‘ನನಗೆ ಹಲವು ಸಂಗಾತಿಗಳಿದ್ದಾರೆ’: ಮುಚ್ಚುಮರೆ ಇಲ್ಲದೇ ಎಲ್ಲವನ್ನೂ ಹೇಳಿದ ನಟಿ ಶಹನಾ ಗೋಸ್ವಾಮಿ

ಸೆಲೆಬ್ರಿಟಿಗಳ ಲವ್ ಲೈಫ್ ಬಹಳ ಭಿನ್ನವಾಗಿರುತ್ತದೆ. ಸಂಗಾತಿಗಳನ್ನು ಅವರು ಆಗಾಗ ಬದಲಾಯಿಸುತ್ತಾರೆ. ನಟಿ ಶಹನಾ ಗೋಸ್ವಾಮಿ ಅವರಿಗೆ ಏಕಕಾಲದಲ್ಲಿ ಹಲವು ಮಂದಿ ಸಂಗಾತಿಗಳು ಇದ್ದಾರೆ. ಈ ಬಗ್ಗೆ ಅವರು ನೇರವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಶಹನಾ ಗೋಸ್ವಾಮಿ ಅವರು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.

‘ನನಗೆ ಹಲವು ಸಂಗಾತಿಗಳಿದ್ದಾರೆ’: ಮುಚ್ಚುಮರೆ ಇಲ್ಲದೇ ಎಲ್ಲವನ್ನೂ ಹೇಳಿದ ನಟಿ ಶಹನಾ ಗೋಸ್ವಾಮಿ
Shahana Goswami

Updated on: May 27, 2026 | 9:03 PM

‘ರಾಕ್ ಆನ್’, ‘ಹೀರೋಯಿನ್’ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್ (Bollywood) ನಟಿ ಶಹನಾ ಗೋಸ್ವಾಮಿ (Shahana Goswami) ಪ್ರೀತಿ ಮತ್ತು ಸಂಬಂಧಗಳ ಕುರಿತಾದ ತಮ್ಮ ವಿಭಿನ್ನ ದೃಷ್ಟಿಕೋನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು, ತಾವು ಈಗ ಓಪನ್ ರಿಲೇಶನ್‌ಶಿಪ್​ನಲ್ಲಿ (Open Relationship) ಇರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಹಲವು ಸಂಗಾತಿಗಳು ಇದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಸಾಂಪ್ರದಾಯಿಕ ಸಂಬಂಧಗಳು ತಮಗೆ ಎಂದಿಗೂ ಸರಿಹೊಂದುವುದಿಲ್ಲ ಎಂದು ಶಹನಾ ಹೇಳಿದ್ದಾರೆ. ಏಕೆಂದರೆ ಅವರು ಪ್ರೀತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎರಡನ್ನೂ ಸಮಾನವಾಗಿ ನಂಬುತ್ತಾರೆ. ಈ ಹಿಂದೆ ನಟ ಮಿಲಿಂದ್ ಸೋಮನ್ ಜೊತೆಗಿನ ಬ್ರೇಕಪ್ ನೆನಪಿಸಿಕೊಂಡ ಅವರು, ಆ ಬಳಿಕ ತಮಗೆ ಸಾಂಪ್ರದಾಯಿಕ ಸಂಬಂಧದ ಸೂತ್ರಗಳು ಅರ್ಥಹೀನ ಎನಿಸಿದವು ಎಂದಿದ್ದಾರೆ. ತದನಂತರ ತಾವು ರೆಸ್ಟೋರೆಂಟ್ ಉದ್ಯಮಿ ಮೌರೊ ಗಾಜಿ ಅವರನ್ನು ಭೇಟಿಯಾದಾಗ, ಯಾವುದೇ ಕಟ್ಟುನಿಟ್ಟಾದ ನಿಯಮಗಳು ಅಥವಾ ಲೇಬಲ್‌ಗಳಿಲ್ಲದ ಮುಕ್ತ ಸಂಬಂಧವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.

ತಮ್ಮ ಮುಕ್ತ ಸಂಬಂಧದ ಅರ್ಥವನ್ನು ವಿವರಿಸಿದ ನಟಿ, ‘ಇದರರ್ಥ ನಮ್ಮ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕವಾದ ಸಂವಹನವನ್ನು ಹೊಂದುವುದು. ಸದ್ಯಕ್ಕೆ ನನ್ನ ಜೀವನದಲ್ಲಿ ಒಬ್ಬನೇ ಪ್ರಮುಖ ಸಂಗಾತಿ ಅಂತ ಯಾರೂ ಇಲ್ಲ. ನನ್ನೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ ಹಲವು ಜನರಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಸಾಮಾನ್ಯ ಅಲ್ಲ. ಪ್ರತಿಯೊಂದು ಸಂಬಂಧವೂ ನನಗೆ ಮುಖ್ಯವಾದದ್ದು’ ಎಂದಿದ್ದಾರೆ.

‘ನಾವು ಹೇಗೆ ಹಲವು ಸ್ನೇಹಿತರನ್ನು ಹೊಂದಿರುತ್ತೇವೆಯೋ ಮತ್ತು ಪ್ರತಿಯೊಬ್ಬ ಸ್ನೇಹಿತನೊಂದಿಗೂ ವಿಭಿನ್ನ ಒಡನಾಟ ಇರುತ್ತದೆಯೋ ಇದೂ ಹಾಗೆಯೇ. ನನಗೆ ಈ ಹಂತದಲ್ಲಿ ಮುಕ್ತತೆ ಎಂದರೆ ಯಾರೊಂದಿಗೂ ನಿರ್ದಿಷ್ಟವಾದ ಗಟ್ಟಿ ಪಾಲುದಾರಿಕೆ ಇಲ್ಲದಿರುವುದು. ಆದರೆ ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ಒಂದು ನಿರ್ದಿಷ್ಟ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಅನುಮಾನ

‘ಇದರ ಮೂಲ ಸಿದ್ಧಾಂತ ಸರಳ: ಪ್ರೀತಿ ಮತ್ತು ಸ್ನೇಹ. ನನ್ನಲ್ಲಿ ನೀಡಲು ಅಪಾರವಾದ ಪ್ರೀತಿ ಇರುವಾಗ, ನಾನು ಅದನ್ನು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಏಕೆ ಸೀಮಿತಗೊಳಿಸಬೇಕು?’ ಎಂದು ಶಹನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಜೀವನದಲ್ಲಿ ಯಾವುದೂ ರಹಸ್ಯವಾಗಿಲ್ಲ ಮತ್ತು ತಾವು ಇತರ ಸಂಗಾತಿಗಳೊಂದಿಗೆ ಆತ್ಮೀಯವಾಗಿರುವುದರ ಬಗ್ಗೆ ತಮ್ಮ ಎಲ್ಲ ಪಾರ್ಟ್‌ನರ್‌ಗಳಿಗೂ ತಿಳಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us