2ನೇ ದಿನ ಚೇತರಿಕೆ ಕಂಡ ‘ಒಎಂಜಿ 2’ ಕಲೆಕ್ಷನ್; ಆದರೂ ಕಷ್ಟದಲ್ಲಿದೆ ಅಕ್ಷಯ್ ಕುಮಾರ್ ಸಿನಿಮಾದ ಭವಿಷ್ಯ
ಮೊದಲ ದಿನ ‘ಒಎಂಜಿ 2’ ಸಿನಿಮಾ ಗಳಿಸಿದ್ದು 10.26 ಕೋಟಿ ರೂಪಾಯಿ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರ ಸಿನಿಮಾಗೆ ಇದು ಸಾಧಾರಣ ಮೊತ್ತ. 2ನೇ ದಿನವಾದ ಶನಿವಾರ (ಆಗಸ್ಟ್ 12) ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ 14.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೂರನೇ ದಿನ ಅಂದಾಜು 18 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರ ಸಿನಿಮಾಗಳ ಬಗ್ಗೆ ಜನರು ಮೊದಲಿನಷ್ಟು ಆಸಕ್ತಿ ತೋರಿಸುತ್ತಿಲ್ಲ. ಒಂದು ಕಾಲದಲ್ಲಿ ಅವರ ಚಿತ್ರಗಳು ರಿಲೀಸ್ ಆದರೆ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದ್ದವು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ಒಎಂಜಿ 2’ (OMG 2) ಸಿನಿಮಾ. ಆಗಸ್ಟ್ 11ರಂದು ಈ ಚಿತ್ರ ತೆರೆಕಂಡಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೆನ್ಸಾರ್ಗೆ ಸಂಬಂಧಿಸಿದ ವಿವಾದದ ಕಾರಣದಿಂದಲೂ ‘ಒಎಂಜಿ 2’ ಸಿನಿಮಾ ಸುದ್ದಿಯಲ್ಲಿತ್ತು. ಹಾಗಿದ್ದರೂ ಕೂಡ ನಿರೀಕ್ಷಿತ ಮಟ್ಟದ ಕಲೆಕ್ಷನ್ (OMG 2 collection) ಆಗಲಿಲ್ಲ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಕೊಂಚ ಚೇತರಿಕೆ ಕಂಡಿದೆ. ಆದರೂ ಕೂಡ ಈ ಸಿನಿಮಾದ ಭವಿಷ್ಯ ಭದ್ರವಾಗಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಮೊದಲ ದಿನ ‘ಒಎಂಜಿ 2’ ಸಿನಿಮಾ ಗಳಿಸಿದ್ದು 10.26 ಕೋಟಿ ರೂಪಾಯಿ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರ ಸಿನಿಮಾಗೆ ಇದು ಸಾಧಾರಣ ಮೊತ್ತ. ಎರಡನೇ ದಿನವಾದ ಶನಿವಾರ (ಆಗಸ್ಟ್ 12) ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ 15.30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೂರನೇ ದಿನ ಭಾನುವಾರ ಆದ್ದರಿಂದ 18 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗಿದ್ದರೂ ಕೂಡ ಇದು ಸಮಾಧಾನಕರ ಕಲೆಕ್ಷನ್ ಅಲ್ಲ. ಯಾಕೆಂದರೆ, ಈ ಚಿತ್ರಕ್ಕೆ ಬೇರೆ ಸಿನಿಮಾಗಳು ಟಫ್ ಸ್ಪರ್ಧೆ ನೀಡುತ್ತಿವೆ.
‘ಒಎಂಜಿ 2’ ಸಿನಿಮಾ ಕಲೆಕ್ಷನ್ ಬಗ್ಗೆ ತರಣ್ ಆದರ್ಶ್ ಟ್ವೀಟ್:
The glowing word of mouth has come into play… #OMG2, as predicted, shows EXCELLENT GROWTH on Day 2… The solid gains at national chains – despite #Gadar2 juggernaut – is a clear indicator that #OMG2 has found acceptance… Fri 10.26 cr, Sat 15.30 cr. Total: ₹ 25.56 cr. #India… pic.twitter.com/AbbMtwIAUw
— taran adarsh (@taran_adarsh) August 13, 2023
ಬಾಲಿವುಡ್ನಲ್ಲಿ ಬಿಡುಗಡೆಯಾದ ಇನ್ನೊಂದು ಸಿನಿಮಾ ‘ಗದರ್ 2’ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಸನ್ನಿ ಡಿಯೋಲ್ ನಟನೆಯ ಆ ಸಿನಿಮಾ 2ನೇ ದಿನಕ್ಕೆ 83 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆ ಸಿನಿಮಾ ಸೆಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ದಕ್ಷಿಣ ಭಾರತದಲ್ಲಿ ‘ಜೈಲರ್’ ಸಿನಿಮಾ ಅಬ್ಬರಿಸುತ್ತಿದೆ. ಕರ್ನಾಟಕದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಅನೇಕ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ಎಲ್ಲ ಸಿನಿಮಾಗಳಿಗೆ ಪೈಪೋಟಿ ನೀಡುವುದು ‘ಒಎಂಜಿ 2’ ಸಿನಿಮಾಗೆ ಕಷ್ಟವಾಗುತ್ತಿದೆ. ಹಾಗಾಗಿ ಈ ಸಿನಿಮಾದ ಭವಿಷ್ಯ ಕಷ್ಟದಲ್ಲಿದೆ. ಸೋಮವಾರದ ಬಳಿಕ ‘ಒಎಂಜಿ 2’ ಕಲೆಕ್ಷನ್ ಗಣನೀಯವಾಗಿ ಕುಸಿದರೂ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ‘ಗದರ್ 2’; ಎರಡೇ ದಿನಕ್ಕೆ 83 ಕೋಟಿ ರೂಪಾಯಿ ಗಳಿಸಿದ ಸನ್ನಿ ಡಿಯೋಲ್ ಸಿನಿಮಾ
‘ಒಎಂಜಿ 2’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮುಂತಾದವರು ನಟಿಸಿದ್ದಾರೆ. ಲೈಂಗಿಕ ಶಿಕ್ಷಣದ ಕುರಿತ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಆ ಕಾರಣದಿಂದ ಈ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಅಂತಿಮವಾಗಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿತು. ಅಂದರೆ, 18 ವರ್ಷ ಮೇಲ್ಪಟ್ಟವರು ಮಾತ್ರ ಈ ಸಿನಿಮಾ ನೋಡಬಹುದು. ಹಾಗಾಗಿ ಫ್ಯಾಮಿಲಿ ಪ್ರೇಕ್ಷಕರು ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬಂದು ‘ಒಎಂಜಿ 2’ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ. ಈ ಚಿತ್ರದ ಕಲೆಕ್ಷನ್ ಕುಸಿಯಲು ಇದೂ ಕೂಡ ಒಂದು ಕಾರಣ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.