೆ. ಮತ್ತೊಮ್ಮೆ ಇಡೀ ದೇಶದ ಕ್ರಶ್ ಆಗಲಿದ್ದಾರೆ. ರಶ್ಮಿಕಾ, ನಿಮ್ಮೊಟ್ಟಿಗೆ ಕೆಲಸ ಮಾಡುವುದು ನನಗೆ ಬಹಳ ಸುಲಭ, ಬಹಳ ಕಂಫರ್ಟೆಬಲ್ ಆಗಿರುತ್ತದೆ. ನಿಮ್ಮ ಬೆಂಬಲ ಇಲ್ಲದೆ ಹೋಗಿದ್ದರೆ ಪುಷ್ಪ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಬೆಂಬಲ ಇರದೇ ಇದ್ದಿದ್ದರೆ ನನಗೆ ನಟಿಸಲು ಸಹ ಆಗುತ್ತಿರಲಿಲ್ಲ. ನಿಮ್ಮ ಈ ಬೆಂಬಲ ಮತ್ತು ಪ್ರೀತಿಯನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೀನಿ, ಕೊನೆಯ ಕ್ಷಣದ ವರೆಗೂ’ ಎಂದು ಭಾವುಕವಾಗಿ ಹೇಳಿದ್ದಾರೆ ಅಲ್ಲು ಅರ್ಜುನ್.

ಇದನ್ನೂ ಓದಿ:‘ಪುಷ್ಪ 3’ ಕೂಡ ಬರುತ್ತಾ? ‘ಪುಷ್ಪ 2’ ಬಿಡುಗಡೆಗೂ ಮುನ್ನ ಸುಳಿವು ನೀಡಿದ ರಶ್ಮಿಕಾ ಮಂದಣ್ಣ

‘ನಿಮ್ಮ ಇರುವಿಕೆಯಿಂದ ‘ಪುಷ್ಪ’ ಸಿನಿಮಾ ಹೆಚ್ಚು ಸುಂದರ ಮತ್ತು ಸ್ಪೆಷಲ್ ಆಗಿದೆ. ನಿನ್ನಂಥಹಾ ಯುವತಿಯರಿಂದಲೇ ಜಗತ್ತು ಸುಂದರವಾಗುತ್ತದೆ. ನಿಮ್ಮ ಬೆಂಬಲ, ಪ್ರೀತಿಗೆ ಧನ್ಯವಾದಗಳು’ ಎಂದು ರಶ್ಮಿಕಾ ಮಂದಣ್ಣ ಅವರನ್ನು ಕೊಂಡಾಡಿದ್ದಾರೆ ಅಲ್ಲು ಅರ್ಜುನ್. ಅದೇ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಅವರನ್ನು ಸಹ ಕೊಂಡಾಡಿದ್ದಾರೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್ 05 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಹಲವು ಕನ್ನಡಿಗರು ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಶ್ರೀಲೀಲಾ, ತಾರಕ್ ಪೊನ್ನಪ್ಪ ಅವರುಗಳು ನಟಿಸಿದ್ದಾರೆ. ಸಿನಿಮಾದಲ್ಲಿ ಫಹಾದ್ ಫಾಸಿಲ್, ಸುನಿಲ್, ರಾವ್ ರಮೇಶ್, ಜಗಪತಿ ಬಾಬು ಇನ್ನೂ ಕೆಲವು ಸ್ಟಾರ್ ನಟರು ಸಹ ಇದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:55 am, Thu, 28 November 24