ಹಳ್ಳಿ ಜನರಿಗೆ ನೂರಾರು ಕೋಟಿ ರೂಪಾಯಿ ವಂಚನೆ; ನಟ ಶ್ರೇಯಸ್ ತಲ್ಪಡೆ ಮೇಲೂ ಆರೋಪ

|

Updated on: Mar 28, 2025 | 10:22 PM

ಕಡಿಮೆ ಸಮಯದಲ್ಲಿ ಲಾಭ ಮಾಡಿಕೊಡುವ ಭರವಸೆ ನೀಡಿ ಹಳ್ಳಿ ಜನರಿಂದ ನೂರಾರು ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಬಳಿಕ ವಂಚನೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಲವರ ಮೇಲೆ ದೂರು ದಾಖಲಾಗಿದ್ದು, ನಟ ಶ್ರೇಯಸ್ ತಲ್ಪಡೆ ಅವರ ಹೆಸರನ್ನೂ ಎಳೆದುತರಲಾಗಿದೆ. ಈ ಬಗ್ಗೆ ನಟನ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಹಳ್ಳಿ ಜನರಿಗೆ ನೂರಾರು ಕೋಟಿ ರೂಪಾಯಿ ವಂಚನೆ; ನಟ ಶ್ರೇಯಸ್ ತಲ್ಪಡೆ ಮೇಲೂ ಆರೋಪ
Shreyas Talpade
Follow us on

ಹಿಂದಿ ಮತ್ತು ಮರಾಠಿ ಚಿತ್ರರಂಗದ ಖ್ಯಾತ ನಟ ಶ್ರೇಯಸ್ ತಲ್ಪಡೆ (Shreyas Talpade) ಅವರಿಗೆ ಹೊಸ ತಲೆನೋವು ಶುರುವಾಗಿದೆ. ಅವರ ಮೇಲೆ ನೂರಾರು ಕೋಟಿ ರೂಪಾಯಿ ವಂಚನೆ ಆರೋಪ ಎದುರಾಗಿದೆ. ಅಂದಹಾಗೆ, ಇದು ಚಿತ್ರರಂಗಕ್ಕೆ ಸಂಬಂಧಿಸಿದ ಹಗರಣ ಅಲ್ಲ. ಯಾವುದೇ ನಿರ್ಮಾಪಕರಿಗೆ ಮೋಸ ಮಾಡಿದ ಪ್ರಕರಣ ಕೂಡ ಅಲ್ಲ. ಬದಲಿಗೆ, ಮುಗ್ಧ ಹಳ್ಳಿ ಜನರಿಗೆ ಟೋಪಿ ಹಾಕಲಾಗಿದೆ. ಅನೇಕರ ಮೇಲೆ ದೂರು ದಾಖಲಾಗಿದೆ. ತುಂಬ ವ್ಯವಸ್ಥಿತವಾಗಿ ಹಳ್ಳಿ ಜನರಿಗೆ ಮೋಸ ಮಾಡಿದ ವಂಚಕರ ಜೊತೆ ಶ್ರೇಯಸ್ ತಲ್ಪಡೆ ನಂಟು ಹೊಂದಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿರುವ ಈ ಹಗರಣದ ಬಗ್ಗೆ ಇಲ್ಲಿದೆ ವಿವರ..

ಕೊ-ಆಪರೇಟಿವ್ ಸೊಸೈಟಿಯೊಂದು ಹಳ್ಳಿಯ ಮಂದಿಯನ್ನು ಯಾಮಾರಿಸಿದೆ. ಜನರಿಂದ ಹಣ ಪಡೆದು ಅದನ್ನು ಕಡಿಮೆ ಸಮಯದಲ್ಲಿ ಡಬಲ್ ಮಾಡಿಕೊಡುವ ಆಮಿಷವೊಡ್ಡಲಾಗಿದೆ. ಅದನ್ನು ನಂಬಿದ ಅನೇಕರು ತಮ್ಮ ಹಣವನ್ನು ಈ ಕೊ-ಆಪರೇಟಿವ್ ಸೊಸೈಟಿಗೆ ನೀಡಿದ್ದಾರೆ. ಜನರಿಂದ ನೂರಾರು ಕೋಟಿ ರೂಪಾಯಿ ಸಂಗ್ರಹ ಆದ ಬಳಿಕ ಕೊ-ಆಪರೇಟಿವ್ ಸೊಸೈಟಿ ಕಾಣೆ ಆಗಿದೆ!

ಕಳೆದ ಒಂದು ದಶಕದಿಂದ ಈ ಸ್ಕ್ಯಾಮ್ ನಡೆಯುತ್ತಿತ್ತು. ಮೋಸ ಬೆಳಕಿಗೆ ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಈ ವಂಚನೆ ಜಾಲದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ. ಜನರಿಂದ ಹಣ ಪಡೆದು ಮೋಸ ಮಾಡಿರುವ ಕೊ-ಆಪರೇಟಿವ್ ಸೊಸೈಟಿ ಜೊತೆ ನಟ ಶ್ರೇಯಸ್ ತಲ್ಪಡೆ ಅವರು ಸ್ನೇಹ ಸಂಬಂಧ ಹೊಂದಿದ್ದಾರೆ ಎಂಬ ಕಾರಣದಿಂದ ಅವರ ಮೇಲೂ ದೂರು ದಾಖಲಾಗಿದೆ ಎಂದು ವರದಿ ಆಗಿದೆ. ಅಲ್ಲದೇ ಇನ್ನೂ, 14 ಮಂದಿಯ ಮೇಲೆ ಕೇಸ್ ಬಿದ್ದಿದೆ.

ಇದನ್ನೂ ಓದಿ
ಗೋವಿಂದ ಜಾತಕದಲ್ಲಿ ಬರೆದಿದೆ ಎರಡನೇ ಮದುವೆ; ಆ ದಿನ ಹತ್ತಿರ ಬಂದೇ ಬಿಡ್ತಾ?
37 ವರ್ಷ ಸಂಸಾರ ಮಾಡಿ ಈಗ ವಿಚ್ಛೇದನ ಪಡೆಯಲು ಮುಂದಾದ ನಟ ಗೋವಿಂದ?
ಮೂಢನಂಬಿಕೆಯಿಂದ ಬಾಲಿವುಡ್​ನಲ್ಲಿ ಬೇಡಿಕೆ ಕಳೆದುಕೊಂಡ ನಟ ಗೋವಿಂದ?
10 ಹೊಲಿಗೆ ಹಾಕಲಾಗಿದೆ: ಗೋವಿಂದ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು

ಆದರೆ ನಟ ಶ್ರೇಯಸ್ ತಲ್ಪಡೆ ಅವರು ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರ ತಂಡದವರು ಸ್ಪಷ್ಟನೆ ನೀಡಿದ್ದಾರೆ. ‘ಶ್ರೇಯಸ್ ತಲ್ಪಡೆ ಅವರ ಮೇಲೆ ಕೇಳಿಬಂದ ಆರೋಪಗಳು ಆಧಾರರಹಿತವಾಗಿವೆ. ಬೇರೆ ಎಲ್ಲ ಸೆಲೆಬ್ರಿಟಿಗಳ ರೀತಿ ಶ್ರೇಯಸ್ ತಲ್ಪಡೆ ಅವರಿಗೂ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತದೆ. ಸಾಧ್ಯವಾದಾಗ ಅವರು ಅಂತಹ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಅದನ್ನು ಹೊರತುಪಡಿಸಿದರೆ ಅವರಿಗೆ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ: ಸೈಬರ್ ವಂಚನೆಗಾಗಿ ಬಡ ಜನರ ಬ್ಯಾಂಕ್​ ಖಾತೆ ಬಳಕೆ, ಇಬ್ಬರ ಬಂಧನ

‘ವಂಚನೆ ಪ್ರಕರಣದಲ್ಲಿ ಶ್ರೇಯಸ್ ತಲ್ಪಡೆ ಅವರ ಪಾಲ್ಗೊಳ್ಳುವಿಕೆ ಇಲ್ಲ. ಆಧಾರರಹಿತವಾದ ಗಾಸಿಪ್​ಗಳಿಂದ ಅವರ ಹೆಸರನ್ನು ಹೊರಗಿಡಿ. ಶ್ರೇಯಸ್ ತಲ್ಪಡೆ ಅವರು ಕಾನೂನು ಪಾಲಿಸುವಂತಹ ವ್ಯಕ್ತಿ’ ಎಂದು ಸೋಶಿಯಲ್ ಮೀಡಿಯಾ ಮೂಲಕ ಅವರ ತಂಡದವರು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.