650 ಫೈಟರ್ಗಳಿಗೆ ಸಹಾಯ: ಅಕ್ಷಯ್ ಕುಮಾರ್ ಮಾನವೀಯ ಕಾರ್ಯ
Akshay Kumar movies: ನಟ ಅಕ್ಷಯ್ ಕುಮಾರ್ ತಮ್ಮ ನಟನೆಯ ಜೊತೆಗೆ ತಮ್ಮ ಸಾಮಾಜಿಕ ಕಾರ್ಯದಿಂದಲೂ ಜನಪ್ರಿಯರು. ಹಲವು ಸಾಮಾಜಿಕ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನು ದೇಣಿಗೆಯಾಗಿ ಅಕ್ಷಯ್ ಕುಮಾರ್ ನೀಡಿದ್ದಾರೆ. ಇದೀಗ ಅಕ್ಷಯ್ ಕುಮಾರ್ ತಮ್ಮ ಸಿನಿಮಾ ಕ್ಷೇತ್ರದ ಜನರಿಗಾಗಿಯೇ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ದೂರದೃಷ್ಟಿಯುಳ್ಳ ಮಾನವೀಯ ಕಾರ್ಯವೊಂದನ್ನು ಮಾಡಿದ್ದಾರೆ.

ನಟ ಅಕ್ಷಯ್ ಕುಮಾರ್ (Akshay Kumar) ತಮ್ಮ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯ, ಧಾರ್ಮಿಕ ಕಾರ್ಯಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ದೇಣಿಗೆ ನೀಡುವ ಅಕ್ಷಯ್ ಕುಮಾರ್, ಸಾಮಾಜಿಕ ಕಾರ್ಯಗಳನ್ನೂ ಸಹ ಮಾಡುತ್ತಾರೆ. ಅಕ್ಷಯ್ ಕುಮಾರ್ ಅವರೇ ಹೇಳಿರುವಂತೆ ಅವರಿಗೆ ಹಣ ಬಹಳ ಮುಖ್ಯ, ಹಾಗೆಂದು ಅವರು ಬೇರೆಯವರ ಸಹಾಯಕ್ಕೆ ತಮ್ಮ ಹಣ ಖರ್ಚು ಮಾಡುವುದಿಲ್ಲ ಎಂದಲ್ಲ. ಇದೀಗ ಅಕ್ಷಯ್ ಕುಮಾರ್ ಮಾನವೀಯ ಕಾರ್ಯವೊಂದನ್ನು ಮಾಡಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನೂ ಸಹ ಖರ್ಚು ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ತಮಿಳು ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕಾರು ಸ್ಟಂಟ್ ಮಾಡುವಾಗ ಸ್ಟಂಟ್ಮ್ಯಾನ್ ಮೋಹನ್ರಾಜ್ ನಿಧನ ಹೊಂದಿದ್ದರು. ನಿರ್ದೇಶಕ ಪಾ ರಂಜಿತ್ ಹಾಗೂ ಇತರರ ವಿರುದ್ಧ ಪೊಲೀಸರು ದೂರು ಸಹ ದಾಖಲಿಸಿಕೊಂಡಿದ್ದಾರೆ. ಮೋಹನ್ರಾಜ್ ಚಿತ್ರರಂಗದ ಬಹಳ ಹಿರಿಯ ಸ್ಟಂಟ್ಮ್ಯಾನ್ ಆಗಿದ್ದರು. ಈ ಘಟನೆ ನಡೆದ ಬಳಿಕ ಅಕ್ಷಯ್ ಕುಮಾರ್ ಬರೋಬ್ಬರಿ 650 ಮಂದಿ ಸ್ಟಂಟ್ಮ್ಯಾನ್ಗಳಿಗೆ ಜೀವ ವಿಮೆ ಮಾಡಿಸಿದ್ದಾರೆ.
ಸ್ಟಂಟ್ಮ್ಯಾನ್ಗಳ ಕೆಲಸವೇ ಸಾವಿನೊಂದಿಗೆ ಆಟವಾಡುವುದಾಗಿರುತ್ತದೆ. ಜೀವವನ್ನು ಪಣಕ್ಕೆ ಇಟ್ಟು ಅವರು ಸ್ಟಂಟ್ ಮಾಡುತ್ತಾರೆ. ಅವರ ಕೆಲಸದಲ್ಲಿ ಗಾಯಕಗಳು, ಅಂಗಾಂಗ ವೈಕಲ್ಯ, ಜೀವ ಹಾನಿ ಬಹಳ ಸಾಮಾನ್ಯ. ಇಂಥಹಾ ರಿಸ್ಕಿ ಕೆಲಸ ಮಾಡುವ ಸ್ಟಂಟ್ಮ್ಯಾನ್ಗಳಿಗೆ ಜೀವನ ಭದ್ರತೆ ಇರುವುದಿಲ್ಲ. ಇದೇ ಕಾರಣಕ್ಕೆ ಅಕ್ಷಯ್ ಕುಮಾರ್, ಸ್ಟಂಟ್ಮ್ಯಾನ್ಗಳಗೆ ಜೀವ ವಿಮೆ ಮಾಡಿಸಿದ್ದಾರೆ. ಒಂದೊಮ್ಮೆ ಅವರ ಜೀವನಕ್ಕೆ ಏನಾದರೂ ಆದರೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾದರೆ, ಗಾಯಗೊಂಡರೆ ಉಚಿತ ಚಿಕಿತ್ಸೆ ಪಡೆಯಲೆಂದು ಅಕ್ಷಯ್ ಕುಮಾರ್ ಹೀಗೊಂದು ದೂರದೃಷ್ಟಿಯ ಮಾನವೀಯ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಪೈಪೋಟಿ ನೀಡುತ್ತಾ ಅಕ್ಷಯ್ ಕುಮಾರ್ ಸಿನಿಮಾ?
ಅಕ್ಷಯ್ ಕುಮಾರ್ ಅವರ ಈ ಮಾನವೀಯ ಕಾರ್ಯವನ್ನು ಕೊಂಡಾಡಿರುವ ಸ್ಟಂಟ್ಮ್ಯಾನ್ ಅಸೋಷಿಯೇಷನ್ ಮುಖಂಡ, ಹಿರಿಯ ಸ್ಟಂಟ್ಮ್ಯಾನ್ ವಿಕ್ರಮ್ ಸಿಂಗ್ ದಹಿಯಾ ಮಾತನಾಡಿ, ‘ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಸುಮಾರು 650-700 ಮಂದಿ ಸ್ಟಂಟ್ಮನ್ಗಳಿಗೆ ವಿಮೆ ಮಾಡಿಸಿದ್ದಾರೆ. ಅಕ್ಷಯ್ ಮಾಡಿಸಿರುವ ವಿಮೆಯ ಸಹಾಯದಿಂದ ಸ್ಟಂಟ್ಮ್ಯಾನ್ಗಳು ಶೂಟಿಂಗ್ ವೇಳೆ ಅಥವಾ ಯಾವುದೇ ಸಂದರ್ಭದಲ್ಲಿ ಗಾಯಗೊಂಡರೆ ಅಥವಾ ಅನಾರೋಗ್ಯಕ್ಕೆ ಈಡಾದರೆ 5 ರಿಂದ 5.50 ಲಕ್ಷದ ವರೆಗಿನ ಮೊತ್ತದ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ’ ಎಂದಿದ್ದಾರೆ.
ಅಕ್ಷಯ್ ಕುಮಾರ್ ಈ ಹಿಂದೆಯೂ ಸಹ ಈ ರೀತಿಯ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಸ್ವತಃ ಒಳ್ಳೆಯ ಆಕ್ಷನ್ ನಟ ಆಗಿರುವ ಅಕ್ಷಯ್ ಕುಮಾರ್ ಮೊದಲೆಲ್ಲ ಅವರ ಸ್ಟಂಟ್ಗಳನ್ನು ಅವರೇ ಮಾಡುತ್ತಿದ್ದರು. ಆದರೆ ಈಗ ಸ್ಟಂಟ್ ಮ್ಯಾನ್, ಡ್ಯೂಪ್ಗಳ ಸಹಾಯದೊಂದಿಗೆ ಆಕ್ಷನ್ ದೃಶ್ಯಗಳನ್ನು ಮಾಡುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




