‘ಧುರಂಧರ್’ ನಿರ್ದೇಶಕನ ಪತ್ನಿ ಯಾಮಿ ಗೌತಮ್​ಗೆ ರಾಷ್ಟ್ರ ಪ್ರಶಸ್ತಿ: ಖುಷಿ ಹಂಚಿಕೊಂಡ ನಟಿ

‘ಧುರಂಧರ್’ ಖ್ಯಾತಿಯ ನಿರ್ದೇಶಕ ಆದಿತ್ಯ ಧರ್ ಅವರು ‘ಆರ್ಟಿಕಲ್ 370’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಅವರ ಪತ್ನಿ ಯಾಮಿ ಗೌತಮ್ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ‘72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು’ ಘೋಷಣೆ ಆದ ಬಳಿಕ ಯಾಮಿ ಗೌತಮ್ ಅವರು ತಮ್ಮ ಖುಷಿ ಹಂಚಿಕೊಂಡಿದ್ದಾರೆ.

‘ಧುರಂಧರ್’ ನಿರ್ದೇಶಕನ ಪತ್ನಿ ಯಾಮಿ ಗೌತಮ್​ಗೆ ರಾಷ್ಟ್ರ ಪ್ರಶಸ್ತಿ: ಖುಷಿ ಹಂಚಿಕೊಂಡ ನಟಿ
Yami Gautam

Updated on: Jul 19, 2026 | 7:45 AM

ಮುಖ್ಯಾಂಶಗಳು

  • 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಆರ್ಟಿಕಲ್ 370’ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ.
  • ಈ ಸಿನಿಮಾದಲ್ಲಿ ಅಭಿನಯಿಸಿದ ನಟಿ ಯಾಮಿ ಗೌತಮ್‌ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.
  • ಚಿತ್ರರಂಗದಲ್ಲಿನ 14 ವರ್ಷಗಳ ಕನಸು ನನಸಾದ ಬಗ್ಗೆ ಪ್ರತಿಕ್ರಿಯೆ ಹಂಚಿಕೊಂಡ ಯಾಮಿ ಗೌತಮ್.

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಪರಿಗಣಿಸಲಾಗುವ 72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು (72nd National Film Awards) ಜುಲೈ 18ರಂದು ಪ್ರಕಟಗೊಂಡಿದ್ದು, ಬಾಲಿವುಡ್‌ನ ಯಶಸ್ವಿ ಸಿನಿಮಾ ‘ಆರ್ಟಿಕಲ್ 370’ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಈ ಚಿತ್ರದಲ್ಲಿನ ನಟನೆಗಾಗಿ ನಟಿ ಯಾಮಿ ಗೌತಮ್  ‘ಅತ್ಯುತ್ತಮ ನಟಿ’ (Best Actor – Female) ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಬದುಕಿನ ಈ ಬಹುದೊಡ್ಡ ಸಾಧನೆಯ ಕುರಿತು ನಟಿ ಯಾಮಿ ಗೌತಮ್ (Yami Gautam) ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

‘ಪ್ರತಿಯೊಂದು ಪ್ರಯಾಣದಲ್ಲೂ ನಾವು ಯಾಕೆ ಸುಲಭವಾಗಿ ಸೋಲೊಪ್ಪಿಕೊಳ್ಳಬಾರದು ಎಂಬುದನ್ನು ನೆನಪಿಸುವ ಒಂದು ಕ್ಷಣ ಬಂದೇ ಬರುತ್ತದೆ. ಇಂದು ನನ್ನ ಪಾಲಿಗೆ ಅಂತಹದ್ದೇ ಒಂದು ಅದ್ಭುತ ಕ್ಷಣ. ‘ಆರ್ಟಿಕಲ್ 370’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಮತ್ತು ನಾನು ಸದಾ ನೆನಪಿನಲ್ಲಿಡುವ ಕ್ಷಣವಾಗಿದೆ’ ಎಂದು ಯಾಮಿ ತಮ್ಮ ಪೋಸ್ಟ್ ಆರಂಭಿಸಿದ್ದಾರೆ.

‘ಇದು ನನ್ನ ಹಲವು ವರ್ಷಗಳ ಕನಸು’

‘ಕಳೆದ 14 ವರ್ಷಗಳಿಂದ ನಾನು ಕೇವಲ ನನ್ನ ಕಲೆಗೆ ಪ್ರಾಮಾಣಿಕವಾಗಿರಲು ಪ್ರಯತ್ನಿಸಿದ್ದೇನೆ. ಕಠಿಣ ಪರಿಶ್ರಮ ಮತ್ತು ನನ್ನ ನಟನೆಯೇ ಮಾತನಾಡಲಿ ಎಂದು ಕಾಯುತ್ತಿದ್ದೆ. ಈ ಗೌರವವು ನನ್ನ ಭರವಸೆ, ಪರಿಶ್ರಮ, ಸ್ಥಿತಿಸ್ಥಾಪಕತ್ವ ಮತ್ತು ಚಿತ್ರರಂಗದ ಮೇಲಿನ ಅಚಲವಾದ ಪ್ರೀತಿಯ ಫಲವಾಗಿದೆ. ಇದು ಹಲವು ವರ್ಷಗಳಿಂದ ನನ್ನ ಹೃದಯದಲ್ಲಿ ಹೊತ್ತಿದ್ದ ಕನಸು. ಇಂದು ಅತ್ಯಂತ ಕೃತಜ್ಞತೆ ಮತ್ತು ನಮ್ರತೆಯಿಂದ ಇದನ್ನು ಸ್ವೀಕರಿಸುತ್ತಿದ್ದೇನೆ’ ಎಂದು ಯಾಮಿ ಗೌತಮ್ ಹೇಳಿದ್ದಾರೆ.

‘ಇದು ಕೇವಲ ಒಂದು ಸಿನಿಮಾವಲ್ಲ’

‘ಆರ್ಟಿಕಲ್ 370 ನನಗೆ ಕೇವಲ ಒಂದು ಸಿನಿಮಾ ಆಗಿರಲಿಲ್ಲ. ಇದು ನಾನು ಆಳವಾಗಿ ನಂಬಿದ ಕಥೆಯಾಗಿತ್ತು. ಅದರಲ್ಲೂ ಇದು ನಮ್ಮದೇ ಸ್ವಂತ ಹೋಮ್ ಪ್ರೊಡಕ್ಷನ್ ಚಿತ್ರವಾಗಿರುವುದರಿಂದ ಈ ಪ್ರಶಸ್ತಿ ನನಗೆ ಇನ್ನಷ್ಟು ಭಾವುಕ ಮತ್ತು ವೈಯಕ್ತಿಕವಾಗಿದೆ. ಚಿತ್ರೀಕರಣದ ದಿನಗಳಲ್ಲಿ ಎದುರಾದ ಪ್ರತಿಯೊಂದು ಸವಾಲು ಮತ್ತು ಸಂಭಾಷಣೆಗಳ ಹಿಂದೆ ಪ್ರಾಮಾಣಿಕತೆಯಿಂದ ಕಥೆ ಹೇಳುವ ಒಂದೇ ಉದ್ದೇಶವಿತ್ತು’ ಎಂದು ಯಾಮಿ ಗೌತಮ್ ಅವರು ಬರೆದಿದ್ದಾರೆ.

ಧನ್ಯವಾದ ಅರ್ಪಿಸಿದ ಯಾಮಿ ಗೌತಮ್:

‘ಗೌರವಾನ್ವಿತ ಜ್ಯೂರಿ ಸದಸ್ಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ನಮ್ಮ ನಿರ್ದೇಶಕರು, ತಾರಾಗಣ, ತಾಂತ್ರಿಕ ತಂಡ ಮತ್ತು ಆರ್ಟಿಕಲ್ 370 ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿದ ಪ್ರೇಕ್ಷಕ ಮಹಾಪ್ರಭುಗಳಿಗೆ ನನ್ನ ನಮನಗಳು. ಅರ್ಥಪೂರ್ಣ ಕಥೆಗಳು ಯಾವಾಗಲೂ ಜನರ ಹೃದಯವನ್ನು ತಲುಪುತ್ತವೆ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ. ನನ್ನ ಕಷ್ಟ-ಸುಖಗಳೆರಡರಲ್ಲೂ ಜೊತೆಯಾಗಿ ನಿಂತ ನನ್ನ ಕುಟುಂಬ, ನನ್ನ ತಂಡ ಮತ್ತು ಹಿತೈಷಿಗಳಿಗೆ ಧನ್ಯವಾದಗಳು’ ಎಂದು ಯಾಮಿ ಗೌತಮ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚರ್ಮದ ಕಾಯಿಲೆ ಬಗ್ಗೆ ಹೇಳಿಕೊಂಡು ನಿರಾಳ ಆದ ನಟಿ ಯಾಮಿ ಗೌತಮ್​; ಅವರಿಗಿರುವ ಸಮಸ್ಯೆ ಏನು?

ಕನಸು ಕಾಣುವವರಿಗೆ ಸ್ಪೂರ್ತಿಯ ಮಾತುಗಳನ್ನಾಡಿದ ಯಾಮಿ, ‘ಈ ಪ್ರಶಸ್ತಿ ನನ್ನ ಕನಸಿನ ಅಂತ್ಯವಲ್ಲ, ಬದಲಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಯ ಆರಂಭ. ಇನ್ನು ಮುಂದೆ ಮತ್ತಷ್ಟು ಬೆಳೆಯಲು, ರಿಸ್ಕ್ ತೆಗೆದುಕೊಳ್ಳಲು ಮತ್ತು ಮೌಲ್ಯಯುತವಾದ ಕಥೆಗಳನ್ನು ಹೇಳಲು ಇದು ಪ್ರೇರಣೆ. ನಮ್ಮಲ್ಲಿ ಛಲವಿದ್ದಾಗ ಕನಸುಗಳು ಖಂಡಿತ ನನಸಾಗುತ್ತವೆ. ತಮ್ಮ ಯಶಸ್ಸಿನ ಕ್ಷಣಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಕನಸುಗಾರನಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us