ರೇಣುಕಾ ಸ್ವಾಮಿ-ದರ್ಶನ್ ಪ್ರಕರಣ: ಅಂತಿಮ ಹಂತ ತಲುಪಿದ ತನಿಖೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಮಾತನಾಡಿದ್ದಾರೆ. ಎಷ್ಟು ಸಾಕ್ಷ್ಯ ಕಲೆ ಹಾಕಲಾಗಿದೆ ಅವುಗಳಲ್ಲಿ ಎಷ್ಟು ಸಾಕ್ಷ್ಯಗಳು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಮರಳಿ ಬಂದಿವೆ? ಇನ್ನಿತರೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ರೇಣುಕಾ ಸ್ವಾಮಿ-ದರ್ಶನ್ ಪ್ರಕರಣ: ಅಂತಿಮ ಹಂತ ತಲುಪಿದ ತನಿಖೆ
Follow us
|

Updated on: Aug 16, 2024 | 1:54 PM

ರೇಣುಕಾ ಸ್ವಾಮಿ ಕೊಲೆ ನಡೆದು ನಟ ದರ್ಶನ್, ಪವಿತ್ರಾ ಗೌಡ ಹಾಗೂ ಸಂಗಡಿಗರ ಬಂಧನವಾಗಿ ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ. ದರ್ಶನ್ ಹಾಗೂ ಸಂಗಡಿಗರಿಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಆಗುತ್ತಲೇ ಸಾಗುತ್ತಿದೆ. ಪೊಲೀಸರು ಸಹ ತನಿಖೆಯನ್ನು ಮಾಡುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಪೊಲೀಸರು ಚಾರ್ಜ್ ಶೀಟ್ ಯಾವಾಗ ಸಲ್ಲಿಸುತ್ತಾರೆ? ತನಿಖೆ ಈಗ ಯಾವ ಹಂತದಲ್ಲಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಯಾನಂದ, ‘ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟವನ್ನು ತಲುಪುತ್ತಿದೆ. ಅನೇಕ ಮೌಖಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಈಗಾಗಲೇ ತನಿಖಾ ತಂಡ ಸಂಗ್ರಹಿಸಿದೆ. ನಾವು ಸಂಗ್ರಹಿಸಿರುವ ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ಜೊತೆಗೆ ಹೈದರಾಬಾದ್​ನ ಪ್ರಯೋಗಾಲಯಕ್ಕೂ ಸಹ ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳಿಸಿ ವರದಿ ಪಡೆಯಲಾಗುತ್ತಿದೆ’ ಎಂದಿದ್ದಾರೆ.

‘ಹೀಗೆ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಕಳಿಸಲಾಗಿದ್ದ ಕೆಲವು ವರದಿಗಳು ಈಗಾಗಲೇ ನಮ್ಮ ಕೈಸೇರಿದ್ದು, ಇನ್ನೂ ಕೆಲವು ವರದಿಗಳು ನಮ್ಮ ಕೈ ಸೇರಬೇಕಿದೆ. ಆ ವರದಿಗಳು ಕೈ ಸೇರಿದ ನಂತರ. ತನಿಖೆಯ ಮುಂದಿನ ಭಾಗವಾಗಿ ಕೆಲವೊಂದು ಸ್ಪಷ್ಟೀಕರಣವನ್ನು ಕೇಳುವ ಅವಶ್ಯಕತೆ ಇದ್ದರೆ ಸ್ಪಷ್ಟೀಕರಣಗಳನ್ನು ಕೇಳಿ ಆ ನಂತರದಲ್ಲಿ ನಾವು ಆದಷ್ಟು ಬೇಗ ತನಿಖೆಯ ಅಂತಿಮ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ’ ಎಂದಿದ್ದಾರೆ ದಯಾನಂದ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಮತ್ತು ಸಂಗಡಿಗರಿಗೆ ನ್ಯಾಯಾಂಗ ಬಂಧನ ವಿಸ್ತರಣೆ

‘ಎಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದೇವೆ ಎಂಬುದರ ಸಂಖ್ಯೆ ನಮ್ಮ ಬಳಿ ಇಲ್ಲ. ಆದರೆ ನಾವು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದ ವರದಿಗಳಲ್ಲಿ 70% ಈಗಾಗಲೇ ಬಂದಿವೆ. ಇನ್ನು ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಎಲೆಕ್ಟ್ರಿಕ್ ಡಿವೈಸ್​ (ಮೊಬೈಲ್) ಗಳ ವರದಿಗಳು ಇನ್ನೂ ಬಂದಿಲ್ಲ ನಾವು ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ.

ರೇಣುಕಾ ಸ್ವಾಮಿಯ ಕೊಲೆ ಜೂನ್ 09 ರಂದು ನಡೆದಿತ್ತು. ಜೂನ್ 10 ರಂದು ರೇಣುಕಾ ಸ್ವಾಮಿಯ ಮೃತದೇಹ ಪತ್ತೆಯಾಗಿತ್ತು. ಅದೇ ದಿನ ಮೂವರು ಅನಾಮಿಕರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಠಾಣೆಯಲ್ಲಿ ಸರೆಂಡರ್ ಆಗಿದ್ದರು. ಆದರೆ ಅನುಮಾನ ಬಂದ ಪೊಲೀಸರು ಅವರ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಭಾಗಿಯಾಗಿರುವುದು ಗೊತ್ತಾಗಿತ್ತು. ಜೂನ್ 11 ರಂದು ಬೆಳಿಗ್ಗೆ ಮೈಸೂರಿನಲ್ಲಿ ನಟ ದರ್ಶನ್ ಅನ್ನು, ಬೆಂಗಳೂರಿನಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್​ರ ಕೆಲವು ಸಹಚರರನ್ನು ಬಂಧಿಸಲಾಯ್ತು. ಇದೀಗ ಆರೋಪಿಗಳೆಲ್ಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೂವರು ಆರೋಪಿಗಳನ್ನು ಮಾತ್ರ ತುಮಕೂರು ಜೈಲಿನಲ್ಲಿ ಇರಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ