ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?

TV9 Digital Desk

| Edited By: ಮದನ್​ ಕುಮಾರ್​

Updated on: May 21, 2022 | 1:09 PM

Pooja Hegde: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ಪೂಜಾ ಹೆಗ್ಡೆ ಬಟ್ಟೆ ಮತ್ತು ಮೇಕಪ್​ ಪರಿಕರಗಳನ್ನು ಕಳೆದುಕೊಂಡಿದ್ದು ಈಗ ಗೊತ್ತಾಗಿದೆ. ಈ ಕಹಿ ಅನುಭವದಿಂದಾಗಿ ಅವರಿಗೆ ಗಾಬರಿ ಆಗಿತ್ತು.

ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?
ಪೂಜಾ ಹೆಗ್ಡೆ

ನಟಿಯರು ತಮ್ಮ ಉಡುಗೆ ತೊಡುಗೆ ಬಗ್ಗೆ ಸಖತ್​ ಕಾಳಜಿ ವಹಿಸುತ್ತಾರೆ. ಚಿಕ್ಕ ಕಾರ್ಯಕ್ರಮದಲ್ಲಿ ಭಾಗವಹಿಸುವಾಗಲೂ ಕೂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಮಾರಂಭದ ಥೀಮ್​ಗೆ ಅನುಗುಣವಾದ ಬಟ್ಟೆ ಧರಿಸಿ, ಅದಕ್ಕೆ ಒಪ್ಪುವಂತಹ ಹೇರ್​ ಸ್ಟೈಲ್​ ಮತ್ತು ಮೇಕಪ್​ ಮಾಡಿಕೊಳ್ಳುತ್ತಾರೆ. ಅಂಥದ್ದರಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಎಷ್ಟೆಲ್ಲ ತಯಾರಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಸುಲಭವಲ್ಲ. ಹಾಗೆ ಮಾಡಿಕೊಂಡ ಪೂರ್ವ ತಯಾರಿಯೆಲ್ಲ ಒಂದೇ ನಿಮಿಷದಲ್ಲಿ ಹಾಳಾಗಿಬಿಟ್ಟರೆ? ದಿಕ್ಕೇ ತೋಚದಂತಾಗುತ್ತದೆ. ನಟಿ ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ಹಾಗೆಯೇ ಆಯಿತು. ಆ ಅನುಭವವನ್ನು ಅವರೀಗ ಹಂಚಿಕೊಂಡಿದ್ದಾರೆ. 75ನೇ ವರ್ಷದ ಪ್ರತಿಷ್ಠಿತ ಕಾನ್​ ಚಿತ್ರೋತ್ಸವಕ್ಕೆ (Cannes Film Festival) ಅವರು ಅತಿಥಿಯಾಗಿ ತೆರೆಳಿದ್ದಾರೆ. ರೆಡ್​ ಕಾರ್ಪೆಟ್ (Red Carpet) ಮೇಲೆ ಹೆಜ್ಜೆ ಹಾಕಲು ಅವರು ಸೂಕ್ತ ತಯಾರಿ ಮಾಡಿಕೊಂಡು ಭಾರತದಿಂದ ಹೊರಟರು. ಆದರೆ ಫ್ರಾನ್ಸ್​ಗೆ ಹೋಗಿ ನೋಡಿದಾಗ ಅವರಿಗೆ ಆತಂಕ ಕಾದಿತ್ತು. ಪೂಜಾ ಹೆಗ್ಡೆ (Pooja Hegde) ಅವರು ಎಲ್ಲ ಬಟ್ಟೆಗಳು, ಮೇಕಪ್​ ಸಾಮಾಗ್ರಿಗಳು ಕಾಣೆ ಆಗಿದ್ದವು. ಆ ಸಂದರ್ಭದಲ್ಲಿ ಅವರ ಇಡೀ ತಂಡ ಗಾಬರಿಗೆ ಒಳಗಾಗಿತ್ತು.

ಇದೇ ಮೊದಲ ಬಾರಿಗೆ ಪೂಜಾ ಹೆಗ್ಡೆ ಅವರು ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗವಹಿಸಿದ್ದಾರೆ. ಚೊಚ್ಚಲ ಅನುಭವದ ಬಗ್ಗೆ ಯಾವಾಗಲೂ ಎಗ್ಸೈಟ್​ಮೆಂಟ್​ ಇರುತ್ತದೆ. ಆದರೆ ಈ ಕಹಿ ಅನುಭವದಿಂದಾಗಿ ಪೂಜಾ ಹೆಗ್ಡೆಗೆ ಗಾಬರಿ ಆಗಿತ್ತು. ಬಟ್ಟೆ ಮತ್ತು ಮೇಕಪ್​ ಪರಿಕರಗಳನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ ಅವರ ಹೇರ್​ ಸ್ಟೈಲಿಸ್ಟ್​ ಒಬ್ಬರಿಗೆ ಫುಡ್​ ಪಾಯಿಸನ್​ ಆಗಿ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಬಟ್ಟೆಬರೆ ತುಂಬಿಕೊಂಡು ಬಂದಿದ್ದ ಬ್ಯಾಗ್​ ಚೆಕ್​-ಇನ್​ ಸಮಯದಲ್ಲಿ ಭಾರತದಲ್ಲೇ ಉಳಿದುಕೊಂಡಿತು. ಹೀಗೆ ಬ್ಯಾಕ್​ ಟು ಬ್ಯಾಕ್​ ವಿಘ್ನಗಳು ಅವರನ್ನು ಬಾಧಿಸಿದವು.

ಏನೋ ಪುಣ್ಯಕ್ಕೆ ಪೂಜಾ ಹೆಗ್ಡೆ ಅವರು ತಮ್ಮ ಹ್ಯಾಂಡ್​ ಬ್ಯಾಗ್​ನಲ್ಲಿ ಕೆಲವು ಆಭರಣಗಳನ್ನು ಇಟ್ಟುಕೊಂಡಿದ್ದರು. ಅದಕ್ಕೆ ಒಪ್ಪುವಂತಹ ಬಟ್ಟೆಯನ್ನು ಕೂಡಲೇ ಪಡೆದುಕೊಳ್ಳಲಾಯಿತು. ಒಟ್ಟಾರೆ ಟೆನ್ಷನ್​ಗೆ ಆ ದಿನವಿಡೀ ಪೂಜಾ ಹೆಗ್ಡೆ ಅವರು ಊಟ, ತಿಂಡಿ ಏನನ್ನೂ ಮಾಡಲಿಲ್ಲ. ಕಾಸ್ಟ್ಯೂಮ್​ ಮತ್ತು ಮೇಕಪ್​ಗೆ ಹೇಗೋ ವ್ಯವಸ್ಥೆ ಮಾಡಿಕೊಂಡು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ ನಂತರವೇ ಅವರು ಮತ್ತು ಅವರ ಇಡೀ ತಂಡ ನಿಟ್ಟುಸಿರು ಬಿಟ್ಟಿದ್ದು. ಇಷ್ಟೆಲ್ಲ ಆದರೂ ಕೂಡ ಪೂಜಾ ಹೆಗ್ಡೆ ಅವರು ನೂರಾರು ಕ್ಯಾಮೆರಾಗಳ ಎದುರಿನಲ್ಲಿ ಕೂಲ್​ ಆಗಿ ಕಾಣಿಸುತ್ತಿದ್ದರು ಎಂಬುದು ಗಮನಿಸಬೇಕಾದ ವಿಚಾರ.

ಇದನ್ನೂ ಓದಿ

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿರುವ ಪೂಜಾ ಹೆಗ್ಡೆ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಒಂದು ಕಾಲದಲ್ಲಿ ಬ್ಯಾಕ್​ ಟು ಬ್ಯಾಕ್​ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದ ಅವರ ಬದುಕಿನಲ್ಲಿ ಈಗ ಯಾಕೋ ಕೊಂಚ ಅದೃಷ್ಟ ಕೈಕೊಟ್ಟಿದೆ. ಅವರು ನಟಿಸಿದ ‘ರಾಧೆ ಶ್ಯಾಮ್​’, ‘ಬೀಸ್ಟ್​’ ಮತ್ತು ‘ಆಚಾರ್ಯ’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಿಲ್ಲ. ಆದರೂ ಕೂಡ ಪೂಜಾ ಹೆಗ್ಡೆ ಅವರ ಡಿಮ್ಯಾಂಡ್​ ಕಮ್ಮಿ ಆಗಿಲ್ಲ. ಸಲ್ಮಾನ್​ ಖಾನ್​ ನಟನೆಯ ‘ಕಭಿ ಈದ್​ ಕಭಿ ದಿವಾಲಿ’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದ ಶೂಟಿಂಗ್​ ಆರಂಭ ಆಗಿತ್ತು. ಅದರ ನಡುವೆ ಬ್ರೇಕ್​ ಪಡೆದುಕೊಂಡು ಕಾನ್​ ಚಿತ್ರೋತ್ಸವದ ಸಲುವಾಗಿ ಪೂಜಾ ಹೆಗ್ಡೆ ಫ್ರಾನ್ಸ್​ಗೆ ತೆರಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada