ಅನುಷ್ಕಾ ಶೆಟ್ಟಿಗೆ ನಗುವಿನ ಕಾಯಿಲೆ; ಸಮಸ್ಯೆ ಹೇಳಿಕೊಂಡ ನಟಿ
ಇದು ಅಪರೂಪದ ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಯು ಅನಿಯಂತ್ರಿತವಾಗಿ ನಗಲು ಪ್ರಾರಂಭಿಸುತ್ತಾನೆ ಅಥವಾ ಅಳಲು ಪ್ರಾರಂಭಿಸುತ್ತಾನೆ. ಅನುಷ್ಕಾ ಶೆಟ್ಟಿ ಕೂಡ ಬಳಲುತ್ತಿರುವುದು ಇದೇ ಕಾಯಿಲೆಯಿಂದ.
ಸೌತ್ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರುವ ಅನುಷ್ಕಾ ಶೆಟ್ಟಿ ಕನ್ನಡ ಮಂದಿಗೂ ಪರಿಚಯವಾಗಿದ್ದಾರೆ. ಅವರ ತಾಯಿ ಮಂಗಳೂರಿನವರು. ಅವರಿಗೆ ಕನ್ನಡವೂ ಬರುತ್ತದೆ. ‘ಬಾಹುಬಲಿ’ ಚಿತ್ರದಿಂದ ಅನುಷ್ಕಾ ಶೆಟ್ಟಿ (Anushka Shetty) ಜನಪ್ರಿಯತೆ ಹೆಚ್ಚಿದೆ. ನಟಿ ಅನೇಕ ಜನಪ್ರಿಯ ದಕ್ಷಿಣದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಆರೋಗ್ಯದ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ತಾವು ಅಪರೂಪದ ಕಾಯಿಲೆ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಟಿ ನಗಲು ಪ್ರಾರಂಭಿಸಿದರೆ ತಡೆಯಲಾರದೆ ನಗುತ್ತಲೇ ಇರುತ್ತಾರಂತೆ. ಅವರು ಮತ್ತೆ ಸಾಮಾನ್ಯರಾಗಲು 15-20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ನಟಿಯ ನೋವು
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ನಟಿ ಅನುಷ್ಕಾ ಶೆಟ್ಟಿ, ‘ನನಗೆ ನಗುವ ಕಾಯಿಲೆ ಇದೆ. ನಗುವುದು ಕೂಡ ಒಂದು ಕಾಯಿಲೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ನನ್ನ ವಿಷಯದಲ್ಲಿ ಹಾಗೆಯೇ ಆಗಿದೆ. ಒಮ್ಮೆ ನಗಲು ಶುರು ಮಾಡಿದರೆ 15-20 ನಿಮಿಷ ನಗುವುದನ್ನು ನಿಲ್ಲಿಸುವುದು ಕಷ್ಟವಾಗುತ್ತದೆ. ಯಾವುದೇ ಹಾಸ್ಯ ದೃಶ್ಯವನ್ನು ನೋಡುವಾಗ ಅಥವಾ ಚಿತ್ರೀಕರಣ ಮಾಡುವಾಗ, ನಾನು ನಗುತ್ತಾ ನೆಲದ ಮೇಲೆ ಉರುಳುತ್ತೇನೆ. ಇದರಿಂದ ಶೂಟಿಂಗ್ ನಿಲ್ಲಿಸಬೇಕಾಗಿ ಬಂದಿರುವುದು ಹಲವು ಬಾರಿ ಆಗಿದೆ’ ಎಂದಿದ್ದಾರೆ ಅನುಷ್ಕಾ.
ಈ ಅಪರೂಪದ ಕಾಯಿಲೆ ಯಾವುದು?
ಅನುಷ್ಕಾ ಶೆಟ್ಟಿ ಅವರು Pseudobulbar ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ಶಾರ್ಟ್ಫಾರ್ಮ್ನಲ್ಲಿ PBA ಎಂದು ಕರೆಯುತ್ತಾರೆ. ಇದು ಅಪರೂಪದ ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದು ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಯು ಅನಿಯಂತ್ರಿತವಾಗಿ ನಗಲು ಪ್ರಾರಂಭಿಸುತ್ತಾನೆ ಅಥವಾ ಅಳಲು ಪ್ರಾರಂಭಿಸುತ್ತಾನೆ. ನಟಿ ಈ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಹೇಳದಿದ್ದರೂ, ಅವರ ಹೇಳಿಕೆಯಿಂದ ನಟಿ ಬಳಲುತ್ತಿರುವುದು ಇದೇ ಸಮಸ್ಯೆ ಎನ್ನಲಾಗುತ್ತಿದೆ. ಕಳೆದ ಬಾರಿ ಅವರು ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ? ಟಾಲಿವುಡ್ ಅಂಗಳದಲ್ಲಿ ಹಲ್ಚಲ್ ಎಬ್ಬಿಸಿದ ಗಾಸಿಪ್
‘ಬಾಹುಬಲಿ’ ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅಗ್ರೆಸ್ಸಿವ್ ಆಗಲೇ ಇಲ್ಲ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸಿದರು. ಆದರೆ, ಇದ್ಯಾವುದೂ ದೊಡ್ಡ ಗೆಲುವು ಕಂಡಿಲ್ಲ. ಅನುಷ್ಕಾ ಶೆಟ್ಟಿ ಇನ್ನೂ ಮದುವೆ ಆಗಿಲ್ಲ. ಈ ವಿಚಾರ ಕೂಡ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.