ಅತಿಯಾದ ಹಾರರ್ ಇದ್ದರೆ ಅಂಥ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯವರು ‘ಎ’ ಪ್ರಮಾಣಪತ್ರ ನೀಡಿದ ಉದಾಹರಣೆ ಸಾಕಷ್ಟಿದೆ. ಅಂಥ ಸಿನಿಮಾಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರೇಕ್ಷಕರು ನೋಡುವಂತಿಲ್ಲ. ಆದರೆ ಈಗ ಅಜಯ್ ದೇವಗನ್ (Ajay Devgn) ನಟನೆಯ ‘ಶೈತಾನ್’ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಅಂದರೆ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೂಡ ಪಾಲಕರ ಮಾರ್ಗದರ್ಶನದಲ್ಲಿ ಈ ಸಿನಿಮಾವನ್ನು ನೋಡಬಹುದು. ಹಾಗಾಗಿ (Shaitaan) ‘ಶೈತಾನ್’ ಸಿನಿಮಾ ನೋಡಲು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.
‘ಶೈತಾನ್’ ಸಿನಿಮಾದಲ್ಲಿ ಆರ್. ಮಾಧವನ್, ಜ್ಯೋತಿಕಾ, ಅಜಯ್ ದೇವಗನ್ ಹಾಗೂ ಜಾನಕಿ ಬೋಡಿವಾಲಾ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಆದ ಬಳಿಕ ದೊಡ್ಡ ಮಟ್ಟದ ಹೈಪ್ ಸೃಷ್ಟಿ ಆಗಿದೆ. ಮಾರ್ಚ್ 8ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನವೇ ಈ ಚಿತ್ರ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳಲಿದೆ ಎಂದು ಬಾಕ್ಸ್ ಆಫೀಸ್ ತಜ್ಞರು ಊಹಿಸಿದ್ದಾರೆ.
ಇದನ್ನೂ ಓದಿ: ನೋಡುಗರಿಗೆ ನಡುಕ ಹುಟ್ಟಿಸಿದ ‘ಶೈತಾನ್’ ಟ್ರೇಲರ್; ಕ್ರೂರಿಯಾದ ಮಾಧವನ್
ಗುಜರಾತಿ ಭಾಷೆಯ ಸೂಪರ್ ಹಿಟ್ ‘ವಶ್’ ಸಿನಿಮಾದ ರಿಮೇಕ್ ಆಗಿ ‘ಶೈತಾನ್’ ಚಿತ್ರ ಮೂಡಿಬಂದಿದೆ. ‘ವಶ್’ ಸಿನಿಮಾಗೆ ‘ಎ’ ಪ್ರಮಾಣಪತ್ರ ನೀಡಲಾಗಿತ್ತು. ಹಾಗಿದ್ದರೂ ಕೂಡ ಆ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಹೀಗಿರುವಾಗ ‘ಯು/ಎ’ ಪ್ರಮಾಣಪತ್ರ ಪಡೆದಿರುವ ‘ಶೈತಾನ್’ ಸಿನಿಮಾ ಖಂಡಿತವಾಗಿಯೂ ಹಿಟ್ ಆಗಲಿದೆ ಎಂದು ನೆಟ್ಟಿಗರು ಭವಿಷ್ಯ ನಡಿಯುತ್ತಿದ್ದಾರೆ. ‘ಶೈತಾನ್’ ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಲಾಗಿದೆ. ಈ ಸಿನಿಮಾದ ಅವಧಿ 132 ನಿಮಿಷ ಇದೆ. ಈ ಚಿತ್ರ ನೋಡಲು ಆಸಕ್ತಿ ಇದೆ ಎಂದು 75 ಸಾವಿಕ್ಕೂ ಅಧಿಕ ಮಂದಿ ಬುಕ್ ಮೈ ಶೋನಲ್ಲಿ ಲೈಕ್ ಬಟನ್ ಕ್ಲಿಕ್ ಮಾಡಿದ್ದಾರೆ.
ವಿಕಾಸ್ ಬಹ್ಲ್ ಅವರ ನಿರ್ದೇಶನದಲ್ಲಿ ‘ಶೈತಾನ್’ ಸಿನಿಮಾ ಸಿದ್ಧವಾಗಿದೆ. ಟ್ರೇಲರ್ ನೋಡಿದವರು ಪಾಸಿಟ್ ಆಗಿ ಕಮೆಂಟ್ ಮಾಡಿದ್ದಾರೆ. ಅಜಯ್ ದೇವಗನ್ ಅವರ ಮಗಳ ಪಾತ್ರದಲ್ಲಿ ನಟಿಸಿರುವ ಜಾನಕಿ ಬೋಡಿವಾಲಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ರಿಲೀಸ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ನಲ್ಲಿ ಈ ಸಿನಿಮಾ ಮುನ್ನಡೆ ಸಾಧಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.