Laal Singh Chaddha: ದೇಶಾದ್ಯಂತ 100ಕ್ಕೂ ಅಧಿಕ ಸ್ಥಳಗಳಲ್ಲಿ ಚಿತ್ರೀಕರಣ; ಆಮಿರ್ ಖಾನ್ ಚಿತ್ರದ ಕುತೂಹಲಕರ ಮಾಹಿತಿ ಇಲ್ಲಿದೆ
Aamir Khan | Kareena Kapoor: ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರಕ್ಕೆ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಆಮಿರ್ ಸ್ವತಃ ಹಣಹೂಡಿದ್ದು, ಬಹಳ ಆಸ್ಥೆಯಿಂದ ನಿರ್ಮಿಸುತ್ತಿದ್ದಾರೆ. ಚಿತ್ರದ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ.
ಬಾಲಿವುಡ್ ನಟ ಆಮಿರ್ ಖಾನ್ (Aamir Khan) ತಮ್ಮ ವೃತ್ತಿ ಜೀವನದುದ್ದಕ್ಕೂ ವೈಶಿಷ್ಟ್ಯಪೂರ್ಣ ಚಿತ್ರಗಳನ್ನು ಮಾಡುತ್ತಾ ಬಂದವರು. ಜೊತೆಗೆ ಚಿತ್ರಗಳಿಗೆ ಏನು ಬೇಕೋ ಅದನ್ನು ನೀಡಲು ಅವರು ಅವರು ಹಿಂದೆಮುಂದೆ ನೋಡದೇ ಎಂತಹ ರಿಸ್ಕ್ಗೂ ಕೈಹಾಕುತ್ತಾರೆ. ಅವರ ಇತ್ತೀಚಿನ ‘ದಂಗಲ್’ (Dangal) ಇದಕ್ಕೆ ತಾಜಾ ಉದಾಹರಣೆ. ಚಿತ್ರದಲ್ಲಿ ಪಾತ್ರ ಬಯಸಿದಂತೆ ತಮ್ಮ ದೇಹವನ್ನು ಹುರಿಗೊಳಿಸಿಕೊಂಡು, ಅದಕ್ಕೆ ತಕ್ಕಂತೆ ಶೈಲಿಯನ್ನೂ ಬದಲಿಸಿಕೊಂಡು ಪಾತ್ರವನ್ನು ಜೀವಿಸುವ ಸಿದ್ಧಿ ಆಮಿರ್ಗೆ ಒಲಿದಿದೆ. ಆದ್ದರಿಂದಲೇ ಕೇವಲ ಭಾರತವಲ್ಲದೇ ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಇದೀಗ ಅವರ ನೂತನ ಚಿತ್ರ ‘ಲಾಲ್ ಸಿಂಗ್ ಛಡ್ಡಾ’ಗೆ (Laal Singh Chaddha) ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಮಿರ್ ವೃತ್ತಿ ಜೀವನದ ಮತ್ತೊಂದು ಮಹೋನ್ನತ ಚಿತ್ರ ಇದಾಗಿರಲಿದೆ ಎಂದು ಈಗಾಗಲೇ ಬಾಲಿವುಡ್ನಲ್ಲಿ ಮಾತುಕತೆಗಳು ಕೇಳಿಬರುತ್ತಿವೆ. ಇದರ ಹೊರತಾಗಿಯೂ ಈ ಚಿತ್ರಕ್ಕೆ ಆಮಿರ್ ವ್ಯಯಿಸಿದ ಸಮಯ ಹಾಗೂ ಚಿತ್ರದ ಕುರಿತಾದ ಬದ್ಧತೆಗೆ ಎಲ್ಲರೂ ತಲೆದೂಗಿದ್ದಾರೆ.
ಹೌದು, ಆಮಿರ್ ‘ಲಾಲ್ ಸಿಂಗ್ ಛಡ್ಡಾ’ಕ್ಕಾಗಿ ಬರೋಬ್ಬರಿ 200ಕ್ಕೂ ಅಧಿಕ ದಿನಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ‘ಲಗಾನ್’ ಚಿತ್ರದ ನಂತರ ಆಮಿರ್ ಒಂದು ಚಿತ್ರದ ಚಿತ್ರೀಕರಣಕ್ಕಾಗಿಯೇ ಇಷ್ಟೊಂದು ಸಮಯ ವ್ಯಯಿಸಿರುವುದು ಇದೇ ಮೊದಲು. ಅಲ್ಲದೇ ಈ 200 ದಿನಗಳ ಚಿತ್ರೀಕರಣದ ಅವಧಿಯಲ್ಲಿ ಚಿತ್ರತಂಡ ಭಾರತದಾದ್ಯಂತ ಸುಮಾರು 100ಕ್ಕೂ ಅಧಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ ದಾಖಲೆ ಬರೆದಿದೆ.
‘ಲಾಲ್ ಸಿಂಗ್ ಛಡ್ಡಾ’ ಇಷ್ಟು ದೊಡ್ಡ ಕ್ಯಾನ್ವಾಸ್ನಲ್ಲಿ ತಯಾರಾಗುತ್ತಿರುವುದಕ್ಕೂ ಕಾರಣವಿದೆ. ಈ ಚಿತ್ರ ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್. ಲಾಲ್ ಸಿಂಗ್ ಛಡ್ಡಾ ಭಾರತದ ಇತಿಹಾಸದ ಪ್ರಮುಖ ಘಟನೆಗಳ ಭಾಗವಾಗಿರುತ್ತಾನೆ. ವಿವಿಧ ಕಾಲಘಟ್ಟದಲ್ಲಿ ಕತೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಖ್ಯಾತ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಬಹುದೊಡ್ಡ ಮಟ್ಟದಲ್ಲಿ ಮೂಡಿಬಂದಿದೆ. ಈ ಚಿತ್ರಕ್ಕೆ ಸ್ವತಃ ಆಮಿರ್ ಖಾನ್ ಬಂಡವಾಳ ಹೂಡಿದ್ದಾರೆ. ಅಮೀರ್ ಜತೆ ಅವರ ಮಾಜಿ ಪತ್ನಿ ಕಿರಣ್ ರಾವ್ ಕೈಜೋಡಿಸಿದ್ದಾರೆ.
ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಚಿತ್ರಕತೆ ಬರೆದಿರುವುದು ಅತುಲ್ ಕುಲಕರ್ಣಿ ಹಾಗೂ ಎರಿಕ್ ರೋಥ್. ಆಮಿರ್ ಖಾನ್ ಜತೆಯಲ್ಲಿ ಕರೀನಾ ಕಪೂರ್ ಬಣ್ಣಹಚ್ಚಿದ್ದಾರೆ. ಚಿತ್ರ 2022ರ ಏಪ್ರಿಲ್ 14ರಂದು ತೆರೆಗೆ ಬರಲಿದೆ. ಅದೇ ದಿನ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ‘ಕೆಜಿಎಫ್ 2’ ಕೂಡ ತೆರೆಕಾಣಲಿದೆ. ಈ ಎರಡೂ ಚಿತ್ರಗಳಿಗೂ ಯಾವುದೇ ಸ್ಪರ್ಧೆ ಇಲ್ಲ ಎಂದು ಆಮಿರ್ ಖಾನ್ ಸ್ಪಷ್ಟನೆ ನಿಡಿದ್ದಾರೆ.
ಇದನ್ನೂ ಓದಿ:
ಯಶ್ ನಡೆದುಕೊಂಡ ರೀತಿ ನನಗೆ ಇಷ್ಟವಾಯಿತು, ನಾನು ಅವರ ಬಳಿ ಕ್ಷಮೆ ಕೇಳಿದೆ; ಆಮಿರ್ ಖಾನ್
ಕರೀನಾ ಕಪೂರ್ಗೆ ಕೊರೋನಾ ಸೋಂಕು: ವಿಚಾರಣೆಗೆ ಕುಟುಂಬ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ ಬಿಎಂಸಿ