AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್‌ನಲ್ಲಿ ಲಿಂಗ ತಾರತಮ್ಯ: ಸಂಭಾವನೆ ವಿಚಾರದಲ್ಲಿ ಕೃತಿ ಸನನ್ ಬೇಸರ

ಎಲ್ಲ ಭಾಷೆಯ ಚಿತ್ರರಂಗದಲ್ಲೂ ನಟಿಯರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಈ ಬಗ್ಗೆ ಕೃತಿ ಸನನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀರೋಗಳಿಗೆ ಹೋಲಿಸಿದರೆ ನಟಿಯರ ಸಂಭಾವನೆ ಕಡಿಮೆ ಇರುತ್ತದೆ. ಈ ಮೊದಲು ಕೂಡ ಹಲವು ನಟಿಯರು ಲಿಂಗ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ್ದರು.

ಬಾಲಿವುಡ್‌ನಲ್ಲಿ ಲಿಂಗ ತಾರತಮ್ಯ: ಸಂಭಾವನೆ ವಿಚಾರದಲ್ಲಿ ಕೃತಿ ಸನನ್ ಬೇಸರ
Kriti Sanon
ಮದನ್​ ಕುಮಾರ್​
|

Updated on: May 10, 2026 | 9:23 AM

Share

ಬಾಲಿವುಡ್‌ನಲ್ಲಿ ನಾಯಕ ನಟರಿಗೆ ಸಿಗುವ ಪ್ರಾಮುಖ್ಯತೆ ಮತ್ತು ಸಂಭಾವನೆ ನಾಯಕಿಯರಿಗೆ ಸಿಗುತ್ತಿಲ್ಲ ಎಂಬ ಚರ್ಚೆ ಇಂದು ನಿನ್ನೆಯದಲ್ಲ. ಈಗ ಇದೇ ವಿಷಯವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನನ್ (Kriti Sanon) ಧ್ವನಿ ಎತ್ತಿದ್ದಾರೆ. ಚಿತ್ರದ ಬಜೆಟ್ ಕಡಿತ ಮಾಡುವ ಸಂದರ್ಭ ಬಂದಾಗ ಮೊದಲು ಕತ್ತರಿ ಬೀಳುವುದು ನಟಿಯರ ಸಂಭಾವನೆಗೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ‘ಜಿಕ್ಯೂ ಇಂಡಿಯಾ’ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದರು.

‘ಚಿತ್ರದ ಬಜೆಟ್‌ನಲ್ಲಿ ಸಿಂಹಪಾಲು ನಾಯಕ ನಟರಿಗೆ ಹೋಗುತ್ತದೆ. ಆದರೆ ನಿರ್ಮಾಪಕರು ಎಲ್ಲಾದರೂ ಹಣ ಉಳಿಸಬೇಕು ಎಂದುಕೊಂಡರೆ, ಅವರು ಮೊದಲು ಸಂಧಾನ ಮಾಡುವುದು ನಾಯಕಿಯರ ಸಂಭಾವನೆಯಲ್ಲಿ’ ಎಂದು ಕೃತಿ ಸನನ್ ಅವರು ನೇರವಾಗಿ ಹೇಳಿದ್ದಾರೆ. ಈ ಮೊದಲು ಅನೇಕ ನಟಿಯರು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದರು.

ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಕೃತಿ ಸನನ್, ‘ಚಿತ್ರರಂಗದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಆಳವಾಗಿ ಬೇರೂರಿದೆ. ನನ್ನ ಸಹನಟ ನನಗಿಂತ ಸೀನಿಯರ್ ಕೂಡ ಆಗಿರಲಿಲ್ಲ. ಆತ ನನಗಿಂತ ಉತ್ತಮವಾದ ಕಾರನ್ನು ಹೊಂದಿದ್ದ ದಿನಗಳು ನನಗೆ ನೆನಪಿವೆ. ಇಲ್ಲಿ ವಿಷಯ ಕಾರಿನದ್ದಲ್ಲ, ಬದಲಿಗೆ ಸಮಾನ ಗೌರವ ನೀಡುವ ಮನಸ್ಥಿತಿಯದ್ದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟಿಯರನ್ನು ಹೇರ್ ಮತ್ತು ಮೇಕಪ್‌ಗಾಗಿ ನಟರಿಗಿಂತ ಮೊದಲೇ ಸೆಟ್‌ಗೆ ಕರೆಯಲಾಗುತ್ತದೆ. ಆದರೆ ನಟರು ಬಂದ ಮೇಲೆಯೇ ಚಿತ್ರೀಕರಣ ಆರಂಭವಾಗುತ್ತದೆ. ನಟರು ಕಾಯಬಾರದು ಎಂಬ ಕಾರಣಕ್ಕೆ ನಟಿಯರನ್ನು ಮೊದಲೇ ಕರೆಸಿ ಕಾಯಿಸಲಾಗುತ್ತದೆ. ಇಂತಹ ಸಣ್ಣ ಪುಟ್ಟ ವಿಷಯಗಳಲ್ಲೂ ಲಿಂಗ ತಾರತಮ್ಯ ಎದ್ದು ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್

ಸದ್ಯ ಕೃತಿ ಸನನ್ ತಮ್ಮದೇ ಆದ ಸ್ಕಿನ್ ಕೇರ್ ಬ್ರಾಂಡ್ ಮತ್ತು ನಿರ್ಮಾಣ ಸಂಸ್ಥೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳು ಅವರ ‘ಕಾಕ್‌ಟೇಲ್ 2’ ಸಿನಿಮಾಗಾಗಿ ಕಾಯುತ್ತಿದ್ದಾರೆ. ಹೋಮಿ ಅದಾಜಾನಿಯಾ ನಿರ್ದೇಶನದ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಜೂನ್ 19ರಂದು ತೆರೆಗೆ ಬರಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More