ಒಂದೇ ವಾರಕ್ಕೆ ಚಿತ್ರಮಂದಿರದಿಂದ ಸಂಪೂರ್ಣವಾಗಿ ಕಾಲ್ಕಿತ್ತ ಕಂಗನಾ ಸಿನಿಮಾ; ‘ಧಾಕಡ್’ ಗಳಿಸಿದ್ದೆಷ್ಟು?
ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಲಿದೆ ಎಂದು ಕನಸು ಕಂಡಿದ್ದರು ಕಂಗನಾ. ಆದರೆ, ಮೊದಲ ದಿನ ಈ ಚಿತ್ರಕ್ಕೆ ವಿಮರ್ಶಕರಿಂದ ನೆಗೆಟಿವ್ ಕಮೆಂಟ್ಗಳು ಸಿಕ್ಕವು.
ಲೇಡಿ ಸೂಪರ್ಸ್ಟಾರ್ ಎಂದು ಬಿಂಬಿಸಿಕೊಂಡು ಓಡಾಡುತ್ತಿದ್ದ ಕಂಗನಾ ರಣಾವತ್ಗೆ (Kangana Ranaut) ತೀವ್ರ ಮುಖಭಂಗವಾಗಿದೆ. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ‘ಧಾಕಡ್’ ಸಿನಿಮಾ (Dhaakad Movie) ಮಕಾಡೆ ಮಲಗಿದೆ. ಇದರಿಂದ ಅವರು ಸೋಲಿನ ರುಚಿ ಉಂಡಿದ್ದಾರೆ. ಬಾಲಿವುಡ್ ಸಿನಿಮಾಗಳು ಸತತವಾಗಿ ಸೋಲುತ್ತಿರುವ ಬಗ್ಗೆ ಅವರಿಗೆ ಬೇಸರ ಇತ್ತು. ‘ಧಾಕಡ್’ ಮೂಲಕ ಕ್ರಾಂತಿ ಮಾಡುವ ಕನಸು ಕಂಡಿದ್ದರು. ಆದರೆ, ಆ ಕನಸು ನುಚ್ಚು ನೂರಾಗಿದೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ಕಂಗನಾ ವೃತ್ತಿ ಬದುಕಿಗೆ ಇದು ಕಪ್ಪು ಚುಕ್ಕಿ ಆಗಿದೆ.
‘ಧಾಕಡ್’ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾದ ಸಿನಿಮಾ. ದೊಡ್ಡ ಬಜೆಟ್ ಸಿನಿಮಾ ಎಂದರೆ ದೊಡ್ಡ ನಿರೀಕ್ಷೆ ಇರುತ್ತದೆ. ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಲಿದೆ ಎಂದು ಕನಸು ಕಂಡಿದ್ದರು ಕಂಗನಾ. ಆದರೆ, ಮೊದಲ ದಿನ ಈ ಚಿತ್ರಕ್ಕೆ ವಿಮರ್ಶಕರಿಂದ ನೆಗೆಟಿವ್ ಕಮೆಂಟ್ಗಳು ಸಿಕ್ಕವು. ಅನೇಕ ಸಿನಿಮಾಗಳು ಋಣಾತ್ಮಕ ವಿಮರ್ಶೆ ಪಡೆದರೂ ಉತ್ತಮ ಗಳಿಕೆ ಮಾಡಿದ ಉದಾಹರಣೆ ಇದೆ. ಆದರೆ, ‘ಧಾಕಡ್’ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 50 ಲಕ್ಷ ರೂಪಾಯಿ. ಮೊದಲ ವೀಕೆಂಡ್ ಕಲೆಕ್ಷನ್ 1.50 ಕೋಟಿ ರೂಪಾಯಿ ದಾಟಲಿಲ್ಲ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಕೇವಲ 2.15 ಕೋಟಿ ರೂಪಾಯಿ. ಇದರಿಂದ ಕಂಗನಾಗೆ ಹಿನ್ನಡೆ ಉಂಟಾಗಿದೆ.
ಇದನ್ನೂ ಓದಿ: ಕಂಗನಾ ನಟನೆಯ ‘ಧಾಕಡ್’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್
ಇನ್ನು, ಕಂಗನಾಗೆ ಮತ್ತೊಂದು ಆಘಾತ ಎದುರಾಗಿದೆ. ಈ ಚಿತ್ರ ಮೊದಲ ದಿನ 300ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ತೆರೆಕಂಡಿತ್ತು. ಒಂದು ವಾರ ಕಳೆಯುವುದರೊಳಗೆ ಮುನ್ನೂರು ಚಿತ್ರಮಂದಿರಗಳಿಂದ ಸಿನಿಮಾ ಕಾಲ್ಕಿತ್ತಿದೆ. ಹೀಗಾಗಿ, ಎರಡೂವರೆ ಕೋಟಿ ರೂಪಾಯಿ ಒಳಗೆ ಸಿನಿಮಾ ಬಿಸ್ನೆಸ್ ಮುಗಿಸುತ್ತಿದೆ. ಈ ಬಗ್ಗೆ ಕಂಗನಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಂಗನಾ ನಟನೆಯ ‘ಧಾಕಡ್’ ಸಿನಿಮಾ ಜತೆಗೆ ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 2’ ಸಿನಿಮಾ ಬಿಡುಗಡೆ ಆಯಿತು. ಈ ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ಸಮೀಪಿಸಿದೆ. ಅನೇಕ ಚಿತ್ರಮಂದಿರಗಳಲ್ಲಿ ‘ಧಾಕಡ್’ ಬದಲಿಗೆ ‘ಭೂಲ್ ಭುಲಯ್ಯ 2’ ಸಿನಿಮಾ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:37 pm, Fri, 27 May 22