ಕೊವಿಡ್ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್; ಕಾರಣ ಏನು?
ದೇಶದಲ್ಲಿ ಕೊವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಗಿದ್ದರೂ ಕೂಡ ರಜನಿಕಾಂತ್ ಈ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಅಮೆರಿಕಕ್ಕೆ ಹೋಗಿದ್ದಾರೆ. ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಅವರ ಫೋಟೋ, ವಿಡಿಯೋ ವೈರಲ್ ಆಗಿದೆ.
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಶನಿವಾರ (ಜೂ.19) ಮುಂಜಾನೆ ಸದ್ದಿಲ್ಲದೇ ವಿದೇಶಕ್ಕೆ ಹಾರಿದ್ದಾರೆ. ಇಷ್ಟು ದಿನಗಳ ಕಾಲ ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವ ಆಡುತ್ತಿತ್ತು. ಈಗ ನಿಧಾನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಅಮೆರಿಕಕ್ಕೆ ತೆರಳಿದ್ದಾರೆ. ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಕೆಲವು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಜನಿಕಾಂತ್ ಜೊತೆ ಅವರ ಪತ್ನಿ ಲತಾ ಕೂಡ ಅಮೆರಿಕದ ವಿಮಾನ ಹತ್ತಿದ್ದಾರೆ.
ಅಷ್ಟಕ್ಕೂ ರಜನಿಕಾಂತ್ ಹೀಗೆ ಏಕಾಏಕಿ ಅಮೆರಿಕಕ್ಕೆ ತೆರಳಿರುವುದು ಏಕೆ? ಯಾವುದೇ ಸಿನಿಮಾ ಶೂಟಿಂಗ್ ಸಲುವಾಗಿ ಅವರು ಅಲ್ಲಿಗೆ ಹೋಗಿಲ್ಲ. ಬದಲಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹೋಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆರೋಗ್ಯ ತಪಾಸಣೆ ಎಂದ ಮಾತ್ರಕ್ಕೆ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಕೂಡ ಇಲ್ಲ. ಅವರು ಚೆನ್ನಾಗಿಯೇ ಇದ್ದಾರೆ. ಸಹಜವಾಗಿ ಕೆಲವು ಚೆಕಪ್ ಮತ್ತು ಟೆಸ್ಟ್ ಮಾಡಿಸಿಕೊಳ್ಳಲು ಅವರು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಕೊವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಗಿದ್ದರೂ ಕೂಡ ರಜನಿಕಾಂತ್ ಈ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ಹೋಗಿದ್ದಾರೆ ಎಂದರೆ ಏನೋ ಸಮಸ್ಯೆ ಖಂಡಿತಾ ಇರಬೇಕು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ವೈರಸ್ ಎರಡನೇ ಅಲೆ ಜೋರಾದ ನಂತರದಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ರಜನಿಕಾಂತ್ ನಟಿಸುತ್ತಿದ್ದ ‘ಅಣ್ಣಾಥೆ’ ಸಿನಿಮಾದ ಕೆಲಸಗಳಿಗೆ ಕೊರೊನಾ ವೈರಸ್ ಕಾರಣದಿಂದ ಬ್ರೇಕ್ ಹಾಕಲಾಗಿದೆ. ರಾಜಕೀಯದ ಚಟುವಟಿಕೆಗಳಿಂದಲೂ ಅವರು ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ರಜನಿಕಾಂತ್ ಅಳಿಯ, ನಟ ಧನುಷ್ ಅವರು ತಮ್ಮ ಹಾಲಿವುಡ್ ಸಿನಿಮಾ ಶೂಟಿಂಗ್ ಸಲುವಾಗಿ ಈ ಮೊದಲೇ ಕುಟುಂಬ ಸಮೇತ ಅಮೆರಿಕಕ್ಕೆ ತೆರಳಿದ್ದರು. ರಜನಿಕಾಂತ್ ಅವರ ಆರೋಗ್ಯ ತಪಾಸಣೆ ವೇಳೆ ಅವರು ಜೊತೆಗಿರಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಜು.8ರಂದು ಅವರು ಭಾರತಕ್ಕೆ ವಾಪಸ್ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:
Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್; ಅವರ ಕೊನೆಯ ಚಿತ್ರ ಯಾವುದು?
ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್