ಹೊಸ ಹಾದಿ ಹಿಡಿದ ಬೇಡಿಕೆಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್
Anirudh Ravichander: ಜನಪ್ರಿಯ ಹಾಗೂ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ವೃತ್ತಿಯ ಉತ್ತುಂಗದಲ್ಲಿರುವಾಗಲೇ ಹಾದಿ ಬದಲಾಯಿಸುವ ನಿರ್ಧಾರ ಮಾಡಿದ್ದಾರೆ.
ಅನಿರುದ್ಧ್ ರವಿಚಂದರ್ (Anirudh Ravichander) ಹೆಸರು ಕೇಳದಿರುವ ಸಿನಿಮಾ ಹಾಗೂ ಸಿನಿಮಾ ಸಂಗೀತ ಪ್ರೇಮಿಗಳ ಸಂಖ್ಯೆ ಕಡಿಮೆ. ಒಂದೊಮ್ಮೆ ಅನಿರುದ್ಧ್ ರವಿಚಂದರ್ ಹೆಸರು ಕೇಳಿಲ್ಲವೆಂದರೂ ಅವರ ಹಾಡುಗಳನ್ನಂತೂ ಕೇಳಿಯೇ ಇರುತ್ತಾರೆ. ವಿಶ್ವದಾದ್ಯಂತ ವೈರಲ್ ಆಗಿದ್ದ ‘ವೈ ದಿಲ್ ಕೊಲಾವೆಡಿ ಡೀ’ ಹಾಡು ಮಾಡಿದಾಗ ಅನಿರುದ್ಧ್ ರವಿಚಂದರ್ ವಯಸ್ಸು ಕೇವಲ 22 ಆಗಿತ್ತು. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಸಂಗೀತ ನಿರ್ದೇಶನ ಆರಂಭಿಸಿದ ಅನಿರುದ್ಧ್ ರವಿಚಂದರ್ ಪ್ರಸ್ತುತ ಭಾರತದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕ. ವೃತ್ತಿಯ ಉತ್ತುಂಗದಲ್ಲಿರುವಾಗಲೇ ಅನಿರುದ್ದ್ ಹಾದಿ ಬದಲಿಸಿದ್ದಾರೆ.
ಅನಿರುದ್ಧ್ ರವಿಚಂದರ್ ಸಂಗೀತ ನೀಡುವ ಸಿನಿಮಾಗಳ ಹಾಡುಗಳು ಒಂದರ ಹಿಂದೊಂದು ವೈರಲ್ ಆಗುತ್ತಲೇ ಇವೆ. ತಮಿಳು, ತೆಲುಗು ಸಿನಿಮಾಗಳಿಗಷ್ಟೆ ಸಂಗೀತ ನೀಡುತ್ತಿದ್ದ ಅನಿರುದ್ಧ್ ಶಾರುಖ್ ಖಾನ್ರ ‘ಜವಾನ್’ ಸಿನಿಮಾ ಮೂಲಕ ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಅವರೇ ಹೇಳಿಕೊಂಡಿದ್ದಂತೆ ದಿನಕ್ಕೊಂದು ಸಿನಿಮಾ ಆಫರ್ಗಳು ಅವರಿಗೆ ಈ ಹಂತದಲ್ಲಿ ಬರುತ್ತಿವೆ. ಅವರ ಲೈವ್ ಕಾನ್ಸರ್ಟ್ಗಳ ಟಿಕೆಟ್ಗಳು ಬಿಸಿ ದೋಸೆಯಂತೆ ಸೇಲ್ ಆಗುತ್ತಿವೆ. ಇಷ್ಟೆಲ್ಲ ಇದ್ದರೂ ಸಹ ಅನಿರುದ್ಧ್ ರವಿಚಂದರ್ ಹೊಸ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:Leo Trailer: ‘ಲಿಯೋ’ ಟ್ರೇಲರ್ ಪ್ರಸಾರ ಮಾಡಿ ಸಂಕಷ್ಟಕ್ಕೆ ಸಿಲುಕಿದ ಥಿಯೇಟರ್ ಮಾಲೀಕರು
‘ಹುಕುಮ್’ ಹೆಸರಿನಲ್ಲಿ ವರ್ಲ್ ಮ್ಯೂಸಿಕ್ ಟೂರ್ ನಲ್ಲಿ ಅನಿರುದ್ಧ್ ರವಿಚಂದರ್ ಬ್ಯುಸಿಯಾಗಿದ್ದಾರೆ. ವಿದೇಶಗಳಲ್ಲಿ ಅದ್ಧೂರಿ ಲೈವ್ ಶೋಗಳನ್ನು ಅನಿರುದ್ಧ್ ಮಾಡುತ್ತಿದ್ದಾರೆ. ಅಂಥಹುದೇ ಒಂದು ಶೋನಲ್ಲಿ ತಾವು ಸಿನಿಮಾ ಒಂದನ್ನು ನಿರ್ದೇಶನ ಮಾಡಲು ಮುಂದಾಗಿರುವ ವಿಷಯ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಆ ಸಿನಿಮಾವನ್ನು ಅನಿರುದ್ಧ್ ರವಿಚಂದರ್ ಮಲಯಾಳಂನಲ್ಲಿ ನಿರ್ದೇಶನ ಮಾಡಲಿದ್ದಾರಂತೆ. ಕತೆಯ ಮೇಲೆ ಕೆಲಸ ಚಾಲ್ತಿಯಲ್ಲಿದೆ ಎಂದು ಸಹ ಅನಿರುದ್ಧ್ ಹೇಳಿಕೊಂಡಿದ್ದಾರೆ.
ಅಲ್ಲದೆ, ತಾವು ತಮ್ಮ ಬಹು ಮೆಚ್ಚಿನ ನಟನೊಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಸಹ ಹೇಳಿಕೊಂಡಿದ್ದಾರೆ. ನಟ ಮಾತ್ರವೇ ಅಲ್ಲದೆ ಆ ಸಿನಿಮಾದ ನಿರ್ದೇಶಕ ಸಹ ಅನಿರುದ್ಧ್ಗೆ ಬಹು ಅಚ್ಚು-ಮೆಚ್ಚಂತೆ. ಸಿನಿಮಾದ ಬಗ್ಗೆ ಪ್ರಸ್ತುತ ಹೆಚ್ಚು ಹೇಳುವಂತಿಲ್ಲ ಏಕೆಂದರೆ ನಿರ್ಮಾಣ ಸಂಸ್ಥೆಯು ಸಿನಿಮಾದ ಪ್ರಚಾರದ ಬಗ್ಗೆ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದಿದ್ದಾರೆ ಅನಿರುದ್ಧ್.
ಅನಿರುದ್ಧ್ ಪ್ರಸ್ತುತ, ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ದೇವರ’, ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’, ‘ವಿದಾ ಮುಯರ್ಚಿ’, ‘ವೆಟ್ಟೈಯಾನ್’, ರಜನೀಕಾಂತ್ ನಟನೆಯ 171ನೇ ಸಿನಿಮಾ, ವಿಘ್ನೇಶ್ ಶಿವನ್ರ ‘ಎಲ್ಐಸಿ’ ಸಿನಿಮಾಗಳಿಗೆ ಸಂಗೀತ ನೀಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ