ಪೊನ್ನಿಯಿನ್ ಸೆಲ್ವನ್ನಲ್ಲಿ ನಟಿಸಬೇಕಿತ್ತು ಅನುಷ್ಕಾ ಶೆಟ್ಟಿ, ಆದರೆ ಮಹತ್ವವಾದ ಕಾರಣಕ್ಕೆ ಸಿನಿಮಾ ಕೈಬಿಟ್ಟರು ನಟಿ
Ponniyin Selvan: ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸಿರುವ ಪಾತ್ರದ ಅವಕಾಶ ಮೊದಲು ಸಿಕ್ಕಿದ್ದು ಅನುಷ್ಕಾ ಶೆಟ್ಟಿಗೆ, ಆದರೆ ಪ್ರಬಲ ಕಾರಣವೊಂದಕ್ಕಾಗಿ ಆ ಅವಕಾಶ ನಿರಾಕರಿಸಿದರು ಅನುಷ್ಕಾ ಶೆಟ್ಟಿ.
ಅನುಷ್ಕಾ ಶೆಟ್ಟಿ (Anushka Shetty) ದಕ್ಷಿಣ ಭಾರತದ ಚಿತ್ರರಂಗ ಕಂಡ ಅದ್ಭುತ ನಟಿಯರಲ್ಲೊಬ್ಬರು. ಬಾಹುಬಲಿ (Bahubali) ಸಿನಿಮಾದ ಬಳಿಕ ಏಕೋ ತುಸು ಮಂಕಾಗಿದ್ದಾರೆ. ಬಾಹುಬಲ ಬಳಿಕ ಅನುಷ್ಕಾ ಶೆಟ್ಟಿಗೆ ಹಲವು ಅವಕಾಶಗಳು ಬಂದಿದ್ದವು ಆದರೆ ಬೇರೆ-ಬೇರೆ ಕಾರಣಗಳಿಗೆ ಅವುಗಳನ್ನು ಅನುಷ್ಕಾ ಶೆಟ್ಟಿ ನಿರಾಕರಿಸಿದರು. ಅದರಲ್ಲಿಯೂ ಮಣಿರತ್ನಂ ನಿರ್ದೇಶನದ ದೊಡ್ಡ ತಾರಾಗಣದ ಪ್ಯಾನ್ ಇಂಡಿಯಾ (Pan India) ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾದ ಪ್ರಮುಖ ಪಾತ್ರದ ಅವಕಾಶ ಅನುಷ್ಕಾ ಶೆಟ್ಟಿಗೆ ನೀಡಲಾಗಿತ್ತು ಆದರೆ ಅವರ ಅಭಿಮಾನಿಗಳು ಭೇಷ್ ಎನ್ನಬಹುದಾದ ಕಾರಣ ನೀಡಿ ಮಹತ್ವದ ಅವಕಾಶವನ್ನು ನಿರಾಕರಿಸಿದರು ಅನುಷ್ಕಾ.
2019ರ ಮುಂಚೆಯೇ ನಿರ್ದೇಶಕ ಮಣಿರತ್ನಂ, ಪೊನ್ನಿಯಿನ್ ಸೆಲ್ವನ್ ಸಿನಿಮಾ ಮಾಡುವ ನಿಶ್ಚಯ ಮಾಡಿದ್ದರು. ಈಗ ಐಶ್ವರ್ಯಾ ರೈ ನಟಿಸಿರುವ ಸಿನಿಮಾದ ಅತ್ಯಂತ ಪ್ರಮುಖವಾದ ನಂದಿನಿ ಪಾತ್ರಕ್ಕಾಗಿ ಅನುಷ್ಕಾ ಶೆಟ್ಟಿಯನ್ನು ಕೇಳಲಾಗಿತ್ತು. ಮಣಿರತ್ನಂ ಸಿನಿಮಾದ ಸಣ್ಣ ಪಾತ್ರದಲ್ಲಿ ನಟಿಸಿದರೂ ಸಾಕೆಂದು ದೊಡ್ಡ-ದೊಡ್ಡ ನಟ-ನಟಿಯರೇ ಕಾಯುತ್ತಿರುತ್ತಾರೆ ಅನುಷ್ಕಾ ಶೆಟ್ಟಿಗೂ ಆ ಆಸೆಯಿತ್ತು, ಆದರೂ ಸಹ ಅನುಷ್ಕಾ ಶೆಟ್ಟಿ, ಮಣಿರತ್ನಂ ನೀಡಿದ ಅವಕಾಶ ತಿರಸ್ಕರಿಸಿದರು.
ಪೊನ್ನಿಯಿನ್ ಸೆಲ್ವನ್ ಸಿನಿಮಾದ ಅವಕಾಶ ನೀಡಿದಾಗ ಆ ತಂಡದ ಮಾಹಿತಿಯನ್ನು ಅನುಷ್ಕಾ ಶೆಟ್ಟಿಗೆ ನೀಡಲಾಗಿತ್ತು. ಸಿನಿಮಾ ತಂಡದಲ್ಲಿ ಮೀ ಟೂ ಆರೋಪ ಇದ್ದ ತಂತ್ರಜ್ಞರೊಬ್ಬರು ಇರುವುದನ್ನು ಗಮನಿಸಿದ ಅನುಷ್ಕಾ ಶೆಟ್ಟಿ, ಮೀ ಟೂ ಆರೋಪ ಹೊತ್ತಿರುವ ವ್ಯಕ್ತಿ ಇರುವ ತಂಡದಲ್ಲಿ ತಾನು ಕೆಲಸ ಮಾಡುವುದಿಲ್ಲ, ಅದು ಸಂತ್ರಸ್ತೆಗೆ ಮಾಡಿದ ಅಪಮಾನ ಎಂದು ತಿಳಿಸಿ ಅವಕಾಶವನ್ನು ಅನುಷ್ಕಾ ನಿರಾಕರಿಸಿದರು.
ಮೀ ಟೂ ಆರೋಪಗಳನ್ನು ಎದುರಿಸುತ್ತಿರುವ ಜನಪ್ರಿಯ ಚಿತ್ರ ಸಾಹಿತಿ ವೈರಮುತ್ತು ಪೊನ್ನಿಯಿನ್ ಸೆಲ್ವನ್ ಸಿನಿಮಾಕ್ಕೆ ಹಾಡುಗಳನ್ನು ರಚಿಸುವವರಿದ್ದರು. ಇದೇ ಕಾರಣಕ್ಕೆ ಅನುಷ್ಕಾ ಶೆಟ್ಟಿ ಈ ಸಿನಿಮಾದಿಂದ ಹೊರಗುಳಿದರು. ಸಿನಿಮಾದ ವಿಕಿಪೀಡಿಯಾ ಪೇಜ್ನಲ್ಲಿಯೂ ಈ ಬಗ್ಗೆ ಮಾಹಿತಿ ಇದೆ. ಅನುಷ್ಕಾ ಶೆಟ್ಟಿ ಮಾತ್ರವೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಚರ್ಚೆಗಳಾಗಿ ವೈರಮುತ್ತುವನ್ನು ಚಿತ್ರತಂಡದಿಂದ ಕೈಬಿಡಬೇಕೆಂಬ ಒತ್ತಾಯ ಕೇಳಿ ಬಂದಿತು. ಕೊನೆಗೆ ಮಣಿರತ್ನಂ, ವೈರಮುತ್ತು ಅವರನ್ನು ಚಿತ್ರತಂಡದಿಂದ ಕೈಬಿಟ್ಟರು.
ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2 ಮೊದಲ ದಿನ ಎಷ್ಟು ಗಳಿಸಬಹುದು? ಕೆಜಿಎಫ್ 2 ದಾಖಲೆ ಮುರಿಯಬಲ್ಲುದೆ?
ಈ ನಿರ್ಣಯ ಮಾಡುವ ವೇಳೆಗಾಗಲೆ ನಂದಿನಿ ಪಾತ್ರದ ಅವಕಾಶ ಅನುಷ್ಕಾ ಶೆಟ್ಟಿಯ ಕೈಜಾರಿ ಹೋಗಿತ್ತು. ಆ ಪಾತ್ರಕ್ಕೆ ಮಣಿರತ್ನಂ ತಮ್ಮ ಮೆಚ್ಚಿನ ನಟಿ ಐಶ್ವರ್ಯಾ ರೈ ಅವರನ್ನು ಹಾಕಿಕೊಂಡಿದ್ದರು. ಹೀಗಾಗಿ ಒಂದು ಅದ್ಭುತ ಸಿನಿಮಾದ ಅವಕಾಶ ಅನುಷ್ಕಾ ಶೆಟ್ಟಿಯ ಕೈತಪ್ಪಿತು.
ಇದೀಗ ಅನುಷ್ಕಾ ಶೆಟ್ಟಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 2020 ರಲ್ಲಿ ಬಿಡುಗಡೆ ಆಗಿದ್ದ ನಿಶ್ಯಬ್ದಂ ಸಿನಿಮಾದ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಅನುಷ್ಕಾ ನಟಿಸಿರಲಿಲ್ಲ. ಇದೀಗ ನವೀನ್ ಪೋಲಿಶೆಟ್ಟಿ ನಟನೆಯ ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ