ನಟಿ ಕಂಗನಾ ರಣಾವತ್ (Kangana Ranaut) ನಟನೆಯ ‘ಧಾಕಡ್’ ಸಿನಿಮಾ (Dhaakad Movie) ಬಾಕ್ಸ್ ಆಫೀಸ್ನಲ್ಲಿ ಕೆಲವೇ ಕೆಲವು ಕೋಟಿ ಕಲೆಕ್ಷನ್ ಮಾಡಿ ಆಟ ಮುಗಿಸಿದೆ. ಲೇಡಿ ಸೂಪರ್ ಸ್ಟಾರ್ ರೀತಿ ಬಿಂಬಿಸಿಕೊಳ್ಳುತ್ತಿದ್ದ ಕಂಗನಾಗೆ ಈ ಚಿತ್ರದಿಂದ ತೀವ್ರಮುಖಭಂಗ ಆಗಿದೆ. ಹಾಗಂತ ಕಂಗನಾ ಸುಮ್ಮನೆ ಕೂತಿಲ್ಲ. ತಮ್ಮ ತಂಟೆಗೆ ಬಂದವರಿಗೆ, ಸಿನಿಮಾ ಸೋತಿದೆ ಎಂದವರಿಗೆ ತಿರುಗೇಟು ನೀಡುತ್ತಿದ್ದಾರೆ. ‘ಧಾಕಡ್’ ಸೋಲಿನ ನಂತರದಲ್ಲಿ ಅವರಿಗೆ ಟಾರ್ಚರ್ ಶುರುವಾಗಿದೆ. ಹೆಜ್ಜೆಹೆಜ್ಜೆಗೂ ಈ ಸೋಲಿನ ಬಗೆಗಿನ ಆರ್ಟಿಕಲ್ ಕಾಣಿಸುತ್ತಿದೆ. ಈ ಬಗ್ಗೆ ಕಂಗನಾ ಮೌನ ಮುರಿದಿದ್ದಾರೆ.
‘ಧಾಕಡ್’ ಸಿನಿಮಾದ ಬಜೆಟ್ 100 ಕೋಟಿ ಸಮೀಪದಲ್ಲಿದೆ. ಆದರೆ, ಈ ಚಿತ್ರ ಕಲೆಕ್ಷನ್ ಮಾಡಿದ್ದು ಕೇವಲ 2.58 ಕೋಟಿ ರೂಪಾಯಿ. ಒಟಿಟಿ ಹಕ್ಕು, ಟಿವಿ ಹಕ್ಕು ಎಲ್ಲವೂ ಸೇರಿದರೂ ನಿರ್ಮಾಪಕರಿಗೆ 70 ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ ಎನ್ನುವ ವರದಿಗಳು ಬಿತ್ತರ ಆಗುತ್ತಿವೆ. ಇದೆಲ್ಲವೂ ಕಂಗನಾ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರು ಉಳಿದ ಚಿತ್ರಗಳ ಬಗ್ಗೆ ಟೀಕೆ ಮಾಡಿ ತೃಪ್ತಿಪಟ್ಟುಕೊಂಡಿದ್ದಾರೆ.
ರಣವೀರ್ ಸಿಂಗ್ ನಟನೆಯ ‘83’, ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’, ವರುಣ್ ಧವನ್ ಅಭಿನಯದ ‘ಜುಗ್ಜುಗ್ ಜಿಯೋ’ ಸಾಧಾರಣ ಕಲೆಕ್ಷನ್ ಮಾಡಿದೆ. ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರ ಹೀನಾಯ ಸೋಲು ಕಂಡಿದೆ. ಈ ಬಗ್ಗೆ ಪ್ರಕಟವಾದ ಆರ್ಟಿಕಲ್ನ ಸ್ಕ್ರೀನ್ಶಾಟ್ ಪೋಸ್ಟ್ ಮಾಡಿರುವ ಕಂಗನಾ ರಣಾವತ್ ಉದ್ದನೆಯ ಸಾಲನ್ನು ಬರೆದುಕೊಂಡಿದ್ದಾರೆ.
‘ಧಾಕಡ್ ಸಿನಿಮಾ ಫ್ಲಾಪ್ ಆಯಿತು ಎನ್ನುವ ಬಗ್ಗೆ ನಿತ್ಯ ಹಲವು ಆರ್ಟಿಕಲ್ ಓದುತ್ತಿದ್ದೇನೆ. ಆದರೆ ಯಾರೊಬ್ಬರೂ ಈ ದೊಡ್ಡ ಡಿಸಾಸ್ಟರ್ಗಳ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕೆ ಏನಾದರೂ ನಿರ್ದಿಷ್ಟ ಕಾರಣವಿದೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ ಕಂಗನಾ.
‘ಧಾಕಡ್’ ಕಂಗನಾ ರಣಾವತ್ ವೃತ್ತಿ ಜೀವನದಲ್ಲೇ ಅತಿ ಕೆಟ್ಟ ಸಿನಿಮಾ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಹಲವು ಆರ್ಟಿಕಲ್ಗಳು ಪ್ರಕಟಗೊಂಡಿವೆ. ಈ ಚಿತ್ರ ಮೊದಲ ಮೂರು ದಿನ ತಲಾ 50 ಲಕ್ಷ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಯಿತು. ಅಲ್ಲಿಯೂ ಜನರು ಇದನ್ನು ಮೆಚ್ಚಿಕೊಂಡಿಲ್ಲ.