ಪ್ರೇಕ್ಷಕರ ಆಕ್ರೋಶಕ್ಕೆ ಮಣಿದ ಆದಿಪುರುಷ್ ಚಿತ್ರತಂಡ, ವಿವಾದಿತ ಸಂಭಾಷಣೆ ಬದಲಿಸಲು ನಿರ್ಧಾರ

|

Updated on: Jun 19, 2023 | 8:10 AM

Adipurush: ಆದಿಪುರುಷ್ ಸಿನಿಮಾದ ಸಂಭಾಷಣೆ ಕುರಿತು ವ್ಯಕ್ತವಾಗುತ್ತಿರುವ ಆಕ್ಷೇಪ, ಆಕ್ರೋಶಕ್ಕೆ ಮಣಿದಿರುವ ಚಿತ್ರತಂಡ ಕೆಲವು ದೃಶ್ಯಗಳ ಸಂಭಾಷಣೆಯನ್ನು ಬದಲಾಯಿಸಲು ನಿರ್ಧರಿಸಿದೆ.

ಪ್ರೇಕ್ಷಕರ ಆಕ್ರೋಶಕ್ಕೆ ಮಣಿದ ಆದಿಪುರುಷ್ ಚಿತ್ರತಂಡ, ವಿವಾದಿತ ಸಂಭಾಷಣೆ ಬದಲಿಸಲು ನಿರ್ಧಾರ
ಆದಿಪುರುಷ್
Follow us on

ಆದಿಪುರುಷ್ (Adipurush) ಸಿನಿಮಾದ ವಿರುದ್ಧ ಆಕ್ರೋಶ ದಿನೇ-ದಿನೇ ಹೆಚ್ಚಾಗುತ್ತಿದೆ. ಸಿನಿಮಾದ ಕಳಪೆ ವಿಎಫ್​ಎಕ್ಸ್ (VFX), ಪಾತ್ರಗಳ ವಸ್ತ್ರವಿನ್ಯಾಸ, ಪಾತ್ರಗಳ ವ್ಯಕ್ತಿತ್ವ, ಕೇಶವಿನ್ಯಾಸ ಇನ್ನೂ ಹಲವುಗಳ ಬಗೆಗೆ ಟೀಕೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾದ ಸಂಭಾಷಣೆ ಕುರಿತಂತೆಯೂ ಹಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದು, ಕೀಳು ಅಭಿರುಚಿಯ ಸಂಭಾಷಣೆಯನ್ನು (Dialogue) ಸಿನಿಮಾದಲ್ಲಿ ಬಳಸಲಾಗಿದೆ ಎಂದಿದ್ದಾರೆ. ಇದೀಗ ಚಿತ್ರತಂಡವು ಕೆಲವು ಸಂಭಾಷಣೆಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.

ಸಿನಿಮಾಕ್ಕೆ ಚಿತ್ರಕತೆ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿರುವ ಮನೋಜ್ ಮುಂತಶೀರ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉದ್ದನೆಯ ಪೋಸ್ಟ್ ಹಂಚಿಕೊಂಡಿದ್ದು, ಆದಿಪುರುಷ್ ಸಿನಿಮಾಕ್ಕೆ ಸುಮಾರು ನಾಲ್ಕು ಸಾವಿರ ಸಾಲುಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಒಂದೈದು ಸಾಲುಗಳಿಂದ ಕೆಲವರ ಭಾವನೆಗೆ ಧಕ್ಕೆ ಆಗಿರಬಹುದು. ಆದರೆ ಉಳಿದ ಸಾಲುಗಳಲ್ಲಿ ನಾನು ಪ್ರಭು ಶ್ರೀರಾಮನನ್ನು ವೈಭವೀಕರಿಸಿದ್ದೇನೆ, ಸೀತಾಮಾತೆಯನ್ನು ಆರಾಧಿಸಿದ್ದೇನೆ ಅದಕ್ಕೆ ನನಗೆ ಗೌರವ ಸಿಗಬಹುದು ಎಂದುಕೊಂಡಿದ್ದೆ ಆದರೆ ಸಿಗಲಿಲ್ಲ” ಎಂದಿದ್ದಾರೆ.

ನನ್ನ ಸ್ವಂತ ಅಣ್ಣ-ತಮ್ಮಂದಿರು ನನ್ನ ವಿರುದ್ಧ ಕೀಳು ಅಭಿರುಚಿಯ ಪದಗಳನ್ನು ಬಳಸುತ್ತಿದ್ದಾರೆ. ಯಾರಿಗಾಗಿ ನಾನು ಕಾರ್ಯಕ್ರಮಗಳಿಗೆ ಹೋಗಿ ಕವನಗಳನ್ನು ಓದಿದ್ದೆನೊ ಅವರೂ ಸಹ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಒಮ್ಮೆಲೆ ನನ್ನ ಸಹೋದರರು ಏಕೆ ಹೀಗಾದರು. ಎಲ್ಲರ ತಾಯಿಯನ್ನೂ ತನ್ನ ತಾಯಿಯಂತೆ ಕಂಡ ಶ್ರೀರಾಮನಿಂದ ಇದನ್ನೇ ಕಲಿತಿರುವುದಾ? ಪ್ರಭು ಶ್ರೀರಾಮ, ತಾಯಿ ಕೌಸಲ್ಯೆಯ ಪಾದದ ಬಳಿ ಕುಳಿತಂತೆಯೇ ಶಬರಿಯ ಕಾಲ ಬಳಿಯೂ ಕುಳಿತಿದ್ದರು” ಎಂದಿದ್ದಾರೆ.

ಇದನ್ನೂ ಓದಿ: PVR and Adipurush: ಆದಿಪುರುಷ್ ಎಫೆಕ್ಟ್; ಷೇರುಪೇಟೆಯಲ್ಲಿ ಮಕಾಡೆ ಬಿದ್ದ ಪಿವಿಆರ್ ಐನಾಕ್ಸ್; ಕೆಟ್ಟ ವಿಮರ್ಶೆಯ ಮಧ್ಯೆಯೂ ಪ್ರಭಾಸ್ ನಟನೆಯ ಸಿನಿಮಾ ಭರ್ಜರಿ ಓಟ

”ಮೂರು ಗಂಟೆಯ ಸಿನಿಮಾದಲ್ಲಿ, ನಿಮ್ಮ ಕಲ್ಪನೆಗೆ ಒಗ್ಗದ ಮೂರು ನಿಮಿಷದ ಸನ್ನಿವೇಶದಲ್ಲಿ ನಾನು ಬರೆದಿರಬಹುದು. ಹಾಗೆಂದ ಮಾತ್ರಕ್ಕೆ ನನ್ನ ಮೇಲೆ ಇಷ್ಟು ವಿಷ ಕಾರುವುದೇ? ಸಿನಿಮಾದ ಶಿವೋಹಂ ಹಾಡು ಕೇಳಿಲ್ಲವೆ? ಜೈ ಶ್ರೀರಾಮ್, ರಾಮ್ ಸಿಯಾರಾಮ್ ಹಾಡು ಕೇಳಿಲ್ಲವೆ ಅದನ್ನು ಬರೆದಿರುವುದು ನಾನೇ. ಅದು ಮಾತ್ರವೇ ಅಲ್ಲ. ಥೇರಿ ಮಿಟ್ಟಿ ಮೇ ಮಿಲ್ ಜಾವಾ, ದೇಶ್ ಮೇರೆ ಹಾಡು ಬರೆದಿರುವುದು ಸಹ ನಾನೇ. ನಿಮ್ಮ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ನಾವು ಸನಾತನ ಧರ್ಮದ ಸೇವೆಗೆಂದು ಆದಿಪುರುಷ್ ಮಾಡಿದ್ದೇವೆ. ನಾವುಗಳೇ ಹೀಗೆ ಒಬ್ಬರ ಎದುರು ಒಬ್ಬರು ನಿಂತರೆ ಸನಾತನ ಉಳಿಯುವುದಿಲ್ಲ” ಎಂದಿದ್ದಾರೆ.

”ನಿಮ್ಮ ಅಭಿಪ್ರಾಯ, ಮನ್ನಣೆಗಿಂತಲೂ ಮಿಗಿಲಾದದ್ದು ಯಾವುದೂ ಇಲ್ಲ ಹಾಗಾಗಿ ಈ ಪೋಸ್ಟ್ ಹಂಚಿಕೊಂಡಿದ್ದೇನೆ. ಈಗ ಆಕ್ಷೇಪಣೆ ಎತ್ತಿರುವ ಸಂಭಾಷಣೆಗಳ ಪರವಾಗಿ ನಾನು ವಾದ ಮಂಡಿಸಬಲ್ಲೆ. ಆದರೆ ಬೇಡ, ಅದು ನಿಮ್ಮ ಬೇಸರವನ್ನು ಕಡಿಮೆ ಮಾಡಲಾರದೇನೋ. ಯಾವ ಸಂಭಾಷಣೆಗಳ ಬಗ್ಗೆ ಆಕ್ಷೇಪಣೆ ಇದೆಯೋ ಆ ಸಂಭಾಷಣೆಗಳನ್ನು ಬದಲಾಯಿಸಲು ನಾನೂ, ನಮ್ಮ ನಿರ್ಮಾಪಕ-ನಿರ್ದೇಶಕರು ನಿರ್ಧರಿಸಿದ್ದೇವೆ. ಆ ಸಂಭಾಷಣೆಗಳು ಈ ವಾರದ ಬಳಿಕ ಸಿನಿಮಾಕ್ಕೆ ಸೇರಿಸುತ್ತೇವೆ” ಎಂದಿದ್ದಾರೆ.

ಆದಿಪುರುಷ್ ಸಿನಿಮಾದಲ್ಲಿ ಹನುಮಂತ ಹೇಳುವ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಬೀದಿ ರೌಡಿ ಹೇಳುವ ಡೈಲಾಗ್​ನಂತೆ ಆ ಸಂಭಾಷಣೆ ಇದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವು ಕಡೆಗಳಲ್ಲಿ ಹಿಂದಿ ಅಲ್ಲದ ಪಾರ್ಸಿ ಪದಗಳ ಬಳಕೆಯೂ ಇದೆ ಎಂದು ಕೆಲವರು ಎತ್ತಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ