Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊನ್ನಿಯಿನ್ ಸೆಲ್ವನ್ 2 ಮೊದಲ ದಿನ ಎಷ್ಟು ಗಳಿಸಬಹುದು? ಕೆಜಿಎಫ್ 2 ದಾಖಲೆ ಮುರಿಯಬಲ್ಲುದೆ?

Ponniyin Selvan 2: ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ನಾಳೆ (ಏಪ್ರಿಲ್ 28) ರಂದು ಬಿಡುಗಡೆ ಆಗಲಿದೆ. ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು? ಕೆಜಿಎಫ್ 2 ದಾಖಲೆ ಮುರಿಯಬಹುದೆ?

ಪೊನ್ನಿಯಿನ್ ಸೆಲ್ವನ್ 2 ಮೊದಲ ದಿನ ಎಷ್ಟು ಗಳಿಸಬಹುದು? ಕೆಜಿಎಫ್ 2 ದಾಖಲೆ ಮುರಿಯಬಲ್ಲುದೆ?
ಪೊನ್ನಿಯಿನ್ ಸೆಲ್ವನ್ 2
Follow us
ಮಂಜುನಾಥ ಸಿ.
|

Updated on: Apr 27, 2023 | 8:57 PM

ಯಾವುದೇ ದೊಡ್ಡ ಸ್ಟಾರ್​ ನಟರ ಬಿಗ್​ಬಜೆಟ್ ಪ್ಯಾನ್ ಇಂಡಿಯಾ (Pan India) ಸಿನಿಮಾ ಬಿಡುಗಡೆ ಆಗುವಾಗಲೂ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದೆಂಬ ಕುತೂಹಲ ಸಾಮಾನ್ಯ. ಸಿನಿಮಾ ಪ್ರೇಕ್ಷಕರು ಹಾಗೂ ಬಾಕ್ಸ್ ಆಫೀಸ್ ವಿಶ್ಲೇಷಕರು ಈ ಬಗ್ಗೆ ಕುತೂಹಲದಿಂದ ಕಾಯುತ್ತಿರುತ್ತಾರೆ. ಈಗಂತೂ ಸಿನಿಮಾ ಬಿಡುಗಡೆ ಆಗುವ ಮೊದಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್, ಸಿನಿಮಾದ ಬಿಡುಗಡೆ ಬಗ್ಗೆ ಇರುವ ನಿರೀಕ್ಷೆ, ಬಿಡುಗಡೆ ಆಗಲಿರುವ ಚಿತ್ರಮಂದಿರಗಳ ಸಂಖ್ಯೆ ಇನ್ನಿತರೆಗಳನ್ನು ಪರಿಗಣಿಸಿ ಮೊದಲ ದಿನ ಇಂತಿಷ್ಟು ಹಣ ಗಳಿಸಬಹುದು ಎಂದು ಊಹಿಸಲಾಗುತ್ತದೆ, ಹಲವು ಪ್ರಕರಣಗಳಲ್ಲಿ ಈ ಊಹೆ ಬಹುತೇಕ ಸರಿಯಾಗಿಯೇ ಇರುತ್ತದೆ.

ಇದೀಗ ಮಣಿರತ್ನಂ (Manirathnam) ನಿರ್ದೇಶನದ ಬಹುತಾರಾಗಣದ ಭಾರಿ ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ತೆರೆಗೆ ಬರಲು ಸಜ್ಜಾಗಿದೆ. ನಾಳೆ ಅಂದರೆ ಏಪ್ರಿಲ್ 28 ರಂದು ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ತಮಿಳು, ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದ್ದು, ಚಿತ್ರತಂಡವು ಬೆಂಗಳೂರು ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಿಗೆ ತೆರಳಿ ತುರುಸಿನ ಪ್ರಚಾರ ಮಾಡಿವೆ.

ಇದೀಗ, ಮೊದಲ ದಿನ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರ ಪ್ರಾರಂಭವಾಗಿದೆ. ಈ ಸಿನಿಮಾ, ಯಾವ ದೊಡ್ಡ ಸೂಪರ್ ಹಿಟ್ ಸಿನಿಮಾದ ದಾಖಲೆ ಮುರಿಯಬಹುದು ಎಂಬ ಲೆಕ್ಕಾಚಾರವೂ ಶುರುವಾಗಿದೆ. ಕೆಲವು ವಿಶ್ಲೇಷಕರ ಪ್ರಕಾರ, ಪೊನ್ನಿಯಿನ್ ಸೆಲ್ವನ್ 2 ಸಿನಿಮಾಕ್ಕೆ ಎಲ್ಲ ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ, ಈಗಾಗಲೇ ಮಲ್ಟಿಪ್ಲೆಕ್ಸ್​ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಚೆನ್ನಾಗಿ ಆಗಿದ್ದು, ಮೊದಲ ಮೂರು ದಿನ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ.

ಸಿನಿಮಾ ವ್ಯವಹಾರ ವಿಶ್ಲೇಷಕರಾದ ರಮೇಶ್ ಬಾಲಾ, ಗಿರಿಶ್ ಜೋಹರ್, ಸ್ಯಾಕ್​ನಿಲಿಕ್ ಅವರುಗಳು ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂಬ ಅಂದಾಜು ನೀಡಿದ್ದಾರೆ. ರಮೇಶ್ ಬಾಲ ಪ್ರಕಾರ, ಪಿಎಸ್​2 ತಮಿಳುನಾಡು ಒಂದರಲ್ಲಿಯೇ ಮೊದಲ ದಿನ ಸುಮಾರು 15 ಕೋಟಿಗೂ ಹೆಚ್ಚು ಗಳಿಕೆ ಮಾಡಲಿದೆ. ಇತರೆ ಭಾಷೆಗಳನ್ನೂ ಸೇರಿಸಿ ಮೊದಲ ದಿನ ಈ ಸಿನಿಮಾದ ಕಲೆಕ್ಷನ್ 25 ಕೋಟಿ ಆಗಬಹುದು, ನಿಧಾನವಾದ ಆರಂಭ ಕಂಡರೂ ಸಹ ಈ ಸಿನಿಮಾ ಪೊನ್ನಿಯಿನ್ ಸೆಲ್ವನ್ 1 ಕಲೆಕ್ಷನ್ ಅನ್ನು ದಾಟಲಿದೆ ಎಂದಿದ್ದಾರೆ.

ಇದನ್ನೂ ಓದಿ:‘ಪೊನ್ನಿಯಿನ್ ಸೆಲ್ವನ್​ 2’ ಸಿನಿಮಾ ಅವಧಿ ಇಷ್ಟೊಂದಾ? ಸೀಟ್​ ಮೇಲೆ ಕೂರೋದೆ ಚಾಲೆಂಜ್

ಇನ್ನು ಗಿರಿಶ್ ಜೋಹರ್ ಮಾಡಿರುವ ಅಂದಾಜಿನ ಪ್ರಕಾರ, ಪೊನ್ನಿಯಿನ್ ಸೆಲ್ವನ್ 2 ಸಿನಿಮಾವು ಮೊದಲ ದಿನ 30 ಕೋಟಿ ಗಳಿಸಬಹುದಂತೆ. ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ 11 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದ್ದು, ತಮಿಳುನಾಡಿನಲ್ಲಿ ದೊಡ್ಡ ಮೊತ್ತದ ಹಣ ಕಲೆಕ್ಷನ್ ಮಾಡಲಿದೆ ಎಂದಿದ್ದಾರೆ. ಇನ್ನು ಮತ್ತೊಬ್ಬ ಟ್ರೇಡ್ ವಿಶ್ಲೇಷಕ ಸ್ಯಾಕ್​ನಿಲಿಕ್ ಪೊನ್ನಿಯಿನ್ ಸೆಲ್ವನ್ 2 ಸಿನಿಮಾವು ಮೊದಲ ದಿನ 35 ಕೋಟಿ ಗಳಿಸಲಿದ್ದು, ಪೊನ್ನಿಯಿನ್ ಸೆಲ್ವನ್ 1 ದಾಖಲೆಯನ್ನು ಸುಲಭವಾಗಿ ಮುರಿಯಲಿದೆ ಎಂದಿದ್ದಾರೆ. ಅಂದಹಾಗೆ ಕನ್ನಡದ ಕೆಜಿಎಫ್ 2 ಸಿನಿಮಾ ಮೊದಲ ದಿನವೇ 134 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು.

ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿ ಭಾರಿ ದೊಡ್ಡ ತಾರಾಗಣ ಇದೆ. ಚಿಯಾನ್ ವಿಕ್ರಂ, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ, ಜಯಂ ರವಿ, ಐಶ್ವರ್ಯಾ ಲಕ್ಷ್ಮಿ, ವಿಕ್ರಂ ಪ್ರಭು, ಶೋಭಿತಾ ಧುಲಿಪಾಲ, ಕನ್ನಡದ ಕಿಶೋರ್ ಇನ್ನು ಹಲವು ಸ್ಟಾರ್​ಗಳು ಈ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ