
ಬಾಲಿವುಡ್‌ನ ಹಿರಿಯ ನಟ ಗೋವಿಂದ (Govinda) ಅವರು ಸರಿಸುಮಾರು 7 ವರ್ಷಗಳ ಸುದೀರ್ಘ ಬಿಡುವಿನ ನಂತರ ಮತ್ತೆ ಬೆಳ್ಳಿಪರದೆಗೆ ಮರಳಲು ಸಜ್ಜಾಗಿದ್ದಾರೆ. ತಮ್ಮ ಮುಂಬರುವ ಹೊಸ ಚಿತ್ರ ‘ರೂಪಾ’ (Roopa) ಮೂಲಕ ಅವರು ಚಿತ್ರರಂಗಕ್ಕೆ ಗ್ರ್ಯಾಂಡ್ ಕಮ್‌ಬ್ಯಾಕ್ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಚಿತ್ರದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಈ ಚಿತ್ರದಲ್ಲಿ ಗೋವಿಂದ ಅವರಿಗೆ ಜೋಡಿಯಾಗಿ ಹೊಸ ನಟಿ ರಾಣಿ ಸ್ವರ್ಣಕಾರ್ ನಟಿಸಲಿದ್ದಾರೆ.
ಕೇವಲ ನಾಯಕನಾಗಿ ನಟಿಸುವುದು ಮಾತ್ರವಲ್ಲದೆ, ಸ್ವತಃ ಗೋವಿಂದ ಅವರೇ ‘ರೂಪಾ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ದೀರ್ಘ ವಿರಾಮದ ನಂತರ ಚಿತ್ರರಂಗಕ್ಕೆ ಮರಳುತ್ತಿರುವ ಕುರಿತು ಮಾತನಾಡಿದ ಗೋವಿಂದ, ‘ನನ್ನ ಸಿನಿ ಜರ್ನಿ ಮುಗಿದೇ ಹೋಯಿತು ಎಂದು ಜನರು ಹಲವು ಬಾರಿ ಮಾತನಾಡಿಕೊಂಡಿದ್ದರು. ಇನ್ಮುಂದೆ ಇವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದೂ ಹೇಳುತ್ತಿದ್ದರು. ಆದರೆ ನಾನು ಪ್ರತಿ ಬಾರಿಯೂ ಮತ್ತೆ ಹೊಸದಾಗಿ ಆರಂಭಿಸುತ್ತೇನೆ’ ಎಂದು ಗೋವಿಂದ ಹೇಳಿದ್ದಾರೆ.
‘ನಾನು ಅಂದುಕೊಂಡಿರುವುದನ್ನು ‘ರೂಪಾ’ ಸಿನಿಮಾ ಸಾಧಿಸಲಿದೆ ಮತ್ತು ತನ್ನದೇ ಆದ ಮ್ಯಾಜಿಕ್ ಸೃಷ್ಟಿಸಲಿದೆ ಎಂಬ ನಂಬಿಕೆ ನನಗಿದೆ. ಈ ಸಿನಿಮಾ ವಿಶೇಷವಾಗಿ ಯುವ ಪೀಳಿಗೆಯನ್ನು ಪ್ರೇರೇಪಿಸಲಿದೆ. ಯುವಕರು ಇದನ್ನು ಥಿಯೇಟರ್‌ಗಳಲ್ಲಿ ನೋಡಿದಾಗ, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಅವರಿಗೆ ಸ್ಫೂರ್ತಿ ನೀಡುತ್ತದೆ’ ಎಂದು ಆಶಯವನ್ನು ಗೋವಿಂದ ವ್ಯಕ್ತಪಡಿಸಿದರು.
90ರ ದಶಕದಲ್ಲಿ ತಮ್ಮ ಅದ್ಭುತ ಕಾಮಿಡಿ ಟೈಮಿಂಗ್, ಅದ್ಭುತ ನೃತ್ಯ ಮತ್ತು ಕೌಟುಂಬಿಕ ಚಿತ್ರಗಳ ಮೂಲಕ ಬಾಲಿವುಡ್‌ನ ಅಲ್ಟಿಮೇಟ್ ಎಂಟರ್‌ಟೈನರ್ ಆಗಿ ಗೋವಿಂದ ಮಿಂಚಿದ್ದರು. ಅವರು ಕೊನೆಯದಾಗಿ 2019ರಲ್ಲಿ ತೆರೆಕಂಡ ‘ರಂಗೀಲಾ ರಾಜ’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸಿರಲಿಲ್ಲ. ಇದೀಗ ‘ರೂಪಾ’ ಚಿತ್ರದ ಮೂಲಕ ಗೋವಿಂದ ಅವರು ಭರ್ಜರಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ಬಾಲಿವುಡ್ಗೆ ಮತ್ತೊಂದು ಶಾಕ್; ಕುಸಿದುಬಿದ್ದು ಆಸ್ಪತ್ರೆ ಸೇರಿದ ನಟ ಗೋವಿಂದ
ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪಾರ ನಂಬಿಕೆ ಹೊಂದಿರುವ ಗೋವಿಂದ ಅವರು ತಮ್ಮ ಜೀವನದಲ್ಲಿ 14ರ ಸಂಖ್ಯೆ ಎಷ್ಟು ಅದೃಷ್ಟ ತಂದಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ‘ನನಗೆ 14 ವರ್ಷ ವಯಸ್ಸಾಗಿದ್ದಾಗಿನಿಂದಲೇ ನಾನು ಸಂಖ್ಯಾಶಾಸ್ತ್ರವನ್ನು ನಂಬಲು ಶುರು ಮಾಡಿದೆ. ದೇವರ ಕೃಪೆಯಿಂದ ನಾನು ಒಂದೇ ವಾರದಲ್ಲಿ 14 ಸಿನಿಮಾಗಳಿಗೆ ಸಹಿ ಮಾಡಿದ್ದೆ, ಅದು ನನ್ನನ್ನು 14 ವರ್ಷಗಳ ಕಾಲ ಸೂಪರ್ ಸ್ಟಾರ್ ಆಗಿ ಉಳಿಸಿತು. ಆ ನಂತರ 14ನೇ ಲೋಕಸಭೆಯ ಸಂಸದನೂ ಆದೆ. ತದನಂತರ ಮತ್ತೆ ಚಿತ್ರರಂಗಕ್ಕೆ ಮರಳುವ ಮುನ್ನ 14 ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಬೇಕಾಯಿತು. ಈ ಬಾರಿ ನಾನು ಮತ್ತಷ್ಟು ಕಾಯಲು ಬಯಸಲಿಲ್ಲ. ಹಾಗಾಗಿ ಮತ್ತೆ ಹೊಸದಾಗಿ ಆರಂಭಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.