ಸಿನಿಮಾ ಶೂಟಿಂಗ್ನಿಂದ ರೈಲ್ವೆ ಇಲಾಖೆಗೆ 2.48 ಕೋಟಿ ರೂ. ಆದಾಯ; ಅತಿ ಹೆಚ್ಚು ಹಣ ನೀಡಿದ ಚಿತ್ರ ಯಾವುದು?
Indian Railways: ಈ ಸಿನಿಮಾಗೆ ಒಟ್ಟು 50 ದಿನ ಶೂಟಿಂಗ್ ಮಾಡಲಾಗಿದೆ. ಆ ಪೈಕಿ ಅಂದಾಜು 24 ದಿನಗಳ ಕಾಲ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸ್ಥಳಗಳಲ್ಲೇ ಚಿತ್ರೀಕರಣ ನಡೆದಿದೆ.
ಸಿನಿಮಾ ಶೂಟಿಂಗ್ಗೆ ಸಾಕಷ್ಟು ಹಣ ಖರ್ಚಾಗುತ್ತದೆ. ದೊಡ್ಡ ದೊಡ್ಡ ಚಿತ್ರತಂಡಗಳು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ತಮ್ಮ ಸಿನಿಮಾದ ದೃಶ್ಯವನ್ನು ಚಂದವಾಗಿ ಸೆರೆಹಿಡಿಯಲು ಪ್ರಯತ್ನಿಸುತ್ತವೆ. ಕೆಲವು ಪ್ರದೇಶಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲು ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಪಡೆಯಲು ಇಂತಿಷ್ಟ ಹಣ ಕೂಡ ನೀಡಬೇಕು. ಭಾರತೀಯ ರೈಲ್ವೆ (Indian Railways) ಇಲಾಖೆಗೂ ಈ ರೀತಿ ಆದಾಯ ಬರುತ್ತದೆ. ಕಳೆದ ಒಂದು ವರ್ಷದಲ್ಲಿ 2.48 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ ಅತಿ ಹೆಚ್ಚು ಹಣ ನೀಡಿರುವುದು ಆಮಿರ್ ಖಾನ್ (Aamir Khan) ಅವರ ಮಾಜಿ ಪತ್ನಿ ಕಿರಣ್ ರಾವ್ (Kiran Rao) ಅವರ ಸಿನಿಮಾ ತಂಡ ಎಂಬುದು ವಿಶೇಷ. ಈ ಚಿತ್ರತಂಡದವರು ಬರೋಬ್ಬರಿ 1.27 ಕೋಟಿ ರೂಪಾಯಿ ನೀಡಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಶೂಟಿಂಗ್ ಮಾಡಿದ್ದಾರೆ.
ಕಿರಣ್ ರಾವ್ ಅವರು ಈ ಹಿಂದೆ ‘ಧೋಬಿ ಘಾಟ್’ ಸಿನಿಮಾಗೆ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಈಗ ಅವರು ಮತ್ತೊಂದು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಒಂದು ಮೂಲದ ಪ್ರಕಾರ ಈ ಚಿತ್ರಕ್ಕೆ ‘2 ಬ್ರೈಡ್ಸ್’ ಎಂದು ಹೆಸರು ಇಡಲಾಗಿತ್ತು. ಈಗ ‘ಲಾಪತಾ ಲಡ್ಕಿ’ ಅಂತ ಶೀರ್ಷಿಕೆ ಬದಲಾಯಿಸಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ಈ ಬಗ್ಗೆ ಕಿರಣ್ ರಾವ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ‘ಡಿವೋರ್ಸ್ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್ ಖಾನ್
ಈ ಸಿನಿಮಾಗೆ ಒಟ್ಟು 50 ದಿನ ಶೂಟಿಂಗ್ ಮಾಡಲಾಗಿದೆ. ಆ ಪೈಕಿ ಅಂದಾಜು 24 ದಿನಗಳ ಕಾಲ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸ್ಥಳಗಳಲ್ಲೇ ಚಿತ್ರೀಕರಣ ನಡೆದಿದೆ. ಆ ಸ್ಥಳಗಳಲ್ಲಿ ಶೂಟಿಂಗ್ಗೆ ಅನುಮತಿ ಪಡೆಯಲು 1.27 ಕೋಟಿ ರೂಪಾಯಿ ನೀಡಲಾಗಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರು ಹೇಳಿದ್ದಾರೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ರೈಲಿಗೂ ಈ ಚಿತ್ರ ಕಥೆಗೂ ಏನು ಸಂಬಂಧ ಇದೆ ಎಂಬುದನ್ನು ತಿಳಿಯುವ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.
ಅಂದಹಾಗೆ, ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಆ ಚಿತ್ರದ ಜೊತೆಗೆ ಕಿರಣ್ ರಾವ್ ನಿರ್ದೇಶನದ ಹೊಸ ಸಿನಿಮಾದ ಟ್ರೇಲರ್ ಪ್ರದರ್ಶಿಸಲು ಪ್ಲ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಚ್ಛೇದನ ಪಡೆದ ಬಳಿಕವೂ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಕೆಲವು ಪ್ರಾಜೆಕ್ಟ್ಗಳನ್ನು ಜೊತೆಯಾಗಿ ಮಾಡುತ್ತಿದ್ದಾರೆ.
Published On - 11:41 am, Fri, 8 July 22