Bhagavanth Kesari Teaser: ಈ ಬಾರಿ ಬಾಲಯ್ಯ ಮಾಡೋದು ನಿಮ್ಮ ಕಲ್ಪನೆಗೂ ಮೀರಿದ್ದು; ‘ಭಗವಂತ್​ ಕೇಸರಿ’ ಅಬ್ಬರ ಹೇಗಿದೆ ನೋಡಿ

Nandamuri Balakrishna: ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳು ಹೇಗಿರುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಈ ಬಾರಿ ‘ಭಗವಂತ್​ ಕೇಸರಿ’ ಸಿನಿಮಾದಲ್ಲಿ ಅಂತಹ ಅಂಶಗಳು ಇನ್ನೂ ಹೆಚ್ಚಾಗಿರಲಿವೆ ಎನಿಸುತ್ತದೆ.

Bhagavanth Kesari Teaser: ಈ ಬಾರಿ ಬಾಲಯ್ಯ ಮಾಡೋದು ನಿಮ್ಮ ಕಲ್ಪನೆಗೂ ಮೀರಿದ್ದು; ‘ಭಗವಂತ್​ ಕೇಸರಿ’ ಅಬ್ಬರ ಹೇಗಿದೆ ನೋಡಿ
ನಂದಮೂರಿ ಬಾಲಕೃಷ್ಣ

Updated on: Jun 10, 2023 | 11:19 AM

ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಅಭಿಮಾನಿಗಳು ಇಂದು (ಜೂನ್​ 10) ಸಂಭ್ರಮಿಸುತ್ತಿದ್ದಾರೆ. ಆ ಸಂಭ್ರಮಕ್ಕೆ ಎರಡು ಕಾರಣಗಳಿವೆ. ಇಂದು ಬಾಲಯ್ಯ ಅವರ ಜನ್ಮದಿನ ಎಂಬುದು ಒಂದು ಕಾರಣ. ಅವರು ನಟಿಸುತ್ತಿರುವ ‘ಭಗವಂತ್​ ಕೇಸರಿ’ ಚಿತ್ರದ ಟೀಸರ್​ (Bhagavanth Kesari Teaser) ಬಿಡುಗಡೆ ಆಗಿದೆ ಎಂಬುದು ಎರಡನೇ ಕಾರಣ. ನಂದಮೂರಿ ಬಾಲಕೃಷ್ಣ ಅಭಿನಯದ ಈ ಹೊಸ ಸಿನಿಮಾ ಟೀಸರ್​ ಬಿಡುಗಡೆ ಮಾಡಲಾಗುವುದು ಎಂದು ಮೊದಲೇ ಘೋಷಿಸಲಾಗಿತ್ತು. ಕೊಟ್ಟ ಮಾತಿನಂತೆಯೇ ಚಿತ್ರತಂಡ ಬೆಳಗ್ಗೆ 10.19ಕ್ಕೆ ಈ ಟೀಸರ್​ ಹಂಚಿಕೊಂಡಿದೆ. ಇದರಲ್ಲಿ ಬಾಲಯ್ಯ ಅವರು ಮಾಸ್​ ಆಗಿ ಅಬ್ಬರಿಸಿದ್ದಾರೆ. ಅಚ್ಚರಿ ಎಂದರೆ, ಈ ಬಾರಿ ಅವರ ಆರ್ಭಟ ನಿಮ್ಮ ಕಲ್ಪನೆಯನ್ನೂ ಮೀರಿದ್ದಾಗಿರಲಿದೆ ಎಂದು ‘ಭಗವಂತ್​ ಕೇಸರಿ’ (Bhagavanth Kesari) ಸಿನಿಮಾದ ಟೀಸರ್​ನಲ್ಲಿ ಹೇಳಲಾಗಿದೆ.

ನಂದಮೂರಿ ಬಾಲಕೃಷ್ಣ ಅವರ ಸಿನಿಮಾಗಳು ಹೇಗಿರುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಮಾಸ್​ ಶೈಲಿಯಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗಾಗಿ ಅವರನ್ನು ‘ಗಾಡ್​ ಆಫ್​ ಮಾಸಸ್​’ ಎಂದು ಕರೆಯಲಾಗುತ್ತಿದೆ. ಬಾಲಯ್ಯ ನಟಿಸುವ ಸಿನಿಮಾಗಳಲ್ಲಿ ಲಾಜಿಕ್​ಗೆ ಜಾಗ ಇರುವುದಿಲ್ಲ. ಆ್ಯಕ್ಷನ್​ ದೃಶ್ಯಗಳಲ್ಲಂತೂ ಬರೀ ಮ್ಯಾಜಿಕ್​. ಅದನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ ಕೂಡ. ಈ ಬಾರಿ ‘ಭಗವಂತ್​ ಕೇಸರಿ’ ಸಿನಿಮಾದಲ್ಲಿ ಇಂಥ ಮ್ಯಾಜಿಕ್​ಗಳು ಇನ್ನೂ ಹೆಚ್ಚಾಗಿರಲಿವೆ ಎನಿಸುತ್ತದೆ. ಹಾಗಾಗಿ ‘ಇದು ನಿಮ್ಮ ಕಲ್ಪನೆಗೂ ಮೀರಿದ್ದು’ ಎಂಬ ಸಾಲು ಈ ಟೀಸರ್​ನಲ್ಲಿ ಹೈಲೈಟ್​ ಆಗಿದೆ.

ಬಾಲಯ್ಯ ಅವರು ‘ಭಗವಂತ್​ ಕೇಸರಿ’ ಟೀಸರ್​ನಲ್ಲಿ ಎಂದಿನಂತೆ ಮಾಸ್​ ಆಗಿ ಡೈಲಾಗ್​ ಹೊಡೆದಿದ್ದಾರೆ. ಆಯುಧ ಹಿಡಿದು ಅಬ್ಬರಿಸಿದ್ದಾರೆ. ವಿಲನ್​ಗಳ ಮೂಳೆ ಮುರಿಯುತ್ತ ಪರಾಕ್ರಮ ಮೆರೆದಿದ್ದಾರೆ. ಮೇಕಿಂಗ್​ ಗುಣಮಟ್ಟ ಗಮನ ಸೆಳೆಯುವಂತಿದೆ. ಥಮನ್ ಅವರ ಹಿನ್ನೆಲೆ ಸಂಗೀತ ಆರ್ಭಟಿಸಿದೆ. ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅರ್ಜುನ್​ ರಾಮ್​​ಪಾಲ್​ ಅವರು ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಭಗವಂತ್​ ಕೇಸರಿ’ ಟೀಸರ್​ ಟ್ರೆಂಡ್​ ಆಗುತ್ತಿದೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್​ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳಿಗೆ ಇಷ್ಟ ಆಗುವಂತಹ ಎಲ್ಲ ಅಂಶಗಳನ್ನು ‘ಭಗವಂತ್​ ಕೇಸರಿ’ ಟೀಸರ್​ನಲ್ಲಿ ತೋರಿಸಲಾಗಿದೆ. ‘ಐ ಡೋಂಟ್​ ಕೇರ್​’ ಎಂಬ ಟ್ಯಾಗ್​ ಲೈನ್​ ಗಮನ ಸೆಳೆಯುತ್ತಿದೆ. ಟೀಸರ್​ ಬಿಡುಗಡೆ ಆದ ಬಳಿಕ ‘ಭಗವಂತ್​ ಕೇಸರಿ’ ಚಿತ್ರದ ಹೈಪ್​ ಹೆಚ್ಚಾಗಿದೆ. ಈ ಟೀಸರ್​ ಅನ್ನು 108 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗಿದೆ.

ಇದನ್ನೂ ಓದಿ: ‘NBK108’ ಸೆಟ್​ನಲ್ಲಿ ಕನ್ನಡತಿ ಶ್ರೀಲೀಲಾ; ಕಣ್​ ಹೊಡೆದು ಬಾಲಯ್ಯನ ಚಿತ್ರಕ್ಕೆ ಎಂಟ್ರಿ

ಈ ವರ್ಷ ನಂದಮೂರಿ ಬಾಲಕೃಷ್ಣ ಅವರು ನಟಿಸಿದ ‘ವೀರ ಸಿಂಹ ರೆಡ್ಡಿ’ ಸಿನಿಮಾ ಜನವರಿ 12ರಂದು ತೆರೆಕಂಡಿತ್ತು. ಫ್ಯಾಮಿಲಿ ಕಥಾಹಂದರ ಹೊಂದಿದ್ದ ಆ ಮಾಸ್​ ಸಿನಿಮಾಗೆ ಜನರ ಮೆಚ್ಚುಗೆ ಸಿಕ್ಕಿತು. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸಿದ್ದರು. ಹಾಡುಗಳು ಸೂಪರ್​ ಹಿಟ್ ಆದವು. ಈ ಯಶಸ್ಸಿನಿಂದ ಬಾಲಯ್ಯ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಿತು. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಜೋರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.